ವರದಿ ಮತ್ತು ಫೋಟೋ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ : ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‍ದಾಸ್ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವಂತೆ ಒತ್ತಾಯಿಸಿ ಅ.9 ರಂದು ನಮ್ಮ ಹೋರಾಟವನ್ನು ಚುರುಕುಗೊಳಿಸುವುದಾಗಿ ಬಹುಜನ ಸಮಾಜ ಪಾರ್ಟಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶೋಕ ಚಕ್ರವರ್ತಿ ರಾಜ್ಯ ಸರ್ಕಾರಕ್ಕೆ ಗಡುವು ನೀಡಿದರು.
ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಮೀಸಲಾತಿಯನ್ನು ಹೆಚ್ಚಿಸುವಂತೆ ನಾಯಕ ಸಮಾಜದ ಪ್ರಸನ್ನಾನಂದ ಸ್ವಾಮೀಜಿಗಳು ಕಳೆದ 238 ದಿನಗಳಿಂದ ಫ್ರೀಡಂ ಪಾರ್ಕಿನಲ್ಲಿ ಧರಣಿ ಕುಳಿತಿದ್ದರೂ ಕೂಡ ರಾಜ್ಯ ಸರ್ಕಾರ ನಿರ್ಲಕ್ಷೆಯಿಂದ ಕಾಣುತ್ತಿದೆ.
ಒಂದು ದಿನವೂ ಬೀದಿಗಿಳಿದು ಹೋರಾಟ ಮಾಡದ ಮೀಸಲಾತಿಯನ್ನೇ ಕೇಳದ ಒಂದು ವರ್ಗದವರಿಗೆ ಕೇಂದ್ರ ಸರ್ಕಾರ ಶೇ.10 ಮೀಸಲಾತಿಯನ್ನು ಘೋಷಿಸಿತು. ಅನೇಕ ವರ್ಷಗಳಿಂದ ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ಎಸ್ಸಿ.ಎಸ್ಟಿ.ಗಳನ್ನು ಸರ್ಕಾರ ಕಡೆಗಣಿಸುತ್ತಿರುವುದರಿಂದ ಪ್ರಸನ್ನಾನಂದ ಸ್ವಾಮೀಜಿಗಳ ಹೋರಾಟಕ್ಕೆ ಬೆಂಬಲಿಸಿ ಅ.9 ರಂದು ವಾಲ್ಮೀಕಿ ಜಯಂತಿಯನ್ನು ದೊಡ್ಡ ಸಮಾವೇಶವ್ನನಾಗಿ ಆಚರಿಸಲಾಗುವುದೆಂದರು.
ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಿ ಮೀಸಲಾತಿ ಘೋಷಿಸುವಲ್ಲಿ ಮೀನಾಮೇಷ ಎಣಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ದ ಜನತೆಯಲ್ಲಿ ಜಾಗೃತಿ ಮೂಡಿಸಲಾಗುವುದು. ಜಿಲ್ಲೆಯಿಂದ ಒಂದು ಸಾವಿರಕ್ಕೂ ಹೆಚ್ಚು ಮಂದಿ ಫ್ರೀಡಂ ಪಾರ್ಕಿನಲ್ಲಿ ನಡೆಯುತ್ತಿರುವ ಧರಣಿಗೆ ಹೊರಡಲಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿ. ಸರ್ಕಾರವನ್ನು ಕಿತ್ತೊಗೆಯುವ ಕುರಿತು ಎಸ್ಸಿ.ಎಸ್ಟಿ.ಗಳನ್ನು ಎಚ್ಚರಿಸಲಾಗುವುದೆಂದು ತಿಳಿಸಿದರು.
ಡಾ.ಬಿ.ಗಿರೀಶ್ ಓಬಯ್ಯನಹಟ್ಟಿ, ಬಿಎಸ್‍ಪಿ.ಮುಖಂಡ ದೊಡ್ಡೊಟ್ಟಪ್ಪ, ತಿಮ್ಮಪ್ಪ ಇನ್ನು ಮೊದಲಾದವರು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.