ಬೆಂಗಳೂರು: ಕಳೆದ ಕೆಲ ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಎಸ್ ಟಿ ಸೋಮಶೇಖರ್ ಮತ್ತೆ ಕಾಂಗ್ರೆಸ್ ಗೆ ಮರಳಲಿದ್ದಾರೆ ಎಂಬ ಚರ್ಚೆ ಜೋರಾಗಿ ನಡೀತಾ ಇದೆ. ಆ ಚರ್ಚೆಯ ನಡುವೆಯೇ ಸೋಮಶೇಖರ್ ಹಾಗೂ ಸಿಎಂ ಸಿದ್ದರಾಮಯ್ಯ ಭೇಟಿಯ ಫೋಟೋಗಳು ಸಹ ವೈರಲ್ ಆಗಿತ್ತು. ಇದೀಗ ಯಶವಂತಪುರ ಕ್ಷೇತ್ರಕ್ಕೆ ಅನುದಾನದ ಮಳೆಯೇ ಸುರಿದಿದೆ.
ದಾಸರಹಳ್ಳಿ, ಯಲಹಂಕ ಕ್ಷೇತ್ರಗಳಿಗೆ ಕಡಿಮೆ ಅನುದಾನ ನೀಡಲಾಗಿದೆ. ಆದ್ರೆ ಎಸ್ ಟಿ ಸೋಮಶೇಖರ್ ಪ್ರತಿನಿಧಿಸುವ ಕ್ಷೇತ್ರ ಯಶವಂತಪುರಕ್ಕೆ ಬಿಬಿಎಂಪಿ ಕಡೆಯಿಂದ ಭರಪೂರ ಅನುದಾನ ಸಿಕ್ಕಿದೆ. ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗ್ತಾರೆ ಎಂಬ ಚರ್ಚೆಯ ಬೆನ್ನಲ್ಲೇ ಹೀಗೆ ಭರಪೂರ ಅನುದಾನ ಹರಿದು ಬಂದಿರುವುದು, ರಾಜಕಾರಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಬಿಜೆಪಿ ಶಾಸಕ S.T.ಸೋಮಶೇಖರ್ ಪ್ರತಿನಿಧಿಸುವ ಯಶವಂತಪುರ ಕ್ಷೇತ್ರಕ್ಕೆ ಬಿಬಿಎಂಪಿಯಿಂದ ಒಟ್ಟು 7 ಕೋಟಿ 63 ಲಕ್ಷ ರೂ. ಅನುದಾನ ಮಂಜೂರು ಮಾಡಿದೆ. ಹೇರೋಹಳ್ಳಿ ಹಾಗೂ ಕೆಂಗೇರಿ ಭಾಗಕ್ಕೆ ಸೇರಿದಂತೆ ಕುಡಿಯುವ ನೀರಿನ ಯೋಜನೆಗಾಗಿ 7.63 ಕೋಟಿ ಅನುದಾನ ನೀಡಲಾಗಿದೆ. ನೀರು ಪೂರೈಸುವ ಟ್ಯಾಂಕರ್‌ಗಳಿಗೆ 1 ಕೋಟಿ 63 ಲಕ್ಷ ರೂ. ಮೀಸಲಿಡಲಾಗಿದೆ. ಹೊಸದಾಗಿ ಬೋರ್ವೆಲ್ ಕೊರೆಸಲು 4 ಕೋಟಿ ರೂಪಾಯಿ ಮೀಸಲು ಹಾಗೂ ನಿರ್ವಹಣೆ ಮಾಡಲು 2 ಕೋಟಿ ರೂಪಾಯಿ ಅನುದಾನ ಮೀಸಲು ಇಡಲಾಗಿದೆ. ಇತ್ತಿಚೆಗಷ್ಟೇ ಎಸ್ ಟಿ ಸೋಮಶೇಖರ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ತಮ್ಮ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿದ್ದರು. ಅನುದಾನ ನೀಡುವಂತೆಯೂ ಕೇಳಿದ್ದರು. ಇದರ ಬೆನ್ನಲ್ಲೇ ಅನುದಾನ ಬಿಡುಗಡೆಯಾಗಿದ್ದು, ಇದೇನು ಕಾಂಗ್ರೆಸ್ ಗೆ ಸೆಳೆಯುವ ತಂತ್ರವಾ ಎಂಬ ಚರ್ಚೆ ಹುಟ್ಟುಹಾಕಿದೆ.