ಕೈಗಾರಿಕಾ ಕೇಂದ್ರ ಜಂಟಿನಿರ್ದೇಶಕರಾಗಿದ್ದ ಆನಂದ್ ಅವರಿಗೆ ಆತ್ಮೀಯ ಬೀಳ್ಕೊಡುಗೆ

1 Min Read

ಚಿತ್ರದುರ್ಗ. ಮಾರ್ಚ್ 07 : ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯುನಿಕೇಶನ್ ಅಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್, ಬೆಂಗಳೂರು ಇಲ್ಲಿನ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ, ವರ್ಗಾವಣೆಗೊಂಡ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕ ಬಿ. ಆನಂದ್ ಅವರಿಗೆ ಕೈಗಾರಿಕೆ ಇಲಾಖೆ ವತಿಯಿಂದ ಶನಿವಾರದಂದು ಆತ್ಮೀಯವಾಗಿ ಬೀಳ್ಕೊಡುಗೆ ನೀಡಲಾಯಿತು.
ಕಳೆದ ನಾಲ್ಕು ವರ್ಷಗಳ ಕಾಲ ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿರುವ ಬಿ. ಆನಂದ್ ಅವರು, ಜಿಲ್ಲೆಯಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಮಾತ್ರವಲ್ಲದೆ, ದೊಡ್ಡ ಮಟ್ಟದ ಕೈಗಾರಿಕೆಗಳ ಸ್ಥಾಪನೆಗೂ ಸಹಕಾರ ನೀಡಿ, ಇಲ್ಲಿ ಕೋಟ್ಯಾಂತರ ರೂಪಾಯಿಗಳ ಬಂಡವಾಳ ಹೂಡಿಕೆ ಹಾಗೂ ಉದ್ಯೋಗ ಸೃಜನೆಗೂ ಕಾರಣಕರ್ತರಾಗಿದ್ದರು.
ಇವರ ಗಣನೀಯ ಸೇವೆಯನ್ನು ಗುರುತಿಸಿದ ಸರ್ಕಾರ, ಇವರನ್ನು ಕರ್ನಾಟಕ ರಾಜ್ಯದ ಉದ್ಯಮ ಸಂಸ್ಥೆಯಾಗಿರುವ ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯುನಿಕೇಶನ್ ಅಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್ (ಕೆ.ಎಸ್.ಎಂ.ಸಿ.&ಎ) ಗೆ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕಗೊಳಿಸಿ, ವರ್ಗಾವಣೆಗೊಳಿಸಿದ್ದು, ಈಗಾಗಲೆ ಈ ಹುದ್ದೆಯ ಅಧಿಕಾರವನ್ನು ಆನಂದ್ ಅವರು ವಹಿಸಿಕೊಂಡಿದ್ದಾರೆ.
ಚಿತ್ರದುರ್ಗ ಕೈಗಾರಿಕೆ ಇಲಾಖೆಯ ಜಂಟಿನಿರ್ದೇಶಕರ ಹುದ್ದೆಯ ಪ್ರಭಾರವನ್ನು ಇದೇ ಕಚೇರಿಯ ಉಪನಿರ್ದೇಶಕರಾದ ಮಂಜುನಾಥ್ ಅವರಿಗೆ ವಹಿಸಿಕೊಡಲಾಗಿದೆ.  ಹೀಗಾಗಿ ಚಿತ್ರದುರ್ಗ ಜಿಲ್ಲಾ ಕೈಗಾರಿಕಾ ಕೇಂದ್ರದ ಕಚೇರಿಯ ಅಧಿಕಾರಿ, ಸಿಬ್ಬಂದಿ, ವಿವಿಧ ಕೈಗಾರಿಕೋದ್ಯಮಿಗಳು ಬಿ. ಆನಂದ್ ಅವರಿಗೆ ಶನಿವಾರದಂದು ಕೈಗಾರಿಕೆ ಇಲಾಖೆಯ ಕಚೇರಿಯಲ್ಲಿ ಏರ್ಪಡಿಸಿದ ಸಮಾರಂಭದಲ್ಲಿ ಆತ್ಮೀಯವಾಗಿ ಸನ್ಮಾನಿಸಿ, ಬೀಳ್ಕೊಡುಗೆ ನೀಡಿದರು.

Share This Article