ಬೆಂಗಳೂರು: ರಾಜ್ಯದಲ್ಲಿ ಹಿಜಾಬ್ ಗೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಗಳು ಆಯ್ತು. ಚರ್ಚೆಯ ನಂತರ ಕೆಲವು ಮುಸ್ಲಿಂ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರು. ಇನ್ನು ಕೆಲವರು ಹಿಜಾಬ್ ಗಿಂತ ಶಿಕ್ಷಣವೇ ಮುಖ್ಯ ಎಂದು ಮುಂದೆ ನಡೆದಿದ್ದರು. ಆದ್ರೆ ಇದೀಗ ಈ ಎಲ್ಲಾ ವಿಚಾರಗಳ ಬಳಿಕ ವಕ್ಫ್ ಬೋರ್ಡ್ ಪ್ರತ್ಯೇಕ ಕಾಲೇಜು ತೆರೆಯಲು ನಿರ್ಧರಿಸಿದೆ. ರಾಜ್ಯ ಸರ್ಕಾರ ನೀಡುತ್ತಿರುವ ಅನುದಾನದಲ್ಲಿಯೇ ಕಾಲೇಜು ಗಳನ್ನು ನಿರ್ಮಾಣ ಮಾಡುತ್ತಿದೆ.
ಉಡುಪಿ, ಮಂಗಳೂರು, ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರಲು ಹೊರಟಿದೆ. ಪ್ರತಿ ಕಾಲೇಜಿಗೆ ಎರಡು ಕೋಟಿ ಹಣ ಮೀಸಲಿಟ್ಟಿದೆ. ಇದಕ್ಕೆ ರಾಜ್ಯ ಸರ್ಕಾರ ಕೂಡ ಗ್ರೀನ್ ಸಿಗ್ನಲ್ ನೀಡಿದೆ. ಶಂಕು ಸ್ಥಾಪನೆಗೆ ಸಿಎಂ ಬೊಮ್ಮಾಯಿ ಅವರನ್ನು ಆಹ್ವಾನ ಮಾಡಲಾಗಿದೆ.
ಈ ವಿಚಾರಕ್ಕೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕೆಂಡಕಾರಿದ್ದಾರೆ, ಹಿಜಾಬ್ ಸಲುವಾಗಿ ಪ್ರತ್ಯೇಕ ಕಾಲೇಜು ನಿರ್ಮಿಸಿದರೆ ನಾವೂ ಅದನ್ನು ವಿರೋಧಿಸುತ್ತೇವೆ. ಪ್ರತ್ಯೇಕ ಕಾಲೇಜು ಮಾಡುವುದಕ್ಕೆ ನಾವು ಬಿಡಲ್ಲ. ಬಿಜೆಪಿ ಸರ್ಕಾರ ಹತ್ತು ಮುಸ್ಲಿಂ ಕಾಲೇಜಿಗೆ ಅನುಮತಿ ನೀಡಿರುವುದನ್ನು ನಾವೂ ವಿರೋಧಿಸುತ್ತೇವೆ. ಅವರಿಗೆ ಬೇರೆ ಕಾಲೇಜು ಕೊಡುತ್ತಾ ಇರುವುದು ತಪ್ಪು. ಈ ರೀತಿಯ ಹಿಜಾಬಿನ ಸಲುವಾಗಿ ಕಾಲೇಜು ಕೊಟ್ಟರೆ, ಪ್ರತ್ಯೇಕತೆಯ ಮನೋಭಾವನೆ ನೀಡುತ್ತಿರುವುದು ಸರಿಯಲ್ಲ. ಇವತ್ತು ನೀಡಿದ ಅನುಮತಿಯನ್ನು ವಾಪಾಸ್ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.