ದಾವಣಗೆರೆ: ಮೆಡಿಕಲ್ ನ ಬಯೋಕೆಮಿಕಲ್ ಸಂಗ್ರಹದ ಗೋದಾಮಿನಲ್ಲಿ ಬೆಂಕಿ ಅವಘಡ ಸಂಭವಿಸಿದ ಘಟನೆ ಅಕ್ಕಮಹಾದೇವಿ ರಸ್ತೆಯಲ್ಲಿರುವ ಮೈಸೂರು ಮೆಡಿಕಲ್ ಬಯೋ ಕೆಮಿಕಲ್ ಏಜೆನ್ಸಿಯಲ್ಲಿ ನಡೆದಿದೆ. ಈ ದಾಸ್ತಾನುವಿನಿಂದ ಎಲ್ಲೆಡೆ ಬಯೋ ಕೆಮಿಕಲ್ಸ್ ನ್ನು ಸರಬರಾಜು ಮಾಡಲಾಗುತ್ತಿತ್ತು.
ದೀಪಾವಳಿ ಅಮವಾಸ್ಯೆಯ ಪ್ರಯುಕ್ತ ಗೋದಾಮಿನಲ್ಲಿ ಲಕ್ಷ್ಮೀ ಪೂಜೆ ಮಾಡಲಾಗಿತ್ತು. ಆದರೆ ಇಂದು ರಾತ್ರಿ ಸುಮಾರು 8 ಗಂಟೆಯ ವೇಳೆ ಸಿಬ್ಬಂದಿಗಳು ಪಟಾಕಿ ಸಿಡಿಸುವ ವೇಳೆ ಮೊದಲ ಮಹಡಿಯ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ ಬಯೋ ಕೆಮಿಕಲ್ಸ್ ಗೆ ಕಿಟಕಿಯ ಮೂಲಕ ಪಟಾಕಿಯ ಕಿಡಿ ಸಿಡಿದಿದೆ. ಪರಿಣಾಮ ಗೋದಾಮು ಹೊತ್ತಿ ಉರಿದಿದ್ದು, ಬೆಂಕಿಯ ಜ್ವಾಲೆ ಅತಿಯಾಗಿ ಹಬ್ಬಿತ್ತು. ಬಯೋಕೆಮಿಕಲ್ ಗೆ ಕೂಡ ಬೆಂಕಿ ಹೊತ್ತಿತ್ತು. ಹೊಗೆಯ ದಟ್ಟತೆ ಜಾಸ್ತಿಯಾಗಿದೆ. ಸಮೀಪದ ಕಟ್ಟಡದಲ್ಲಿನ ಸಾರ್ವಜನಿಕರು ಬೆಂಕಿ ಹತ್ತಿರುವ ಬಗ್ಗೆ ಏಜೆನ್ಸಿ ಮಾಲೀಕರ ಗಮನಕ್ಕೆ ತಂದಿದ್ದಾರೆ.
ಕೆಳ ಮಹಡಿಯಲ್ಲಿದ್ದ ಏಜೆನ್ಸಿಯ ಮಾಲೀಕರು, ಸಿಬ್ಬಂದಿಗಳು ತಕ್ಷಣವೇ ಎಚ್ಚೆತ್ತುಕೊಂಡು ಅಗ್ನಿಶಾಮಕ ದಳಕ್ಕೆ ವಿಷಯ ಮುಟ್ಟಿಸಿದರು. ತಕ್ಷಣವೇ ಬಂದ ಅಗ್ನಿಶಾಮಕದವರು ಬೆಂಕಿ ನಂದಿಸಲು ಹರಸಾಹಸಪಟ್ಟರು. ಒಂದು ಅಗ್ನಿಶಾಮಕ ವಾಹನದಿಂದ ಬೆಂಕಿ ನಂದಿಸಲು ಆಗದಿದ್ದಾಗ ಮತ್ತೊಂದು ಅಗ್ನಿ ಶಾಮಕ ವಾಹನ ಸ್ಥಳಕ್ಕೆ ದೌಡಾಯಿಸಿ ಬೆಂಕಿ ಜ್ವಾಲೆ ತಹಬಂದಿಗೆ ತರಲು ಪ್ರಯತ್ನಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಆ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ.