ಸುದ್ದಿಒನ್, ಹಿರಿಯೂರು, ಮಾರ್ಚ್. 16 : ಆರತಕ್ಷತೆಯ ನಂತರ ಏರ್ಪಡಿಸಿದ್ದ ಭೋಜನದಲ್ಲಿ ಕೊನೆಗೆ ಬಂದ ಕೆಲವರಿಗೆ ಕುಡಿಯುವ ನೀರು ಸಿಗಲಿಲ್ಲ ಎಂಬ ಕಾರಣಕ್ಕೆ ಆರಂಭವಾದ ಜಗಳ ಮದುವೆ ನಿಲ್ಲುವ ಮಟ್ಟಕ್ಕೆ ತಲುಪಿರುವ ಘಟನೆ ನಗರದ ರಾಷ್ಟ್ರೀಯ ಹೆದ್ದಾರಿ 48ಕ್ಕೆ ಹೊಂದಿಕೊಂಡಿರುವ ಬಲಿಜ ಶ್ರೇಯ ಭವನದಲ್ಲಿ ಭಾನುವಾರ ನಡೆದಿದೆ.

ಶನಿವಾರ ರಾತ್ರಿ ಆರತಕ್ಷತೆ ನಂತರ ಕೆಲವರು ತಡವಾಗಿ ಊಟಕ್ಕೆ ಬಂದಿದ್ದು, ಕ್ಯಾಟರಿಂಗ್ ನವರು ಸಕಾಲಕ್ಕೆ ಕುಡಿಯುವ ನೀರು ಕೊಡಲಿಲ್ಲ ಎಂಬ ಕಾರಣಕ್ಕೆ ಆರಂಭವಾದ ಜಗಳ ವಿಕೋಪಕ್ಕೆ ಹೋಗಿ, ಭಾನುವಾರ ಬೆಳಿಗ್ಗೆ ಮುಹೂರ್ತ ಮುಂದುವರಿಸಲು ಎರಡು ಕಡೆಯವರು ನಡೆಸಿದ ಸಂಧಾನ ವಿಫಲವಾಯಿತು ಎನ್ನಲಾಗಿದೆ.

ತುಮಕೂರು ಜಿಲ್ಲೆ ಶಿರಾ ತಾಲೂಕಿನ ಚಿರತಹಳ್ಳಿಯ ವಧು ಹಾಗೂ ಜಗಳೂರು ಪಟ್ಟಣದ ವರನ ವಿವಾಹ ಇಲ್ಲಿ ನಡೆಯಬೇಕಿತ್ತು. ವಧು ವರ ಇಬ್ಬರು ಇಂಜಿನಿಯರಿಂಗ್ ಪದವೀಧರರು.

