ಕೃಷಿ ಮಾಡುವುದು ಸುಲಭದ ಕೆಲಸವೇನು ಅಲ್ಲ. ಗಿಡಗಳನ್ನು ಮಕ್ಕಳಂತೆ ನೋಡಿಕೊಳ್ಳಬೇಕು. ಅಲ್ಲಿಬ್ಬ ರೈತ ಕೂಡ ಮೂರು ಎಕರೆಯಲ್ಲಿ ಅಡಿಕೆ ಗಿಡಗಳನ್ನು ಮಗುವಿನಂತೆ ಸಾಕಿದ್ದ. ಇನ್ನೇನು ಕೆಲವೇ ವರ್ಷದಲ್ಲಿ ಕೈಗೆ ಬಂದು, ಫಸಲು ಕೊಡಬೇಕು ಎನ್ನುವಷ್ಟರಲ್ಲಿ ಅಡಿಕೆ ಗಿಡಗಳೆಲ್ಲಾ ನೆಲದಲ್ಲಿ ಮಲಗಿವೆ. ಈ ಘಟನೆ ನಡೆದಿರೋದು ಹುಣಸೂರು ತಾಲೂಕಿನ ಕಡೇ ಮನುಗನಹಳ್ಳಿ ಗ್ರಾಮದಲ್ಲಿ.

ವೆಂಕಟೇಶ್ ಎಂಬಾತರ ಜಮೀನಿನಲ್ಲಿ ಈ ಘಟನೆ ನಡೆದಿರೋದು. ವೆಂಕಟೇಶ್ ಅವರಿಗೆ ಒಬ್ಬ ಮಗಳಿದ್ದಾಳೆ. ಅದೇ ಗ್ರಾಮದ ಅಶೋಕ್ ಎಂಬಾತನಿಗೆ ಕೊಟ್ಟು ಮದುವೆ ಮಾಡಬೇಕು ಮಬ ಮಾತುಕತೆ ನಡೆದಿತ್ತು. ಆದರೆ ಹುಡುಗ ಸರಿ ಇಲ್ಲ ಎಂಬ ವಿಚಾರ ಗೊತ್ತಾಗಿ, ಮಗಳನ್ನು ಕೊಡುವ ನಿರ್ಧಾರದಿಂದ ವೆಂಕಟೇಶ್ ಹಿಂದೆ ಸರಿದಿದ್ದಾರೆ. ಇದೇ ದ್ವೇಷಕ್ಕೆ ಅಶೋಕ್ ಬೆಳೆ ನಾಶ ಮಾಡಿದ್ದಾನೆ ಎನ್ನಲಾಗುತ್ತಿದೆ.

ಅಡಿಕೆ ಮಾತ್ರವಲ್ಲ, ವೆಂಕಟೇಶ್ ತಮ್ಮ ಇನ್ನು ಅರ್ಧ ಎಕರೆಯಲ್ಲಿ ಶುಂಠಿಯನ್ನು ಬೆಳೆದಿದ್ದರು. ಮಗಳನ್ನು ಕೊಡಲಿಲ್ಲವಲ್ಲ ಎಂಬ ದ್ವೇಷಕ್ಕೆ ಅಡಿಕೆಗೂ ಮೊದಲು ಶುಂಠಿ ಬೆಳೆಯನ್ನು ನಾಶ ಮಾಡಿದ್ದನಂತೆ. ಬಳಿಕ ಅಡಿಕೆ ಬೆಳೆಯನ್ನು ನಾಶ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಇಷ್ಟೊಂದು ಬೆಳೆ ನಾಶ ಮಾಡಿದ್ದು, ಮಾಲೀಕನ ನೋವಿಗೆ ಕಾರಣವಾಗಿದೆ. ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದ ಬೆಳೆ ಈಗ ನೆಲ ಕಚ್ಚಿರುವುದಕ್ಕೆ ವೆಂಕಟೇಶ್ ಕಣ್ಣೀರು ಸುರಿಸುತ್ತಿದ್ದಾರೆ. ಈ ಸಂಬಂಧ ಅಶೋಕ್ ಮೇಲೆ ದೂರನ್ನು ನೀಡಿದ್ದಾರೆ. ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಬಂಧ ದೂರು ದಾಖಲಾಗಿದೆ.

