ಹನುಮ ಜಯಂತಿಯ ಹಿನ್ನೆಲೆ ದೇವಾಲಯದಲ್ಲಿ ನೀಡಿದ ಪ್ರಸಾದ ಸೇವಿಸಿ, ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಹೊಸಕೋಟೆ ನಗರದಲ್ಲಿ ನಡೆದಿದೆ. ವಾಂತಿ-ಬೇಧಿಯಿಂದ ಹಲವರು ಆಸ್ಪತ್ರೆಯ ಪಾಲಾಗಿದ್ದಾರೆ. ಈ ಘಟನೆಯಲ್ಲಿ ಸಿದ್ದಲಿಂಗಮ್ಮ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ.
ನಿನ್ನೆ ಹನುಮಜಯಂತಿ ಎಲ್ಲೆಡೆ ಸಂಭ್ರಮದಿಂದ ನಡೆದಿದೆ. ಎಲ್ಲೆಡೆ ದೇವಸ್ಥಾನಗಳಿಗೆ ಅದ್ದೂರಿ ಅಲಂಕಾರ ಮಾಡಿ, ದೇವರಿಗೆ ವಿಶೇಷ ಪೂಜೆ ಮಾಡಿದ್ದಾರೆ. ದೇವಸ್ಥಾನಕ್ಕೆ ಬಂದ ಭಕ್ತರಿಗೆ ಪ್ರಸಾದವನ್ನು ಹಂಚಿದ್ದಾರೆ. ನಿನ್ನೆ ವೆಂಕಟರಮಣಸ್ವಾಮಿ ದೇವಸ್ಥಾನ, ಊರು ಬಾಗಿಲು ಆಂಜನೇಯ ಸ್ವಾಮಿ, ಕೋಟೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಭಕ್ತರು ಭರ್ಜರಿಯಾಗಿ ಸೇರಿದ್ದರು. ಪೂಜೆ ನೆರವೇರಿಸಿ, ದೇವರಿಗೆ ನಮಸ್ಕರಿಸಿ, ದೇವರ ಪ್ರಸಾದವನ್ನು ಸಾವಿರಾರು ಮಂದಿ ಸೇವಿಸಿದ್ದರು.
ದೇವಾಲಯಗಳಲ್ಲಿ ಲಡ್ಡು, ಪಾಯಸ, ಪುಳಿಯೊಗರೆಯನ್ನು ತಯಾರು ಮಾಡಲಾಗಿತ್ತು. ಬಂದ ಭಕ್ತರಿಗೆ ಅದನ್ನೇ ಪ್ರಸಾದವಾಗಿ ನೀಡಲಾಗಿತ್ತು. ಅದನ್ನು ತಿಂದ ಮೇಲೆ ಭಕ್ತರಲ್ಲಿ ವಾಂತಿ, ಬೇಧಿ ಶುರುವಾಗಿದೆ. ಇಂದು ಬೆಳಗ್ಗೆಯೇ ತೀವ್ರ ವಾಂತಿ – ಬೇಧಿ ಕಾಣಿಸಿಕೊಂಡಿದ್ದು, ತಕ್ಷಣ ಅಸ್ವಸ್ಥಗೊಂಡವರನ್ನು ಹತ್ತಿರದ ಆಸ್ಪತ್ರೆಗಳಿಗೆ ಅಡ್ಮಿಟ್ ಮಾಡಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಿದ್ಧಲಿಂಗಮ್ಮ ಸಾವನ್ನಪ್ಪಿದ್ದಾರೆ. ಇನ್ನುಳಿದವರನ್ನು ಕೋಲಾರ, ಹೊಸಕೋಟೆ ಮತ್ತು ಬೆಂಗಳೂರಿನ ಆಸ್ಪತ್ರೆಗಳಿಗೆ ಸೇರಿಸಿ, ಚಿಕಿತ್ಸೆಕೊಡಿಸಲಾಗುತ್ತಿದೆ.