ಬೆಂಗಳೂರು: ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳು ಜನರಿಗೆ ಹತ್ತಿರವಾಗುವುದಕ್ಕೆ ನೋಡುತ್ತವೆ. ಮಹಿಳೆಯರ ಮತಗಳನ್ನು ಸೆಳೆಯುವುದಕ್ಕೆ ನಿನ್ನೆ ಕಾಂಗ್ರೆಸ್ ಪಕ್ಷ ಮಹಿಳಾ ಮಣಿಯರಿಗಾಗಿ ನಾ ನಾಯಕಿ ಎಂಬ ಕಾರ್ಯಕ್ರಮ ಮಾಡಿ, ಅವರಿಗಾಗಿ ಒಂದಷ್ಟು ಘೋಷನೆಯನ್ನು ಮಾಡಿತ್ತು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮನೆಯ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ಹಣವನ್ನು ನೀಡುವುದಾಗಿ ತಿಳಿಸಿತ್ತು. ಇದೀಗ ಬಿಜೆಪಿ ಕೂಡ ಇದೇ ರೀತಿಯ ಆಶ್ವಾಸನೆ ನೀಡುವ ಯೋಜನೆಯಲ್ಲಿದೆ. ಹೀಗಾಗಿ ಇಬ್ಬರಲ್ಲಿ ಈ ಯೋಜನೆಯನ್ನು ಕಾಪಿ ಮಾಡಿದವರು ಯಾರು ಎಂಬುದೇ ತಿಳಿಯುತ್ತಿಲ್ಲ. ಕಾಂಗ್ರೆಸ್ ಘೋಷಣೆ ಮಾಡುವುದಕ್ಕೂ ಮುನ್ನವೇ ಸಿಎಂ ಬೊಮ್ಮಾಯಿ ಅವರು ಘೋಷಣೆ ಮಾಡಿಯಾಗಿತ್ತು.
ಅರಮನೆ ಮೈದಾನದಲ್ಲಿ ನಾ ನಾಯಕಿ ಎಂಬ ಅದ್ಧೂರಿ ಕಾರ್ಯಕ್ರಮವನ್ನು ಮಾಡಿತ್ತು. ಅದಕ್ಕೆ ಪ್ರಿಯಾಂಕ ಗಾಂಧಿ ಆಗಮಿಸಿದ್ದರು. ಈ ವೇಳೆ ಮಹಿಳೆಯರಿಗೆ ಪ್ರತಿ ತಿಂಗಳು ಹಣ ನೀಡುವ ಬಗ್ಗೆ ಘೋಷಣೆ ಮಾಡಿ, ಮಹಿಳೆಯರ ಮತ ಸೆಳೆಯುವ ಪ್ರಯತ್ನವಂತು ನಡೆಯಿತು. ಇದೀಗ ಇದಕ್ಕೆ ಉತ್ತರವಾಗಿ ಬಿಜೆಪಿ ಕೂಡ ಈ ಬಾರಿಯ ಬಜೆಟ್ ನಲ್ಲಿ ಬಿಪಿಎಲ್ ಕುಟುಂಬದ ಮಹಿಳೆಯರಿಗೆ 2 ಸಾವಿರ ರೂಪಾಯಿ ನೀಡುವುದಾಗಿ ಘೋಷಣೆ ಮಾಡುವ ಪ್ಲ್ಯಾನ್ ನಲ್ಲಿದೆ ಎನ್ನಲಾಗಿದೆ.
ಇನ್ನು ಫೆಬ್ರವರಿ ಮೂರನೇ ವಾರದಲ್ಲಿಯೇ ಬಜೆಟ್ ಮಂಡನೆಯಾಗಲಿದೆ ಎನ್ನಲಾಗುತ್ತಿದೆ. ಬಜೆಟ್ ಮೂಲಕ ಮತದಾರರನ್ನು ಸೆಳೆಯುವ ಯತ್ನವಾಗಲಿದೆ ಎನ್ನಲಾಗುತ್ತಿದೆ. ಕುಟುಂಬದ ಅಗತ್ಯವನ್ನು ನೋಡಿಕೊಂಡು ಸಾವಿರ, ಒಂದೂವರೆ ಸಾವಿರ, ಎರಡು ಸಾವಿರ ಹೀಗೆ ಹಣ ನೀಡಲು ನಿರ್ಧರಿಸಿದೆ ಎನ್ನಲಾಗುತ್ತಿದೆ.