ಬೆಂಗಳೂರಿನಲ್ಲಿ ಮಹಿಳೆಯ ಭೀಕರ ಕೊಲೆ : 32 ತುಂಡುಗಳಾಗಿ ಕತ್ತರಿಸಿದ್ದ ಮೃತದೇಹ ರೆಫ್ರಿಜರೇಟರ್‌ನಲ್ಲಿ ಪತ್ತೆ…!

2 Min Read

ಬೆಂಗಳೂರು : ನಗರದಲ್ಲಿ ಬೆಚ್ಚಿ ಬೀಳಿಸುವಂತಹ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. 29 ವರ್ಷದ ಮಹಿಳೆಯನ್ನು ಬರ್ಬರವಾಗಿ ಹತ್ಯೆಗೈದು ಆಕೆಯ ದೇಹವನ್ನು 32 ತುಂಡುಗಳಾಗಿ ಕತ್ತರಿಸಿ ರೆಫ್ರಿಜರೇಟರ್‌ನಲ್ಲಿ ಬಚ್ಚಿಡಲಾಗಿದೆ. 15 ದಿನಗಳ ಹಿಂದೆ ಈ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅಪರಾಧ ಸ್ಥಳದಲ್ಲಿ, ಪೊಲೀಸರು ಮೃತಳ ದೇಹವನ್ನು ಆಕೆಯ ಮನೆಯೊಳಗಿನ ರೆಫ್ರಿಜರೇಟರ್‌ನಲ್ಲಿ ಪತ್ತೆ ಹಚ್ಚಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕೊಲೆಯ ಹಿಂದಿನ ಉದ್ದೇಶ ಅಥವಾ ಆರೋಪಿಗಳ ಬಗ್ಗೆ ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಹತ್ಯೆಗೀಡಾದವರನ್ನು ಬೇರೆ ರಾಜ್ಯಕ್ಕೆ ಸೇರಿದವರು ಎಂದು ಗುರುತಿಸಲಾಗಿದೆ. ಆದರೆ ಆಕೆ ತನ್ನ ಕುಟುಂಬದೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾಳೆ ಎಂದು ಬೆಂಗಳೂರು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಮೃತರ ಕುಟುಂಬಸ್ಥರು ಮನೆಗೆ ಬಂದಾಗ ಕೊಲೆ ವಿಷಯ ಬೆಳಕಿಗೆ ಬಂದಿದೆ. ಸ್ಥಳೀಯರ ವಿವರ ಪ್ರಕಾರ, ಕಳೆದ ಕೆಲ ದಿನಗಳಿಂದ ಮನೆಯಿಂದ ದುರ್ವಾಸನೆ ಬರುತ್ತಿದೆ ಎಂದು ಅಕ್ಕಪಕ್ಕದವರು ಸಂಬಂಧಿಕರಿಗೆ ತಿಳಿಸಿದ್ದಾರೆ. ಇದರಿಂದ ಕೊಲೆಯಾದ ಯುವತಿಯ ತಾಯಿ ಹಾಗೂ ಅಕ್ಕ ಮನೆಗೆ ಬಂದು ಬೀಗ ಒಡೆದು ಒಳಗೆ ಹೋಗಿ ನೋಡಿದಾಗ ಕೊಲೆ ನಡೆದಿರುವುದು ಕಂಡು ಬಂದಿದೆ. ಮೂರು ತಿಂಗಳ ಹಿಂದೆ ನಗರದ ವೈಯಾಲಿಕಾವಲ್ ಪೈಪ್ ಲೈನ್ ರಸ್ತೆಯ ವೀರಣ್ಣ ಭವನದ ಬಳಿ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದರು ಎನ್ನಲಾಗಿದೆ. ಈ ಘಟನೆ ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಫೋರೆನ್ಸಿಕ್ ತಂಡ, ಶ್ವಾನದಳ ಹಾಗೂ ಎಫ್‌ಎಸ್‌ಎಲ್ ತಂಡ ಸ್ಥಳಕ್ಕೆ ಧಾವಿಸಿದ್ದು, ಪ್ರಕರಣದ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಘಟನೆ ಕುರಿತು ಬೆಂಗಳೂರು ಕೇಂದ್ರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಸತೀಶ್ ಮಾತನಾಡಿ, ಈ ಕೊಲೆಗೆ ಒಬ್ಬನೇ ಕಾರಣ ಎಂದು ಶಂಕಿಸಲಾಗಿದೆ. ದೇಹದ ಭಾಗಗಳನ್ನು ಸಿಂಗಲ್ ಡೋರ್ ಫ್ರಿಡ್ಜ್ ನಲ್ಲಿ ಇಡಲಾಗಿತ್ತು. ಮೃತ ಮಹಿಳೆಯನ್ನು ಪಶ್ಚಿಮ ಬಂಗಾಳ ರಾಜ್ಯದ ಮಹಾಲಕ್ಷ್ಮಿ ಎಂದು ಗುರುತಿಸಲಾಗಿದೆ. ಬೇರೆ ರಾಜ್ಯಗಳ ಜನರು ಇಲ್ಲಿ ನೆಲೆಸಿದ್ದಾರೆ. ಮಹಿಳೆ ಪತಿಯಿಂದ ಬೇರ್ಪಟ್ಟು ಒಂಟಿಯಾಗಿ ವಾಸಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಸಂಪೂರ್ಣ ವಿವರ ಇನ್ನಷ್ಟೇ ತಿಳಿಯಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏತನ್ಮಧ್ಯೆ, 2022 ರಲ್ಲಿ, ದೆಹಲಿಯ ಮೆಹ್ರೌಲಿಯಲ್ಲಿ ಶ್ರದ್ಧಾ ವಾಕರ್ ಎಂಬ ಹುಡುಗಿಯನ್ನು ಇದೇ ರೀತಿ ಕೊಲೆ ಮಾಡಲಾಗಿತ್ತು ಮತ್ತು ಆಕೆಯ ದೇಹವನ್ನು 36 ತುಂಡುಗಳಾಗಿ ಕತ್ತರಿಸಲಾಗಿತ್ತು. ಆ ಸಮಯದಲ್ಲಿ ಮೆಹ್ರೌಲಿ ಅರಣ್ಯದಲ್ಲಿ ಸತ್ತವರ ದೇಹದ ಭಾಗಗಳನ್ನು ಎಸೆದ ಭೀಕರ ಘಟನೆಯಿಂದ ಇಡೀ ದೇಶವೇ ಬೆಚ್ಚಿಬಿದ್ದಿತ್ತು.

Share This Article
Leave a Comment

Leave a Reply

Your email address will not be published. Required fields are marked *