ಉಡುಪಿ: ಮೊನ್ನೆ ರಾತ್ರಿ ಊಟ ಮಾಡಿ ಮಲಗಿದ್ದ ವೇಳೆ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ ಆವರಿಸಿಕೊಂಡಿದೆ. ನೋಡ ನೋಡುತ್ತಿದ್ದಂತೆ ಇಡೀ ಮನೆಗೆ ಬೆಂಕಿ ಆವರಿಸಿ, ಮನೆಯಲ್ಲಿದ್ದವರು ಸಂಕಷ್ಟಕ್ಕೆ ಸಿಲುಕಿದ್ದರು. ಮಲಗಿದ್ದವರು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ್ದರು. 55 ವರ್ಷದ ರಮಾನಂದ ಶೆಟ್ಟಿ ಅವರು ನಿನ್ನೆ ಬೆಳಗ್ಗೆ ಸಾವನ್ನಪ್ಪಿದ್ದಾರೆ. ರಮಾನಂದ ಅವರ ಪತ್ನಿ ಅಶ್ವಿನಿ, ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಮನೆಯಲ್ಲಿ ಮಕ್ಕಳು ಸಹ ಮಲಗಿದ್ದರು. ಆದರೆ ಗಾಯಗೊಂಡ ಮಕ್ಕಳು ಸದ್ಯ ಅಪಾಯದಿಂದ ಬಚಾವ್ ಆಗಿದ್ದಾರೆ. ಆಘಾತದಿಂದ ಪಾರಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಅಪ್ಪ ಅಮ್ಮನೆ ಇಲ್ಲದೆ ಅನಾಥರಾಗಿದ್ದಾರೆ. ರಮಾನಂದ ಶೆಟ್ಟಿ ಅವರು ಅಂಬಲಪಾಡಿಯ ಶೆಟ್ಟಿ ಬಾರ್ ಅಂಡ್ ರೆಸ್ಟೊರೆಂಟ್ ಮಾಲೀಕರಾಗಿದ್ದರು. ಇನ್ನು ಅಶ್ವಿನಿ ತಮ್ಮ ಹಿರಿಯ ಮಗನೊಂದಿಗೆ ರೀಲ್ಸ್ ಮಾಡುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಖ್ಯಾತಿ ಪಡೆದಿದ್ದರು.
*ದಂಪತಿ ಸಾವಿಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸಂತಾಪ*
ದುರಂತದಲ್ಲಿ ಸಾವನ್ನಪ್ಪಿದ ಅಶ್ವಿ ಅವರು ಬಿಜೆಪಿ ಪಕ್ಷದಲ್ಲಿಯೂ ಕೆಲಸ ನಿರ್ವಹಿಸುತ್ತಿದ್ದರು. ಉಡುಪಿ ನಗರದ ಮಹಿಳಾ ಮೋರ್ಚಾ ಅಧ್ಯಕ್ಷೆಯೂ ಆಗಿದ್ದರು. ಅವರ ದುರಂತ ಅಂತ್ಯಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸಂತಾಪ ಸೂಚಿಸಿದ್ದು, ಅಶ್ವಿನಿ ಅವರು ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಕುಟುಂಬಸ್ಥರು ಬಂಧುಗಳು, ಹಿತೈಷಿಗಳಿಗೆ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದಿದ್ದಾರೆ. ರಮಾನಂದ್ ದಂಪತಿ ಸ್ಥಳೀಯರು ಸಾವಿಗೆ ಕಂಬನಿ ಮಿಡಿದಿದ್ದಾರೆ.