ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.01 : ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ನೇರ ಪಾವತಿ ಪೌರ ಕಾರ್ಮಿಕರು ಲೋಡರ್ಸ್, ಆಟೋ ಮತ್ತು ಟಿಪ್ಪರ್ ವಾಹನ ಚಾಲಕರು ಮತ್ತು ಸಹಾಯಕರನ್ನು ಒಂದೆ ಬಾರಿಗೆ ಖಾಯಂಗೊಳಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಧರಣಿ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಸ್ವಚ್ಚತಾ ಕಾರ್ಮಿಕರಾದ ನೇರ ಪಾವತಿ ಪೌರ ಕಾರ್ಮಿಕರು, ಮೇಲ್ವಿಚಾರಕರು ಮತ್ತು ಕಸ ಸಾಗಿಸುವ ವಾಹನ ಚಾಲಕರು ಲೋಡರ್ಸ್ ಸಹಾಯಕರು ಸೇರಿದಂತೆ ಎಲ್ಲರಿಗೂ ವಸತಿ ಸೌಲಭ್ಯ ಒದಗಿಸಬೇಕು.
ಆಯಾ ನಗರ ವ್ಯಾಪ್ತಿಯ ಜನಸಂಖ್ಯೆಗನುಗುಣವಾಗಿ ಐದು ನೂರು ಜನರಿಗೆ ಒಬ್ಬ ಪೌರ ಕಾರ್ಮಿಕ ಎಂಬ ಅನುಪಾತದಲ್ಲಿ ನೇಮಿಸಿಕೊಳ್ಳಬೇಕು.
ನೇರ ಪಾವತಿ ಆಧಾರದಲ್ಲಿ ಸ್ವಚ್ಚತಾ ಕೆಲಸ ಮಾಡುವ ಅವಧಿಯಲ್ಲಿ ಕಾರಣಾಂತರಗಳಿಂದ ಮರಣ ಹೊಂದಿರುವ ಪೌರ ಕಾರ್ಮಿಕರ ಅವಲಂಭಿತರಿಗೆ ಉದ್ಯೋಗ ಮತ್ತು ಪುನರ್ವಸತಿ ಒದಗಿಸಬೇಕು.
ಇತ್ತೀಚೆಗೆ ಪೌರ ಕಾರ್ಮಿಕರ ಹುದ್ದೆಗಳನ್ನು ಸೂಪರ್ ನ್ಯೂಮರಿ ಹುದ್ದೆಗಳಾಗಿ ತುಂಬಲು ಪ್ರಯತ್ನಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ರೀತಿಯ ನೇಮಕಾತಿಗಳು ಪೌರ ಕಾರ್ಮಿಕರ ಪಾಲಿಗೆ ಅನ್ಯಾಯ ಮತ್ತು ಅಕ್ರಮ. ಆದ್ದರಿಂದ ಈ ಕೂಡಲೆ ಪ್ರಕ್ರಿಯೆನ್ನು ಕೈಬಿಟ್ಟು ಎಲ್ಲಾ ಸ್ವಚ್ಚತಾ ಪೌರ ಕಾರ್ಮಿಕರನ್ನು ಒಂದೆ ಬಾರಿಗೆ ಖಾಯಂಗೊಳಿಸಬೇಕು.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಸಂಕಷ್ಟ ಭತ್ಯೆಯನ್ನು ಸ್ವಚ್ಚತಾ ಕಾರ್ಮಿಕರಾದ ನೇರ ನೇಮಕಾತಿ ಹಾಗೂ ಗುತ್ತಿಗೆ ಪೌರ ಕಾರ್ಮಿಕರು ಲೋಡರ್ಸ್ ಕ್ಲೀನರ್ಸ್ ಕಸದ ವಾಹನ ಚಾಲಕರು, ಘನತ್ಯಾಜ್ಯ ನಿರ್ವಹಣಾ ಘಟಕಗಳ ಸ್ವಚ್ಚತಾಗಾರರು ಮತ್ತು ಸಹಾಯಕರಿಗೂ ವಿಸ್ತರಿಸಬೇಕೆಂದು ಧರಣಿನಿರತರು ಆಗ್ರಹಿಸಿದರು.
ಚಿತ್ರದುರ್ಗ ಜಿಲ್ಲಾ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಡಿ.ದುರುಗೇಶ್, ಉಪಾಧ್ಯಕ್ಷ ಎಸ್.ಜಗದೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ರಾಜಣ್ಣ, ಕಾರ್ಯಕಾರಿ ಸಮಿತಿ ಸದಸ್ಯ ಆರ್.ರಂಗಪ್ಪ, ಮಂಜಣ್ಣ ಟಿ. ಸೇರಿದಂತೆ ನೂರಾರು ಪೌರ ಕಾರ್ಮಿಕರು ಧರಣಿಯಲ್ಲಿ ಪಾಲ್ಗೊಂಡಿದ್ದರು.