ಶ್ರೀ ತಿಪ್ಪೇರುದ್ರಸ್ವಾಮಿ ದೇವಾಲಯದ ಹುಂಡಿಯಲ್ಲಿ ದಾಖಲೆ ಪ್ರಮಾಣದ ಹಣ ಸಂಗ್ರಹ ..!

ನಾಯಕನಹಟ್ಟಿ : ಶ್ರೀ ತಿಪ್ಪೇರುದ್ರಸ್ವಾಮಿ ದೇವಾಲಯದ ಹುಂಡಿಗಳಲ್ಲಿ 67.6 ಲಕ್ಷ ರೂಗಳ ದಾಖಲೆ ಪ್ರಮಾಣದ ಹಣ ಸಂಗ್ರಹವಾಗಿದೆ.

ಒಳಮಠದ ಹುಂಡಿಗಳಲ್ಲಿ 51,40,500 ರೂ, ಹೊರಮಠದ ಹುಂಡಿಗಳಲ್ಲಿ 16,24,583 ರೂಗಳು ಸೇರಿದಂತೆ ಒಟ್ಟು 67,65,583 ರೂ ಸಂಗ್ರಹವಾಗಿದೆ.

ಜಾತ್ರೆಯ ಸಂದರ್ಭದಲ್ಲಿ ಈ ಪ್ರಮಾಣದಲ್ಲಿ ಹಣ ಸಂಗ್ರಹವಾಗಿರುವುದು ಇದೇ ಮೊದಲಾಗಿದೆ. ಯಾವುದೇ ನಿರ್ಬಂಧಗಳಿಲ್ಲದೆ ಮಾ.20 ರಂದು ಜಾತ್ರೆ ಜರುಗಿತು. ಹೀಗಾಗಿ ಸುಮಾರು ಎರಡು ಲಕ್ಷ ಭಕ್ತರು ಜಾತ್ರೆಗೆ ಆಗಮಿಸಿದ್ದರು.

ಸಾಮಾನ್ಯವಾಗಿ ಹುಂಡಿ ಹಣ ಎಣಿಕೆ ಕಾರ್ಯ ಬೆಳಗ್ಗೆ ಆರಂಭವಾಗಿ ಸಂಜೆ ಮುಕ್ತಾಯವಾಗುತ್ತಿತ್ತು. ಆದರೆ ಈ ಬಾರಿಯ ಹುಂಡಿ ಹಣದ ಎಣಿಕೆ ಕಾರ್ಯ ಮುಕ್ತಾಯವಾದಾಗ ರಾತ್ರಿ 8 ಗಂಟೆಯಾಗಿತ್ತು. ಜಾತ್ರೆಗೆ ಮುಂಚೆ ಜ.28 ರಂದು ಹುಂಡಿ ಹಣವನ್ನು ಎಣಿಕೆ ಮಾಡಲಾಗಿತ್ತು. ಅಂದು 57.93 ಲಕ್ಷ ರೂಗಳಷ್ಟು ಹಣ ಸಂಗ್ರಹವಾಗಿತ್ತು. ಜಾತ್ರೆಯ ಮುಂಚೆ, ಜಾತ್ರೆಯ ನಂತರ ಹಾಗೂ ಶ್ರಾವಣ ಮಾಸದ ನಂತರ  ಹುಂಡಿ ಹಣವನ್ನು ವರ್ಷದಲ್ಲಿ ಮೂರು ಬಾರಿ ಎಣಿಸಲಾಗುವುದು. ಹಿಂದೂ ಧಾರ್ಮಿಕ ದತ್ತಿಯ ಇಲಾಖೆಯಲ್ಲಿ ಇಲ್ಲಿನ ದೇವಾಲಯವನ್ನು ಎ ಶ್ರೇಣಿಯ ದೇವಾಲಯ ಎಂದು ಪರಿಗಣಿಸಲಾಗಿದೆ.

ಹುಂಡಿ ಎಣಿಕಾ ಕಾರ್ಯವನ್ನು ಸಂಪೂರ್ಣವಾಗಿ ವೀಡಿಯೋ ಚಿತ್ರೀಕರಣಗೊಳಿಸಲಾಯಿತು.
ಕಂದಾಯ ಇಲಾಖೆ, ಕೆನರಾ ಬ್ಯಾಂಕ್, ದೇವಾಲಯ ಸಿಬ್ಬಂದಿ ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ತಹಸೀಲ್ದಾರ್ ಎನ್.ರಘುಮೂರ್ತಿ, ದೇವಾಲಯದ ಇಒ. ಹೆಚ್. ಗಂಗಾಧರಪ್ಪ, ಪಿಎಸ್‍ಐ ಜೆ. ಶಿವರಾಜ್, ಕೆನರಾ ಬ್ಯಾಂಕ್ ಮ್ಯಾನೇಜರ್ ಸೂರ್ಯ ದೇವ ನಾಯ್ಕ, ರಾಜಸ್ವ ನಿರೀಕ್ಷಕ ಚೇತನ್, ಶಿರಸ್ತೇದಾರ್ ಸದಾಶಿವಪ್ಪ, ಸಿಬ್ಬಂದಿ ರೇಖಾ, ದೇವಾಲಯದ ಸಿಬ್ಬಂದಿ ಸತೀಶ್ ಮತ್ತಿತರರಿದ್ದರು.

Leave a Reply

Your email address will not be published. Required fields are marked *

error: Content is protected !!