10 ವರ್ಷಗಳಿಗೊಮ್ಮೆ ಆಧಾರ್ ದಾಖಲೆಗಳನ್ನು ನವೀಕರಿಸಿ : ಕೇಂದ್ರ ಸರ್ಕಾರದ ಅಧಿಸೂಚನೆ

ಸುದ್ದಿಒನ್ ವೆಬ್ ಡೆಸ್ಕ್

ನವದೆಹಲಿ: ಕೇಂದ್ರ ಸರ್ಕಾರ ಆಧಾರ್ ನಿಯಮಗಳನ್ನು ಪರಿಷ್ಕರಿಸಿದೆ. ದಾಖಲಾತಿ ದಿನಾಂಕದಿಂದ ಹತ್ತು ವರ್ಷಗಳು ಪೂರ್ಣಗೊಂಡ ನಂತರ ಆಧಾರ್ ಸಂಖ್ಯೆ ಹೊಂದಿರುವವರು ಗುರುತಿನ ಮತ್ತು ವಿಳಾಸ ಪರಿಶೀಲನೆಯಂತಹ ದಾಖಲೆಗಳನ್ನು ಒಮ್ಮೆಯಾದರೂ ನವೀಕರಿಸಬೇಕು ಎಂದು ತಿಳಿಸಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಹೊರಡಿಸಿದ ಗೆಜೆಟ್ ಅಧಿಸೂಚನೆಯ ಪ್ರಕಾರ, ನವೀಕರಣವು ಕೇಂದ್ರೀಯ ಗುರುತುಗಳ ಡೇಟಾ ರೆಪೊಸಿಟರಿಯಲ್ಲಿ (ಸಿಐಡಿಆರ್) ಆಧಾರ್-ಸಂಬಂಧಿತ ಮಾಹಿತಿಯ ನಿಖರತೆಯನ್ನು ಖಚಿತಪಡಿಸುತ್ತದೆ.

“ಆಧಾರ್ ಸಂಖ್ಯೆ ಹೊಂದಿರುವವರು, ಆಧಾರ್‌ಗಾಗಿ ದಾಖಲಾತಿ ದಿನಾಂಕದಿಂದ ಪ್ರತಿ 10 ವರ್ಷಗಳು ಪೂರ್ಣಗೊಂಡ ನಂತರ, ಗುರುತಿನ ಪುರಾವೆ (ಪಿಒಐ) ಮತ್ತು ವಿಳಾಸದ ಪುರಾವೆ (ಪಿಒಎ) ದಾಖಲೆಗಳನ್ನು ಸಲ್ಲಿಸುವ ಮೂಲಕ ಆಧಾರ್‌ನಲ್ಲಿ ತಮ್ಮ ದಾಖಲೆಗಳನ್ನು ಒಮ್ಮೆಯಾದರೂ ನವೀಕರಿಸಬಹುದು.

ಕಳೆದ ತಿಂಗಳು, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಹತ್ತು ವರ್ಷಗಳ ಹಿಂದೆ ಆಧಾರ್ ಕಾರ್ಡ್ ಪಡೆದುಕೊಂಡಿರುವ ಮತ್ತು ಇನ್ನೂ ತಮ್ಮ ಗುರುತಿನ ಮತ್ತು ನಿವಾಸದ ಪುರಾವೆಗಳನ್ನು ನವೀಕರಿಸದವರಿಗೆ ತಕ್ಷಣ ಹಾಗೆ ಮಾಡುವಂತೆ ಮನವಿ ಮಾಡಿತು. ನನ್ನ ಆಧಾರ್ ಪೋರ್ಟಲ್, ನನ್ನ ಆಧಾರ್ ಆಪ್ ಅಥವಾ ಆಧಾರ್ ನೋಂದಣಿ ಕೇಂದ್ರಗಳಲ್ಲಿ ದಾಖಲೆಗಳನ್ನು ಸಲ್ಲಿಸುವ ಮೂಲಕ ವಿವರಗಳನ್ನು ನವೀಕರಿಸಬಹುದು ಎಂದು ಅದು ಸೂಚಿಸಿದೆ.

ದೇಶದಲ್ಲಿ ಇದುವರೆಗೆ 134 ಕೋಟಿ ಜನರಿಗೆ ಆಧಾರ್ ಸಂಖ್ಯೆಗಳನ್ನು ನೀಡಲಾಗಿದೆ. ಗುರುತಿನ ಚೀಟಿ ಮತ್ತು ವಿಳಾಸವನ್ನು ಬದಲಾಯಿಸಿದವರು ಸಹ ಸಂಬಂಧಿತ ಪ್ರಮಾಣಪತ್ರಗಳನ್ನು ಸಲ್ಲಿಸಬಹುದು ಮತ್ತು ಆಧಾರ್ ಕಾರ್ಡ್‌ಗಳಲ್ಲಿ ವಿವರಗಳನ್ನು ಬದಲಾಯಿಸಬಹುದು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಲಾಭ ಪಡೆಯಲು ಆಧಾರ್ ಸಂಖ್ಯೆಯನ್ನು ಹೊಂದಿರುವುದು ಅನಿವಾರ್ಯವಾಗಿದೆ.

ಕಳೆದ ವರ್ಷ, ವಿವಿಧ ರೀತಿಯ ಸುಮಾರು 16 ಕೋಟಿ ನವೀಕರಣಗಳು ನಡೆದಿವೆ ಎಂದು ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!