ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 10 : ವೀಕೆಂಡ್ ಬಂತೆಂದರೆ ಸಾಕು ಜನ ಪ್ರವಾಸಕ್ಕೆಂದು ಹೊರಡುವವರೇ ಹೆಚ್ಚು. ಅದರಲ್ಲೂ ಚಿತ್ರದುರ್ಗದ ಕಲ್ಲಿನ ಕೋಟೆ ಅಂದರೆ ಪ್ರವಾಸಿಗರಿಗೆ ವಿಶೇಷವಾದ ಪ್ರೀತಿ ಮತ್ತು ಆಸಕ್ತಿ. ಇಲ್ಲಿನ ಕಲ್ಲು ಬಂಡೆಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಟ್ರೆಕ್ಕಿಂಗ್ ಕ್ರೇಜ್ ಇರುವವರು, ಕೋಟೆ ನೋಡಲು ಇಷ್ಟ ಪಡುವವರು, ಇತಿಹಾಸದ ಕುರುಹುಗಳನ್ನು ನೋಡಲು ಚಿತ್ರದುರ್ಗಕ್ಕೆ ಬರುತ್ತಾರೆ. ಅದೇ ಥರ ಇಂದು ಪ್ರವಾಸಕ್ಕೆಂದು ಬಂದ ತಂಡದಲ್ಲಿ ವ್ಯಕ್ತಿಯೊಬ್ಬ ಅಸ್ವಸ್ಥನಾದ ಘಟನೆ ನಡೆದಿದೆ.
ಕರೀಶ್ ಹಾಗೂ ಸ್ನೇಹಿತರು ಚಿತ್ರದುರ್ಗದ ಕಲ್ಲಿನ ಕೋಟೆ ನೋಡಲು ಬಂದಿದ್ದರು. ಕಲ್ಲೇಶ್ ಅವರಿಗೆ ಈಗ 40 ವರ್ಷ. ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಇವರು ಮೂಲತಃ ಕೂಡ್ಲಗಿ ತಾಲೂಕಿನ ಗೆದ್ದಲಗಟ್ಟೆ ಗ್ರಾಮದ ನಿವಾಸಿ. ಬೆಂಗಳೂರಿನಿಂದ ಕೂಡ್ಲಿಗಿಗೆ ಹೋಗುವ ಮಾರ್ಗ ಮಧ್ಯದಲ್ಲಿ ಇರುವ ಕಲ್ಲಿನ ಕೋಟೆ ನೋಡಬೇಕೆಂಬ ಆಸೆಯಾಗಿದೆ. ಹಾಗಾಗಿ ತನ್ನ ಸ್ನೇಹಿತರೆಲ್ಲಾ ಸೇರಿ ಬೆಂಗಳೂರಿನಿಂದ ಕೋಟೆ ನೋಡಲು ಇಂದು ಬಂದಿದ್ದರು.
ಕೋಟೆ ಒಳಗಿನ ಸುಂದರ ದೃಶ್ಯವೇ ಹಾಗೇ ಎಲ್ಲರನ್ನು ಕೈಬೀಸಿ ಕರೆಯುತ್ತದೆ. ನೋಡುತ್ತಾ ನೋಡುತ್ತಾ ಮನಸೋಲುವಂತೆ ಮಾಡುತ್ತದೆ. ಇನ್ನು ಕಲ್ಲಿನ ಕೋಟೆಯ ಅತ್ಯಾಕರ್ಷಕ ಪ್ರಮುಖ ಸ್ಥಳಗಳಲ್ಲಿ ಒಂದಾದ ಒನಕೆ ಓಬವ್ವನ ಕಿಂಡಿ ಇರುವುದು ಎಲ್ಲರಿಗೂ ಗೊತ್ತು.
ಇಲ್ಲಿನ ಒನಕೆ ಓಬವ್ವನ ಕಿಂಡಿ ವೀಕ್ಷಿಸಲು ಹೋದಾಗ ಪ್ರವಾಸಿಗ ಕರೀಶ್ ಅವರು ಅಸ್ವಸ್ಥಗೊಂಡಿದ್ದಾರೆ. ಕರೀಶ್ ಅವರ ಸ್ಥಿತಿ ಕಂಡು ಅವರ ಸ್ನೇಹಿತರು ಸೇರಿದಂತೆ ಅಲಿದ್ದವರು ಗಾಬರಿಯಾಗಿದ್ದಾರೆ. ಅವರ ಸ್ನೇಹಿತರು ತಕ್ಷಣವೇ ಅಲ್ಲಿನ ಭದ್ರತಾ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಧಾವಿಸಿದ ಭದ್ರತಾ ಸಿಬ್ಬಂದಿಯ ಅವರನ್ನು ರಕ್ಷಣೆ ಮಾಡಿದ್ದಾರೆ. ಅಸ್ವಸ್ಥರಾದ ಕರೀಶ್ ಅವರನ್ನು ಜಿಲ್ಲಾ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬೆಂಗಳೂರಿಗೆ ತೆರಳಿದ್ದಾರೆ. ಎದೆನೋವಿನಿಂದ ಪ್ರವಾಸಿಗ ಕರೀಶ್ ಅಸ್ವಸ್ಥಗೊಂಡಿದ್ದರು. ಸದ್ಯ ಈಗ ಆರೋಗ್ಯ ಚೇತರಿಸಿಕೊಂಡಿದ್ದಾರೆ.