ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಮೇ. 03 : ಏಕನಾಥೇಶ್ವರಿ ಅಮ್ಮನ ಮೆರವಣಿಗೆ ನಗರದ ರಾಜಬೀದಿಗಳಲ್ಲಿ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.
ಕೋಟೆ ರಸ್ತೆಯಲ್ಲಿರುವ ಪಾದಗುಡಿಯಿಂದ ಹೊರಟ ಏಕನಾಥೇಶ್ವರಿ ಆನೆಬಾಗಿಲು, ಬುರುಜಿನಹಟ್ಟಿ, ಹೊಳಲ್ಕೆರೆ ರಸ್ತೆ, ಎಸ್.ಬಿ.ಎಂ.ರಸ್ತೆ, ಧರ್ಮಶಾಲಾ ರಸ್ತೆ, ದೊಡ್ಡಪೇಟೆ, ಜೋಗಿಮಟ್ಟಿ ರಸ್ತೆ, ಕರುವಿನಕಟ್ಟೆ ವೃತ್ತದ ಮೂಲಕ ಸಾಗಿತು.
ಮಲ್ಲಿಗೆ, ಕನಕಾಂಬರ, ಸುಗಂಧರಾಜ, ಗುಲಾಬಿ, ಸೇವಂತಿಗೆ, ದ್ರಾಕ್ಷಿ, ಬಾದಾಮಿ, ದೊಡ್ಡ ದೊಡ್ಡ ಗಾತ್ರದ ಹಾರಗಳಿಂದ ಅಲಂಕರಿಸಲಾಗಿದ್ದ ಏಕನಾಥೇಶ್ವರಿ ಎತ್ತಿನಗಾಡಿಯಲ್ಲಿ ವಿರಾಜಮಾನಳಾಗಿದ್ದ ಮೆರವಣಿಗೆಯನ್ನು ರಸ್ತೆಯ ಎರಡು ಬದಿಗಳಲ್ಲಿ ನಿಂತಿದ್ದ ಭಕ್ತರು ವೀಕ್ಷಿಸಿ ಸಂಭ್ರಮಿಸಿದರು.
ಅಲ್ಲಲ್ಲಿ ಮನೆಯ ಮುಂದೆ ಮಹಿಳೆಯರು ನೀರು ಹಾಕಿ ರಂಗೋಲಿ ಬಿಡಿಸಿ ಏಕನಾಥೇಶ್ವರಿ ಅಮ್ಮನಿಗೆ ಭಕ್ತಿ ಸಮರ್ಪಿಸಿದರು.
ಡೊಳ್ಳು, ತಮಟೆ, ಉರುಮೆ ಸದ್ದಿಗೆ ಮೆರವಣಿಗೆಯಲ್ಲಿ ಸೇರಿದ್ದ ನೂರಾರು ಯುವಕರು ಕುಣಿದು ಕುಪ್ಪಳಿಸಿದರು. ಏಕನಾಥೇಶ್ವರಿ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಜಮೀನ್ದಾರ್ ದೊರೆಸ್ವಾಮಿ, ನಿರ್ದೇಶಕ ರಾಮಜ್ಜ, ಮಲ್ಲಿಕಾರ್ಜುನ್, ನಗರಸಭೆ ನಾಮ ನಿರ್ದೇಶಿತ ಮಾಜಿ ಸದಸ್ಯ ಓಂಕಾರ್, ಶಾರದ ಬ್ರಾಸ್ ಬ್ಯಾಂಡ್‍ನ ಗುರುಮೂರ್ತಿ ಹಾಗೂ ಉತ್ಸವ ಸಮಿತಿಯ ಪದಾಧಿಕಾರಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಸುಡುವ ಬಿಸಿಲಿನಲ್ಲಿ ಎರಡು ವರ್ಷದ ಹಸುಗೂಸಿನೊಂದಿಗೆ ಮೆರವಣಿಗೆಗೆ ಆಗಮಿಸಿದ್ದ ತಹಶೀಲ್ದಾರ್ ಡಾ.ನಾಗವೇಣಿರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಗ್ರಾಮ ಆಡಳಿತಾಧಿಕಾರಿ ಶ್ರೀನಿವಾಸ್ ಈ ಸಂದರ್ಭದಲ್ಲಿದ್ದರು.
ಚಿತ್ರದುರ್ಗ : ಗ್ರಾಮ ದೇವತೆ ಬರಗೇರಮ್ಮನವರ ಮೆರವಣಿಗೆ ಶುಕ್ರವಾರ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು. ಬೃಹಧಾಕಾರವಾದ ಹೂವಿನ ಹಾರ, ಬಾದಾಮಿ, ದ್ರಾಕ್ಷಿ, ಚೆರ್ರಿ ಫ್ರೂಟ್, ಖರ್ಜೂರಗಳಿಂದ ಸಿಂಗಾರಗೊಂಡಿದ್ದ ಬರಗೇರಮ್ಮನಿಗೆ ರಸ್ತೆಯುದ್ದಕ್ಕೂ ಭಕ್ತರು ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.
ಉರಿ ಬಿಸಿಲಿಗೆ ಕಾದು ಕೆಂಡದಂತಾಗಿದ್ದ ರಸ್ತೆಗೆ ಟ್ರಾಕ್ಟರ್ ಮೂಲಕ ನೀರು ಹರಿಸಲಾಯಿತು.
ಉರುಮೆ, ಡೊಳ್ಳು, ಸೋಮನ ಕುಣಿತ, ನಂದಿಕೋಲು, ಚಂಡೆ ವಾದ್ಯ ಇವುಗಳ ಸದ್ದಿಗೆ ಮೆರವಣಿಗೆಯಲ್ಲಿದ್ದ ಸಹಸ್ರಾರು ಯುವಕರು ಕುಣಿದು ಮೆರವಣಿಗೆಯ ಖುಷಿಯನ್ನು ಸಂಭ್ರಮಿಸಿದರು.
ಎಸ್.ಎನ್.ರವಿಕುಮಾರ್, ಓಂಕಾರ್ ಇನ್ನು ಅನೇಕ ಪ್ರಮುಖರು ಮೆರವಣಿಗೆಯಲ್ಲಿದ್ದರು.