ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 20 : ರಾಜ್ಯದ ಎಲ್ಲೆಡೆ ಉತ್ತಮಮಳೆಯಾಗುತ್ತಿದೆ. ಕೆರೆ, ಕಟ್ಟೆಗಳು ತುಂಬುತ್ತಿವೆ. ನೀರು ಎಲ್ಲೆಡೆ ಹರಿಯಲು ಶುರುವಾಗಿದೆ. ಸಾಕಷ್ಟು ಕಡೆ ನೀರಿನಿಂದ ಅಪಾಯವೂ ಉಂಟಾಗಿದೆ. ಅದರಲ್ಲೂ ಕೆರೆಗಳಲ್ಲಿ, ಹರಿಯುವ ನೀರಿನಲ್ಲಿ ಮೀನು ಹಿಡಿಯುವ ಕ್ರೇಜು ಜನರಲ್ಲಿ ಇದೆ. ಹೀಗೆ ಮೀನು ಹಿಡಿಯಲು ಹೋದವ ಜೀವಂತವಾಗಿ ವಾಪಾಸ್ ಆಗದೆ ಇರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
39 ವರ್ಷದ ಶಿವು ಎಂಬಾತ ಮೀನು ಹಿಡಿಯಲು ಹೋಗಿ ಸಾವನ್ನಪ್ಪಿದ್ದಾನೆ. ಕೆಲ್ಲೋಡು ಬಳಿ ಮೀನು ಹಿಡಿಯುವಾಗ ಈ ದುರ್ಘಟನೆ ನಡೆದು, ಶಿವು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಮುತ್ತಾಗುಂದಿ ಗ್ರಾಮದ ಬಳಿಯ ಕೆಲ್ಲೋಡು ಬಳಿ ಈ ಘಟನೆ ನಡೆದಿದೆ.
ವೇದಾವತಿ ನದಿಯ ನೀರು ಜೋರಾಗಿಯೇ ಹರಿಯುತ್ತಿದೆ. ಹರಿಯುವ ನೀರಿನಲ್ಲಿ ಮೀನುಗಳು ತೇಲಿ ಬರುತ್ತವೆ. ಹೀಗಾಗಿ ಮೀನು ಹಿಡಿಯಲು ಶಿವು ಕೂಡ ತೆರಳಿದ್ದರು. ಆದರೆ ದುರಾದೃಷ್ಟವಶಾತ್ ಮೀನು ಹಿಡಿಯುವಾಗ ಕಾಲು ಜಾರಿ ನದಿಗೆ ಬಿದ್ದಿದ್ದಾರೆ. ಮೃತ ಶಿವು ಜಾನಕಲ್ ಗ್ರಾಮದವರು. ನದಿಗೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಶಿವು ಮೃತದೇಹ ಮುತ್ತಾಗುಂದಿ ಗ್ರಾಮದ ಬಳಿ ಪತ್ತೆಯಾಗಿದೆ.
ಈ ವಿಷಯ ತಿಳಿದು ಕುಟುಂಬಸ್ಥರ ಅಳಲು ಮುಗಿಲು ಮುಟ್ಟಿದೆ. ಮಗನನ್ನು ಕಳೆದುಕೊಂಡ ಕುಟುಂಬದಲ್ಲಿ ದುಃಖ ಹೆಚ್ಚಾಗಿದೆ. ಶ್ರೀರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮಳೆ ಜೋರಾಗಿದೆ, ನೀರಿನ ರಭಸವೂ ಹೆಚ್ಚಾಗಿದೆ. ಹೀಗಾಗಿ ಓಡಾಡುವ ಜನ, ಈ ರೀತಿ ಮೀನು ಹಿಡಿಯಬೇಕೆಂದುಕೊಳ್ಳುವವರು, ನೀರಿನ ಜೊತೆಗೆ ಸೆಲ್ಫಿ ತೆಗೆದುಕೊಳ್ಳಬೇಕೆಂದವರು ಕೊಂಚ ಎಚ್ಚರದಿಂದ ಇರಿ. ನಿಮ್ಮನ್ನೇ ನಂಬಿಕೊಂಡವರು ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡದಿರಿ.