ಸುದ್ದಿಒನ್ : ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರ ಶುಭಮನ್ ಗಿಲ್ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.
ಐಸಿಸಿ ಬುಧವಾರ ಪ್ರಕಟಿಸಿದ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಗಿಲ್ ಅಗ್ರಸ್ಥಾನಕ್ಕೆ ತಲುಪಿದ್ದಾರೆ. ಗಿಲ್ ನಂ.1 ರ‌್ಯಾಂಕ್ ಅಲಂಕರಿಸಿದ್ದು ಇದೇ ಮೊದಲು.
ಕೆಲ ಸಮಯದಿಂದ ಅದ್ಭುತ ಪ್ರದರ್ಶನ ನೀಡುತ್ತಿರುವ ಗಿಲ್ ಪಾಕ್ ನಾಯಕ ಬಾಬರ್ ಅಜಮ್ ಅವರನ್ನು ಹಿಂದಕ್ಕೆ ತಳ್ಳಿಲ ಅಗ್ರಸ್ಥಾನಕ್ಕೇರಿದ್ದಾರೆ.
ಈಗ ನಡೆಯುತ್ತಿರುವ ಏಕದಿನ ವಿಶ್ವಕಪ್‌ನಲ್ಲೂ ಗಿಲ್ ಆಡುತ್ತಿದ್ದಾರೆ. ಜ್ವರದಿಂದ ಮೊದಲ ಮೂರು ಪಂದ್ಯಗಳಿಂದ ಹೊರಗುಳಿದಿದ್ದ ಈ ಯುವ ಆರಂಭಿಕ ಆಟಗಾರ, ನಂತರ ಪಂದ್ಯಗಳಿಗೆ ರೀ ಎಂಟ್ರಿ ಕೊಟ್ಟಿದ್ದರು. ಪ್ರಸ್ತುತ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಗಿಲ್ 830 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಬಾಬರ್ 824 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ಗಿಲ್ ಅವರದು ಅಪರೂಪದ ಸಾಧನೆ :
ಏಕದಿನದಲ್ಲಿ ವಿಶ್ವದ ನಂಬರ್ 1 ಬ್ಯಾಟ್ಸ್ ಮನ್ ಎನಿಸಿಕೊಂಡಿರುವ ಗಿಲ್ ಅಪರೂಪದ ಸಾಧನೆಯನ್ನು ತಮ್ಮ ಹೆಸರಿನಲ್ಲಿ ದಾಖಲಿಸಿದ್ದಾರೆ. ಶುಭ್‌ಮನ್ ಕಡಿಮೆ ಇನ್ನಿಂಗ್ಸ್‌ಗಳಲ್ಲಿ ನಂ.1 ರ‌್ಯಾಂಕ್ ತಲುಪಿದ ಎರಡನೇ ಭಾರತೀಯ ಆಟಗಾರ ಎನಿಸಿಕೊಂಡರು. ಗಿಲ್ ಈ ದಾಖಲೆಯನ್ನು ಕೇವಲ 41 ಇನ್ನಿಂಗ್ಸ್‌ಗಳಲ್ಲಿ ಸಾಧಿಸಿರುವುದು ಗಮನಾರ್ಹ.
ಈ ಅಪರೂಪದ ಸಾಧನೆ ಮಾಡಿದವರ ಪಟ್ಟಿಯಲ್ಲಿ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಇದ್ದಾರೆ. 2010ರಲ್ಲಿ ಏಕದಿನದಲ್ಲಿ ನಂ.1 ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದ ಧೋನಿ ಕೇವಲ 38 ಇನ್ನಿಂಗ್ಸ್ ಗಳಲ್ಲಿ ಈ ಗೌರವ ಪಡೆದರು. ಅದೇ ರೀತಿ ಏಕದಿನದಲ್ಲಿ ಅಗ್ರಸ್ಥಾನಕ್ಕೇರಿದ ಭಾರತದ ನಾಲ್ಕನೇ ಆಟಗಾರ ಎಂಬ ಕೀರ್ತಿಗೆ ಗಿಲ್ ಪಾತ್ರರಾದರು. ಗಿಲ್‌ಗಿಂತ ಮೊದಲು ಸಚಿನ್ ತೆಂಡೂಲ್ಕರ್, ಧೋನಿ ಮತ್ತು ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದರು.