ಗದಗ : ಹೈಸ್ಕೂಲ್ ಮಕ್ಕಳಿಗೆ ಮೊಹಮ್ಮದ್ ಪೈಗಂಬರ್ ಪ್ರಬಂಧ ಬರೆಯುವುದಕ್ಕೆ ಸ್ಪರ್ಧೆ ನಡೆಸಿದ್ದ ಆರೋಪದ ಮೇಲೆ ಶಾಲೆಯ ಮುಖ್ಯ ಶಿಕ್ಷಕರನ್ನು ಅಮಾನತು ಮಾಡಲಾಗಿದೆ. ಜಿಲ್ಲೆಯ ನಾಗಾವಿ ಗ್ರಾಮದ ಶಾಲೆಯ ಮುಖ್ಯ ಶಿಕ್ಷಕ ಅಬ್ದುಲ್ ಮುನಾಫ್ ಅಮಾನತುಗೊಂಡಿರುವ ಶಿಕ್ಷಕರಾಗಿದ್ದಾರೆ.
ಅಬ್ದುಲ್ ಮುನಾಫ್ ವಿರುದ್ಧ ಶ್ರೀರಾಮಸೇನೆ ಕಾರ್ಯಕರ್ತರು ಕೂಡ ಪ್ರತಿಭಟನೆ ನಡೆಸಿದ್ದರು. ಶಾಲೆಯಲ್ಲಿ ಇಸ್ಲಾಮಿಕರಣ ನಡೆಯುತ್ತಿದೆ. ಮಕ್ಕಳ ಮನಸ್ಸಲ್ಲಿ ಕೋಮು ದ್ವೇಷ ಸೃಷ್ಟಿ ಮಾಡುವಂತ ಕೆಲಸ ನಡೆಯುತ್ತಿದೆ. ಆ ಶಿಕ್ಷಕನನ್ನು ಅಮಾನತು ಮಾಡುವಂತೆ ಒತ್ತಾಯ ಕೇಳಿ ಬಂದಿದೆ. ಇದೀಗ ಮುಖ್ಯ ಶಿಕ್ಷಕ ಅಬ್ದುಲ್ ಮುನಾಫ್ ಅವರನ್ನು ಅಮಾನತು ಮಾಡಿ, ಆದೇಶ ಹೊರಡಿಸಿದೆ.
ಆ ಶಾಲೆಯಲ್ಲಿ ಒಟ್ಟು 43 ವಿದ್ಯಾರ್ಥಿಗಳಿದ್ದಾರೆ. ಆ ಎಲ್ಲಾ ಮಕ್ಕಳಿಗೂ ಮಹಮ್ಮದ ಎಲ್ಲರಿಗಾಗಿ ಹಾಗೂ ಅಂತಿಮ ಪ್ರವಾದಿ ಮಹಮ್ಮದ ಎಂಬ ಪುಸ್ತಕವನ್ನು ವಿತರಿಸಿದ್ದರಂತೆ. ಬಳಿಕ ಪೈಗಂಬರ ಬಗ್ಗೆ ಪ್ರಬಂಧ ಬರೆಯಲು ಹೇಳಿದ್ದರಂತೆ. ಬಹುಮಾನ ನೀಡುವುದಾಗಿ ಮಕ್ಕಳಿಗೆ ಆಮಿಷವೊಡ್ಡಿದ್ದರಂತೆ. ಈ ಎಲ್ಲಾ ವಿಚಾರ ಪ್ರಾಥಮಿಕ ತನಿಖೆಯಲ್ಲಿ ಹೊರಬಿದ್ದಿದ್ದು, ಶಿಕ್ಷಕರನ್ನು ಅಮಾನತು ಮಾಡಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತ ಸಿದ್ರಾಮಪ್ಪ ಎಸ್ ಬಿರಾದಾರ ಆದೇಶ ಹೊರಡಿಸಿದ್ದಾರೆ.