ಸುದ್ದಿಒನ್, ಚಿತ್ರದುರ್ಗ, (ಜೂ.01) : ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವ ಹೊಣೆಗಾರಿಕೆ ಇರುವ ಸರ್ಕಾರ ಕೂಡಲೇ ನೈತಿಕೆ ಹೊಣೆ ಹೊತ್ತು, ಸಾರ್ವಜನಿಕವಾಗಿ ಸಂಚರಿಸುವ ಸರ್ಕಾರಿ ಬಸ್ಸುಗಳ ಮೇಲೆ ಪ್ರಚಾರಪಡಿಸುತ್ತಿರುವ ಗುಟ್ಕಾ ಜಾಹೀರಾತನ್ನು ರದ್ದುಪಡಿಸಬೇಕು ಎಂದು ಕನ್ನಡ ರಕ್ಷಣಾ ಮತ್ತು ಸಾಂಸ್ಕøತಿಕ ವೇದಿಕೆ ಅಧ್ಯಕ್ಷ ಕೊರ್ಲಕುಂಟೆ ತಿಪ್ಪೇಸ್ವಾಮಿ ಗುರುವಾರ ಜಿಲ್ಲಾಧಿಕಾರಿ ದಿವ್ಯಪ್ರಭು ಅವರಿಗೆ ಮನವಿ ಸಲ್ಲಿಸಿದ್ದಾರೆ.
ಗುಟ್ಕಾ ಮತ್ತು ತಂಬಾಕು ಮುಕ್ತ ಸಮಾಜ ನಿರ್ಮಾಣ ಮಾಡಲು ಸರ್ಕಾರವೇ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ. ಇದೇ ಸರ್ಕಾರ ಆದಾಯ ತಂದುಕೊಳ್ಳಲು ಗುಟ್ಕಾ ಬಳಸಲು ಪ್ರೇರೇಪಿಸುವ ರೀತಿಯಲ್ಲಿ ಸರ್ಕಾರಿ ಬಸ್ಸುಗಳ ಮೇಲೆ ಜಾಹೀರಾತು ಪ್ರಕಟಿಸಲು ಸರಿಯಲ್ಲ. ಸಾರ್ವಜನಿಕವಾಗಿ ಸಂಚರಿಸುತ್ತಿರುವ ಬಸ್ಸುಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ‘ಗುಟ್ಕಾ ತುಂಬಿದ ವಿಮಲ್ ಪಾಕೆಟ್‍ನೊಂದಿಗೆ ಬಾಯಲ್ಲಿ ಹೇಳಿ ಕೇಸರಿ’ ಎಂಬ ಜಾಹೀರಾತು ಅಪಾಯಕಾರಿಯಾಗಿದೆ.
ಪ್ರತಿ ದಿನ ಸಾವಿರಾರು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಸಂಚರಿಸುವ ಬಸ್ಸುಗಳಲ್ಲಿ ಆರೋಗ್ಯಕ್ಕೆ ಹಾನಿಕರವಾದ ಪ್ರಕಟಣೆ ಕೂಡಲೇ ತೆರವುಗೊಳಿಸಬೇಕು. ಇದರ ಬದಲಿಗೆ ನಾಡಿನ ನೆಲ, ಜಲ, ಭಾಷೆಗಾಗಿ ಜೀವನ ನಡೆಸಿದ ಹೆಸರಾಂತ ಸಾಹಿತಿಗಳ ರಚನೆಯಾದ ಕೃತಿಗಳ ಹೆಸರು, ಕಲಾವಿದರ ಬದುಕಿನ ಸಂಸ್ಕøತಿ ಮತ್ತು ಪ್ರಾದೇಶಿಕ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಪ್ರಕಟಣೆಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಕೂಡಲೇ ಸರ್ಕಾರಕ್ಕೆ ಪತ್ರ ಬರೆದು ಸರ್ಕಾರದ ನಿರ್ದೇಶನದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಚಟ್ಟೇಕಂಬ ಸಿ.ಜಿ. ತಿಪ್ಪೇಸ್ವಾಮಿ, ಮಂಜುನಾಥ, ರಂಗಸ್ವಾಮಿ ಮತ್ತಿತರರು ಇದ್ದರು.