ಬೆಂಗಳೂರು: ಆಯಸ್ಸು ಗಟ್ಟಿ ಇದ್ದರೆ ಬಂಡೆ ಕಲ್ಲು ತಲೆ ಮೇಲೆ ಬಿದ್ದರು ಬದುಕುತ್ತಾರೆ. ಆಯಸ್ಸು ಮುಗಿದಿದ್ದರೆ ಒಂದು ಹುಲ್ಲು ಕಡ್ಡಿ ಸಾಕು ಅಂತಾರೆ. ಇವತ್ತು ಆ ವಿಧಿ ಮಜ್ಕಳು ಸೇರಿದಂತೆ ಕುಟುಂಬವನ್ನೇ ಬಲಿ ಪಡೆದಿದೆ. ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದ ಅಪಘಾತದ ತೀವ್ರತೆ ಇಬ್ಬರು ಮಕ್ಕಳು ಸೇರಿದಂತೆ ಆರು ಜನರನ್ನು ಬಲಿ ಪಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ತಾಳೇಕೆರೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸರಣಿ ಅಪಘಾತ ಸಂಭವಿಸಿ ಆರು ಜನ ಅಸುನೀಗಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಲಾರಿ ಕಾರಿನ ಮೇಲೆ ಪಲ್ಟಿಯಾಗಿದೆ. ಪರಿಣಾಮ ಕಾರಿನಲ್ಲಿದ್ದ ಇಬ್ಬರು ಮಕ್ಕಳು ಸೇರಿದಂತೆ ಆರು ಮಂದಿ ಕಾರಿನಲ್ಲಿಯೇ ಅಪ್ಪಚ್ಚಿಯಾಗಿದ್ದಾರೆ. ಈ ದುರಂತ ಅಂತ್ಯ ಕಂಡು ಜನ ಬೆಚ್ಚಿಬಿದ್ದಿದ್ದಾರೆ. ಮಕ್ಕಳ ದೇಹ ಅಪ್ಪಚ್ಚಿಯಾಗಿರುವ ದೃಶ್ಯ ಎಂಥವರ ಹೃದಯವನ್ನು ಕುಗ್ಗಿಸಿದೆ.
ಲಾರಿ ಏಕಾಏಕಿಯಾಗಿ ಕಾರಿನ ಮೇಲೆ ಬಿದ್ದಿದೆ. ಇದರಿಂದ ಕಾರಿನಲ್ಲಿದ್ದವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕಾರಿನಲ್ಲಿ ಇಬ್ಬರು ಮಕ್ಕಳು ಕೂಡ ಇದ್ದರು. ಅಪಘಾತದ ಸ್ಥಳಕ್ಕೆ ಸ್ಥಳೀಯರು ಕೂಡ ಓಡಿ ಬಂದಿದ್ದಾರೆ. ಕಾರಿನ ಮೇಲಿದ್ದ ಲಾರಿಯನ್ನು ಪೊಲೀಸರು ಎತ್ತಿಸಿದ್ದು, ಶವಗಳನ್ನು ಹೊರ ತೆಗೆದಿದ್ದಾರೆ. ಅವರ ಕುಟುಂಬಸ್ಥರ ಬಗ್ಗೆ ಮಾಹಿತಿ ಕಲೆ ಹಾಕಿ, ಅವರಿಗೂ ವಿಷಯ ತಿಳಿಸಲಿದ್ದಾರೆ. ಈ ಅಪಘಾತದ ಫೋಟೋಗಳು ವೈರಲ್ ಆಗುತ್ತಿದ್ದು, ಅದರ ತೀವ್ರತೆ ಹೇಗಿದೆ ಎಂಬುದು ದೃಶ್ಯದಿಂದಾನೇ ಕಾಣಿಸುತ್ತಿದೆ. ಈ ಘಟನೆಯಿಂದಾಗಿ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಒಂದಷ್ಟು ಕಾಲ ಟ್ರಾಫಿಕ್ ಕಿರಿಕಿರಿ ಅನುಭವಿಸಿತ್ತು.