ಹಾಸನ : ನೋಟೀಸ್ ಜಾರಿ ಮಾಡಿದ್ದರ ಬಗ್ಗೆ ಎ ಮಂಜು ಆಕ್ರೋಶ ಗೊಂಡಿದ್ದಾರೆ. ಬಿಜೆಪಿಯ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ವಿರುದ್ಧ ಏಕವಚನದಲ್ಲೇ ಕಿಡಿಕಾರಿದ್ದಾರೆ.
ಜಿಲ್ಲೆಯ ಅರಕಲಗೂಡಿನಲ್ಲಿ ಮಾತನಾಡಿದ್ದು, ನನಗೆ ನೋಟೀಸ್ ಕೊಟ್ಟವನು ಒಬ್ಬ ಅವಿವೇಕಿ. ನಾವು ಮಂಡ್ಯದಲ್ಲಿ ಜೀತ ಮಾಡಿ ಪಕ್ಷ ಕಟ್ಟಿದ್ದೇವೆ. ಯಾವ ಹುದ್ದೆಯನ್ನು ಕೊಟ್ಟಿಲ್ಲ ಆದರೂ ಸಂಘಟನೆ ಜವಾಬ್ದಾರಿ ಹೊತ್ತಿದ್ದೆವು. ನೋಟಿಸ್ ಕೊಡಲು ನಾನು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಇದರ ಹಿಂದೆ ಯಾರ ಕೈವಾಡ ಇದೆ ಎಂದು ಮುಂದಿನ ದಿನಗಳಲ್ಲಿ ತಿಳಿಯಲಿದೆ ಎಂದಿದ್ದಾರೆ.
ನನಗೆ ಅಧ್ಯಕ್ಷರು ನೋಟೀಸ್ ಕೊಡಬೇಕು, ಅದು ಪಕ್ಷ ವಿರೋಧಿ ಚಟುವಟಿಕೆ ಮಾಡಿದಾಗ ಮಾತ್ರ. ಆ ಸಂಬಂಧ ನನ್ನ ಕೈಗೆ ಲೆಟರ್ ಬರುವವರೆಗೂ ಏನು ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಬಿಜೆಪಿ ಅಭ್ಯರ್ಥಿಯ ಜೊತೆಯಲ್ಲೇ ಇದ್ದು, ಅವರ ಜೊತೆಯಲ್ಲೇ ಹೋಗಿ ನಾಮಪತ್ರ ಸಲ್ಲಿಸಿದ್ದೇವೆ. ಇದಾದ ಮೇಲೆ ಸಾಯಂಕಾಲ ಏಕಾಏಕಿ ಎಲ್ಲಾ ಜವಾಬ್ದಾರಿ ವಾಪಸ್ ಪಡೆದಿದ್ದೇವೆ ಅಂತಾರೆ. ಅವನಿಗೆ ಏನು ಜವಬ್ದಾರಿ ಕೊಟ್ಟಿದ್ದಾರೆ ಎಂದು ಹೇಳಲು ಹೇಳಿ ಎಂದು ಕಿಡಿಕಾರಿದರು.
ಮಂಥರ್‌ಗೌಡಗೆ ಕಾಂಗ್ರೆಸ್‌ನಿಂದ ಟಿಕೆಟ್ ನೀಡಿದ ನಂತರ, ಎ.ಮಂಜುಗೆ ಬಿಜೆಪಿಯಿಂದ ನೀಡಿದ್ದ ಜವಾಬ್ದಾರಿಯಿಂದ ಮುಕ್ತಿಗೊಳಿಸಲಾಗಿತ್ತು. ಬಿಜೆಪಿಯ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಜವಾಬ್ದಾರಿಯಿಂದ ಮುಕ್ತಿಗೊಳಿಸಿ ನೋಟೀಸ್ ನೀಡಿದ್ದರು. ಇದಕ್ಕೆ ಎ ಮಂಜು ಆಕ್ರೋಶಿತರಾಗಿದ್ದರು.