ಚಿತ್ರದುರ್ಗ : ದೇವಾಲಯದ ಪೂಜೆ ಮಾಡುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ 9ಗಂಟೆ ಸಮಯದಲ್ಲಿ ನಡೆದಿದೆ.
ಜಿಲ್ಲೆಯ ಹೊಸದುರ್ಗ ತಾಲೂಕಿನ ಮತ್ತೋಡು ಹೋಬಳಿಯ ಕಂಚಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಜ್ಜಯ್ಯನಟ್ಟಿಯ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ವೀರ ಮಾರಣ್ಣ ಎಂಬ ಕಾಡುಗೊಲ್ಲ ಸಮುದಾಯದ ದೇವಸ್ಥಾನವಿದೆ. ಈ ದೇವಸ್ಥಾನದ ಪೂಜಾರಿಕೆ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ವೈಮನಸ್ಸು ಉಂಟಾಗಿತ್ತು. ನಮಗೆ ಪೂಜಾರಿಕೆ ಬೇಕು ಎಂದು ಒಂದು ಗುಂಪಿನವರು ಕೋರ್ಟ್ ಮೆಟ್ಟಿಲೆರಿದ್ದರು. ಈ ಪ್ರಕರಣ ಕೋರ್ಟ್ ನಲ್ಲಿ ಇದೆ ಎಂಬ ಮಾಹಿತಿ ಲಭ್ಯವಾಗಿದೆ. ಗ್ರಾಮದಲ್ಲಿ ಪೂಜಾರಿಕೆ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಪೂಜೆ ಮಾಡುವ ವಿಚಾರದಲ್ಲಿ ಆಗಾಗ ಹೊಗೆಯಾಡುತ್ತಿತ್ತು. ಆದರೆ ಇಂದು ಎರಡು ಗುಂಪುಗಳ ನಡುವೆ ದೊಣ್ಣೆ, ಬಡಿಗೆಗಳಿಂದ ಮಾರಾಮಾರಿ ನಡೆದಿದೆ. ಘಟನೆಯಲ್ಲಿ ಹಲವಾರು ಜನರಿಗೆ ಗಂಭೀರ ಗಾಯವಾಗಿದ್ದು ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಈ ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
ಮಾಜಿ ಸಚಿವ ಪ್ರತಿಕ್ರಿಯೆ : ಘಟನೆ ಬಗ್ಗೆ ಮಾಜಿ ಸಚಿವ ಗೂಳಿಹಟ್ಟಿ ಡಿ ಶೇಖರ್ ಆಡಿಯೋ ಬಿಡುಗಡೆ ಮಾಡಿದ್ದು 500, 1000 ಸಾವಿರ ಪಡೆದುಕೊಂಡು ಮತ ಹಾಕಿದ ಪರಿಣಾಮವಾಗಿ ಗ್ರಾಮಗಳಲ್ಲಿ ಗುಂಪು ಘರ್ಷಣೆ ನಡೆಯುತ್ತಿದೆ ಎಂದು ಶಾಸಕ ಬಿಜಿ ಗೋವಿಂದಪ್ಪ ವಿರುದ್ಧ ಕಿಡಿ ಕಾರಿದ್ದಾರೆ. ನಾನು ಕೂಡ ಹತ್ತು ವರ್ಷಗಳ ಕಾಲ ಅಲ್ಲಿದ್ದೆ. ಒಂದು ಸಣ್ಣ ಕೂಡ ಆ ಗ್ರಾಮದಲ್ಲಿ ಘಟನೆ ಆಗಲು ಬಿಟ್ಟಿರಲಿಲ್ಲ. 500,100 ಸಾವಿರ ಹಣ ಪಡೆದ ಪರಿಣಾಮವಾಗಿ ರಕ್ತದ ಓಕುಳಿ ನಡೆದಿದೆ. ಜಿಲ್ಲೆಯ ಜನತೆ ಗಮನಿಸಿ ಆಡಳಿತ ಎಲ್ಲಿಗೆ ಬಂದಿದೆ ಎಂದು ಕಾಂಗ್ರೆಸ್ ಸರ್ಕಾರ ವಿರುದ್ಧ ಗುಡುಗಿದರು.