ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ : ಕಣಿವೆ ಮಾರಮ್ಮನ ಜಾತ್ರಾ ಮಹೋತ್ಸವದ ಅಂಗವಾಗಿ ನಗರ ಪೊಲೀಸ್ ಠಾಣೆ ಆವರಣದಲ್ಲಿರುವ ಕಣಿವೆಮಾರಮ್ಮನ ಮೆರವಣಿಗೆ ಗುರುವಾರ ದೇವಸ್ಥಾನದ ಮುಂಭಾಗದಿಂದ ಆರಂಭಗೊಂಡು ಸಕಲ ವಾದ್ಯಗಳೊಂದಿಗೆ ರಾಜ ಬೀದಿಗಳಲ್ಲಿ ಸಾಗಿತು. ನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ನಯೀಂರವರು ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಬಸವಮಂಟಪ ಮುಂಭಾಗದಿಂದ ದೊಡ್ಡಪೇಟೆ, ಉಚ್ಚಂಗಿಯಲ್ಲಮ್ಮ ದೇವಸ್ಥಾನದ ಮುಂಭಾಗ, ಚಿಕ್ಕಪೇಟೆ, ಆನೆಬಾಗಿಲು, ಗಾಂಧಿವೃತ್ತ, ಬಿ.ಡಿ.ರಸ್ತೆ ಮೂಲಕ ಸಾಗಿದ ಮೆರವಣಿಗೆ ದೇವಸ್ಥಾನಕ್ಕೆ ಹಿಂದಿರುಗಿತು. ಡೊಳ್ಳು, ತಮಟೆ, ಉರುಮೆ, ಕಹಳೆ ಮೆರವಣಿಗೆಯಲ್ಲಿ ಮೊಳಗಿದವು, ವಿವಿಧ ಬಗೆಯ ಆಭರಣ ಹಾಗೂ ಹೂವಿನ ಹಾರಗಳಿಂದ ಕಣಿವೆಮಾರಮ್ಮನನ್ನು ಸಿಂಗರಿಸಲಾಗಿತ್ತು. ತಲೆಯ ಮೇಲೆ ದೇವರುಗಳನ್ನು ಹೊತ್ತಿದ್ದ ಮಹಿಳೆಯರು ಮೆರವಣಿಗೆಯಲ್ಲಿ ಕುಣಿದು ಸಂಭ್ರಮಿಸಿದರು.
ನಿವೃತ್ತ ಸಬ್‌ಇನ್ಸ್ಪೆಕ್ಟರ್‌ಗಳಾದ ಶ್ಯಾಂಪ್ರಸಾದ್, ಕೆ.ಪಿ.ವೆಂಕಟೇಶ್, ನಿವೃತ್ತ ಎ.ಎಸ್.ಐ.ಗಳಾದ ನಾಗೇಂದ್ರಪ್ರಸಾದ್, ನಾಗೇಂದ್ರಪ್ಪ, ಮಹೇಶ್ವರಯ್ಯ, ಲಕ್ಷಿö್ಮನರಸಿಂಹಸ್ವಾಮಿ, ಮಹೇಶ್ವರಪ್ಪ, ಉಪ್ಪಾರ ಸಮಾಜದ ಮುಖಂಡ ಆರ್.ಮೂರ್ತಿ ಸೇರಿದಂತೆ ಪೊಲೀಸ್ ಇಲಾಖೆ ಅನೇಕ ನಿವೃತ್ತರು ಮೆರವಣಿಗೆಯಲ್ಲಿ ಭಾಗವಹಿಸಿ ಕಣಿವೆಮಾರಮ್ಮನಿಗೆ ಭಕ್ತಿ ಸಮರ್ಪಿಸಿದರು.