ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿನ ಟ್ರಾಫಿಕ್ ಸಮಸ್ಯೆಗೆ ಮೆಟ್ರೋ ಟ್ರೈನ್ ಮುಕ್ತಿ ಹಾಡಿದೆ. ಮೆಟ್ರೋ ಬಂದ ಮೇಲೆ ಅದೆಷ್ಟೋ ಜನರ ಸಂಚಾರ ಸಲೀಸಾಗಿದೆ. ಸಿಬ್ಬಂದಿಗಳು ಆಫೀಸ್ ಗಳಿಗೆ ಸರಿಯಾದ ಸಮಯಕ್ಕೆ ಸಂಚಾರ ಮಾಡುತ್ತಿದ್ದಾರೆ. ಆದರೆ ಕಳೆದ ಎಂಟು ತಿಂಗಳಿನಿಂದ ಅದ್ಯಾಕೋ ಮೆಟ್ರೋ ಸ್ಟೇಷನ್ ಗಳಿಗೆ ಆತ್ಮಹತ್ಯೆ ಮಾಡಿಕೊಳ್ಳಲೆಂದು ಬರುವವರ ಸಂಖ್ಯೆ ಜಾಸ್ತಿಯಾಗಿದೆ. ಇಂದು ಕೂಡ ವ್ಯಕ್ತಿಯೊಬ್ಬ ಟ್ರೈನ್ ಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ದೊಡ್ಡ ಕಲ್ಲಸಂದ್ರ ಮೆಟ್ರೋ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. 35 ವರ್ಷದ ವ್ಯಕ್ತಿಯೊಬ್ಬ ಹಳಿ ಜಂಪ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹಳಿಗೆ ಬಿದ್ದ ತೀವ್ರತೆಯಿಂದಾಗಿ ತಲೆಗೆ ಜೋರಾದ ಪೆಟ್ಟು ಬಿದ್ದಿದೆ. ರಕ್ತಸ್ರಾವವಾಗಿ ಆ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಇದರಿಂದಾಗಿ ದೊಡ್ಡಕಲ್ಲಸಂದ್ರ ಭಾಗದ ರೈಲು ಸಂಚಾರದಲ್ಲಿ ವ್ಯತ್ಯಯ ಕಂಡು ಬಂದಿದ್ದು, ಸ್ವಲ್ಪ ಸಮಯ ರೈಲು ಸಂಚಾರ ಸ್ಥಗಿತಗೊಂಡಿತು. ಜೊತೆಗೆ ಟ್ರೈನಿನ ಕೆಳಭಾಗದಲ್ಲಿಯೇ ವ್ಯಕ್ತಿಯ ಮೃತದೇಹ ಸಿಲುಕಿಕೊಂಡಿದೆ. ಸಿಬ್ಬಂದಿಗಳು ಹೊರ ತೆಗೆಯುವ ಪ್ರಯತ್ನ ಮಾಡುತ್ತಿದ್ದಾರೆ. ಘಟನಾ ಸ್ಥಳಕ್ಕೆ ಕೋಣನಕುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಹಜರು ಪ್ರಕ್ರಿಯೆ ಮುಗಿಸಿಕೊಂಡಿದ್ದು, ಆ ವ್ಯಕ್ತಿ ಯಾರು, ಆತ್ಮಹತ್ಯೆ ಮಾಡಿಕೊಂಡಿದ್ದೇಕೆ ಎಂಬೆಲ್ಲಾ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.
ಇನ್ನು ಬೆಂಗಳೂರು ಮೆಟ್ರೋನಲ್ಲಿ ಆತ್ಮಹತ್ಯೆ ಪ್ರಕರಣಗಳು ಪದೇ ಪದೇ ಮರುಕಳುಹಿಸುತ್ತಿವೆ. ಕಳೆದ ಎಂಟು ತಿಂಗಳಲ್ಲಿ ಹಲವು ಅವಘಡಗಳು ನಡೆದಿವೆ. ಇಂದಿರಾನಗರದಲ್ಲಿ ಮಹಿಳೆಯೊಬ್ಬರು ಜನವರಿಯಲ್ಲಿ ಮಿಸ್ಸಾಗಿ ಬಿದ್ದಿದ್ದರು. ಅದೃಷ್ಟ ಸಿಬ್ಬಂದಿಗಳು ಬದುಕಿಸಿದ್ದರು. ಜಾಲಹಳ್ಳಿ ಮೆಟ್ರೋ ಸ್ಟೇಷನ್ ಬಿದ್ದ ವ್ಯಕ್ತಿಯೊಬ್ಬ ಆಸ್ಪತ್ರೆಗೆ ದಾಖಲಾಗಿದ್ದರು. ಮಾರ್ಚ್ ನಲ್ಲಿ ಅತ್ತಿಗುಪ್ಪೆ ಮೆಟ್ರೋ ಸ್ಟೇಷನ್ ಗೆ ಬಿದ್ದ ವ್ಯಕ್ತಿ ಸಾವನ್ನಪ್ಪಿದ್ದ. ಮೊನ್ನೆಯಷ್ಟೇ ಮಗುವೊಂದು ಟ್ರ್ಯಾಕ್ ಗೆ ಬಿದ್ದಿತ್ತು. ತಕ್ಷಣ ಎಚ್ಚೆತ್ತ ಸಿಬ್ಬಂದಿಗಳು ಪವರ್ ಕಟ್ ಮಾಡಿ, ರಕ್ಷಣೆ ನೀಡಿದ್ದರು.