ಚಿತ್ರದುರ್ಗ, (ಮೇ.26) : ಇದೇ ಪ್ರಥಮ ಬಾರಿಗೆ 161 ಜನ ಕಲಾವಿದರೊಂದಿಗೆ ಉತ್ತಮವಾದ ಕಾರ್ಯಕ್ರಮವನ್ನು ಮೇ. 28 ರಂದು ಆಯೋಜಿಸಲಾಗಿದ್ದು ಇದಕ್ಕೆ ಬೇಕಾದ ಎಲ್ಲಾ ರೀತಿಯ ಸಿದ್ದತೆಯನ್ನು ಮಾಡಲಾಗಿದೆ ಎಂದು ಸ್ವಾಗತ ಸಮಿತಿಯ ಸಂಚಾಲಕರಾದ ಬದರಿನಾಥ್ ತಿಳಿಸಿದರು.
ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮಕ್ಕಾಗಿ 180*140 ಅಡಿ ಉದ್ದ ಆಗಲದ ಪೆಂಡಾಲ್‍ನ್ನು ನಿರ್ಮಾಣ ಮಾಡಲಾಗಿದೆ. ಪ್ರೇಕ್ಷಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ವ್ಯವಸ್ಥೆಯನ್ನು ಸಹಾ ಮಾಡಲಾಗಿದ್ದು ಸಂಚಾರಿ ಶೌಚಾಲಯ, ಪುಸ್ತಕ ಮಳಿಗೆ, ವಿವಿಧ ರೀತಿಯ ಅಂಗಡಿಗಳನ್ನು ತೆರೆಯಲು ಸಹಾ ಅವಕಾಶವನ್ನು ಕಲ್ಪಿಸಲಾಗಿದೆ. ಇದರೊಂದಿಗೆ 4500 ಕುರ್ಚಿಗಳನ್ನು ಪೆಂಡಾಲ್‍ನಲ್ಲಿ ಹಾಕಲಾಗುವುದು 1500 ಕುರ್ಚಿಗಳನ್ನು ಮೀಸಲಿರಿಸಲಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ನಮಗಾಗಿ ತಮ್ಮ ಕುಟುಂಬಗಳನ್ನು ತೊರೆದು ಗಡಿಯಲ್ಲಿ ದೇಶದ ರಕ್ಷಣೆ ಮಾಡುತ್ತಾ ಹುತಾತ್ಮರಾದ ಸೈನಿಕರ ಕುಟುಂಬಗಳಿಗೆ ಹಾಗೂ 3 ಗೋಶಾಲೆಗಳಿಗೆ ನೆರವು ನೀಡಲಾಗುವುದು. ಇದೇ ದಿನ ದೇಸಿ ಗೋ ತಳಿಗಳ ಸಂರಕ್ಷಣೆ, ಪ್ರೋತ್ಸಾಹ ನೀಡುವ ಉದ್ದೇಶದಿಂದ ಗೋವುಗಳ ಪ್ರದರ್ಶನ ಮತ್ತು ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಶನಿವಾರ ಬೆಳಗ್ಗೆ 9 ಗಂಟೆಯಿಂದ ಗೋವುಗಳ ಪ್ರದರ್ಶನ ಆರಂಭವಾಗಲಿದೆ. ಆಯ್ದ ಅತ್ಯುತ್ತಮ ಗೋವುಗಳಿಗೆ ಬಹುಮಾನವನ್ನೂ ನೀಡಲಾಗುತ್ತದೆ ಎಂದರು.
ವೀಣಾವಾದನ ಕಾರ್ಯಕ್ರಮದಲ್ಲಿ ರಾಜ್ಯದ ಉಡುಪಿ, ಶಿವಮೊಗ್ಗ, ಭದ್ರಾವತಿ, ದಾವಣಗೆರೆ ಬೆಂಗಳೂರು ಹಾಗೂ ಚಿತ್ರದುರ್ಗದ ಕಲಾವಿದರು ಭಾಗವಹಿಸಲಿದ್ದಾರೆ. ಇದರಲ್ಲಿ 6 ಜನ ಪುರುಷ ವಿದ್ವಾಂಸರಿದ್ದರೆ ಉಳಿದವರೆಲ್ಲಾ ಮಹಿಳೆಯರಾಗಿದ್ದಾರೆ. ಕಾರ್ಯಕ್ರಮ ವೀಕ್ಷಣೆಗಾಗಿ ಎಲ್.ಇ.ಡಿ.ಯನ್ನು ಸಹಾ ಅಳವಡಿಸಲಾಗಿದೆ. ಹುತ್ಮಾತರಾದ ಸಂದೀಪ್ ಶೆಟ್ಟಿ, ಹೆಚ್.ಗುರು, ಸುಂದರ ಎನ್. ವಿನಾಯಕ ಈಶ್ವರ ಪಟಗಾರ, ಅವಿನಾಶ್ ಟಿ. ಫಣೀರಾಜ್ ಹೆಚ್.ಡಿ, ಮಲ್ಲಿಕಾರ್ಜನ್, ಹಾಗೂ ವೀರ ಯೋಧ ಶೌರ್ಯ ಮೆಡಲ್ ಪುರಸ್ಕೃತರಾದ ಮಹೇಶ್ ಹೆಚ್.ಎನ್. ರವರಿಗೆ ಗೌರವ ಸಮರ್ಪಣೆ ಮಾಡಲಾಗುವುದು.
ಸಭಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಸಾನಿಧ್ಯವನ್ನು ನಗರದ ಕಭೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳು ಹಾಗೂ ಹೊಸದುರ್ಗದ ಕುಂಚಿಟಿಗ ಮಹಾ ಸಂಸ್ಥಾನದ ಡಾ.ಶಾಂತವೀರ ಶ್ರೀಗಳು ವಹಿಸಲಿದ್ದಾರೆ. ಡಾ.ಮುಕುಂದರಾವ್ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ವಿಶ್ವ ಹಿಂದು ಪರಿಷತ್‍ನ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶೀ ಕೇಶವ ಹೆಗಡೆ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.
ಯುವ ಬ್ರಿಗೇಡ್ ಮಾರ್ಗದರ್ಶಕರಾದ ಚಕ್ರವರ್ತಿ ಸೂಲಿಬೆಲೆ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ, ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಹಾಗೂ ನಗರಸಭಾ ಅಧ್ಯಕ್ಷರಾದ ಶ್ರೀಮತಿ ತಿಪ್ಪಮ್ಮ ವೆಂಕಟೇಶ್ ಭಾಗವಹಿಸಲಿದ್ದಾರೆ.
ಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷರಾದ ಡಾ.ಮುಕುಂದರಾವ್, ಪ್ರಧಾನ ಕಾರ್ಯದರ್ಶಿ ಸಿದ್ದಾರ್ಥ ಗುಡಾರ್ಪಿ, ಕಾರ್ಯಕ್ರಮ ಸಂಚಾಲಕರಾದ ಪ್ರಭಂಜನ್ ಕಾರ್ಯಕಾರಿ ಸಮಿತಿಯ ಆಧ್ಯಕ್ಷರಾಧ ರಾಮಮೂರ್ತಿ, ವಲ್ಲಕಿ ಗಾನ ನಿಲಯದ ಶ್ರೀಮತಿ ಜ್ಯೋತಿ ಚೇತನ್ ಭಾಗವಹಿಸಿದ್ದರು.