ಶಿವಮೊಗ್ಗ: ಹೊಸ ವರ್ಷದ ಸಂಭ್ರಮದಲ್ಲಿ ನಾಡಿನ ಜನ ಇರುವಾಗ ಕಿಡಿಗೇಡಿಗಳು ವೈದ್ಯರನ್ನ ಟಾರ್ಗೆಟ್ ಮಾಡಿದ್ದಾರೆ. ಬಿಜೆಪಿ ಲೀಡರ್ ಹೆಸರಿನಲ್ಲಿ ವಿಷಯುಕ್ತ ಸ್ವೀಟ್ ಬಾಕ್ಸ್ ಅನ್ನ ಕಳುಹಿಸಿಕೊಟ್ಟಿದ್ದಾರೆ. ಒಂದು ವೇಳೆ ಆ ಮೂವರು ಆ ಸ್ವೀಟ್ ಅನ್ನ ತಿಂದಿದ್ದರೆ ಇವತ್ತು ಅವರ ಕಥೆ ಅಷ್ಟೇ. ಈ ಘಟನೆ ನಡೆದಿರೋದು ಶಿವಮೊಗ್ಗದಲ್ಲಿ. ಬಿಜೆಪಿ ಪಕ್ಷದ ವಿಧಾನಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಅವರ ಹೆಸರಿನಲ್ಲಿ ಶಿವಮೊಗ್ಗದ ಮೂವರಿಗೆ ಸ್ವೀಟ್ ಬಾಕ್ಸ್ ವಿತರಿಸಲಾಗಿದೆ. ಕೊರಿಯರ್ ಮೂಲಕ ಸ್ವೀಟ್ ಬಾಕ್ಸ್ ನೀಡಲಾಗಿದೆ.
ಶಿವಮೊಗ್ಗದ ಪ್ರತಿಷ್ಠಿತ ಎನ್ಇಎಸ್ ಸಂಸ್ಥೆಯ ಕಾರ್ಯದರ್ಶಿ ನಾಗರಾಜ್, ಡಾಕ್ಟರ್ ಅರವಿಂದ್ ಹಾಗೂ ಡಾಕ್ಟರ್ ಪವಿತ್ರಾ ಅವರಿಗೆ ಸ್ವೀಟ್ ಬಾಕ್ಸ್ ನೀಡಲಾಗಿದೆ. ಸ್ವೀಟ್ ಬಾಕ್ಸ್ ಮೇಲೆ ಎಂಎಲ್ಸಿ ಹೆಸರು, ಭಾವಚಿತ್ರವನ್ನು ಅಂಟಿಸಲಾಗಿದೆ. ನಕಲಿ ಪತ್ರವನ್ನು ಇಟ್ಟು ಕಳುಹಿಸಲಾಗಿದೆ. ಎನ್ಇಎಸ್ ಸಂಸ್ಥೆಯ ಕಾರ್ಯದರ್ಶಿ ನಾಗರಾಜ್ ಅವರು ಈ ಸ್ವೀಟ್ ತಿಂದಾಗ ಕಹಿಯ ಅನುಭವವಾಗಿದೆ. ತಕ್ಷಣ ಡಿಎಸ್ ಅರುಣ್ ಅವರ ಗಮನಕ್ಕೆ ತಂದಿದ್ದಾರೆ. ಆ ಸಮಯದಲ್ಲಿಯೇ ಇನ್ನಿಬ್ಬರು ವೈದ್ಯರಿಗೂ ಸ್ವೀಟ್ ಬಾಕ್ಸ್ ರವಾನೆಯಾಗಿರುವುದು ತಿಳಿದು ಬಂದಿದೆ. ಸದ್ಯಕ್ಕೆ ಆ ಸ್ವೀಟನ್ನ ಯಾರೂ ತಿಂದಿಲ್ಲ.
ಇನ್ನು ಈ ಸ್ವೀಟನ್ನ ಪರೀಕ್ಷೆಂದು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಸ್ವೀಟ್ ಗೆ ಯಾವ ರೀತಿಯ ವಿಷ ಬೆರೆಸಲಾಗಿದೆ ಎಂಬುದರ ವರದಿಗಾಗಿ ಕಾಯುತ್ತಿದ್ದಾರೆ. ವರದಿ ಬಂದ ಬಳಿಕವಷ್ಟೇ ಸ್ವೀಟ್ ಗೆ ಏನು ಬೆರೆಸಿದ್ದಾರೆ ಎಂಬುದು ತಿಳಿಯಬೇಕಿದೆ. ಈ ಸಂಬಂಧ ಸೂಕ್ತ ತನಿಖೆ ನಡೆಸಿ ಈ ಕೆಲಸ ಮಾಡಿರುವುದು ಯಾರೆಂದು ತಿಳಿದು, ಕಠಿಣ ಶಿಕ್ಷೆ ಕೊಡಿಸಬೇಕೆಂದು ಧನಂಜಯ ಸರ್ಜಿ ಅವರೇ ಆಗ್ರಹಿಸಿದ್ದಾರೆ.