ಬೆಂಗಳೂರು: ವಿಭಿನ್ನ ಕಥಾಹಂದರದ ಮೂಲಕ ಸ್ಯಾಂಡಲ್ವುಡ್ನಲ್ಲಿ ನಿರೀಕ್ಷೆ ಮೂಡಿಸಿರುವ ‘A Date’ ಚಲನಚಿತ್ರದ ಅಧಿಕೃತ ಟ್ರೈಲರ್ ಬಿಡುಗಡೆಯಾಗಿದೆ. ಈಗಾಗಲೇ ಕಿರುಚಿತ್ರಗಳ ಮೂಲಕ ಗಮನ ಸೆಳೆದಿರುವ ವಿಮಲ್ ರಾಜ್ ಎನ್ ನಿರ್ದೇಶನದ ಈ ಚಿತ್ರ, ಇದೇ ಸೆಪ್ಟೆಂಬರ್ 4ರಂದು ರಾಜ್ಯಾದ್ಯಂತ ತೆರೆಕಾಣಲು ಸಜ್ಜಾಗಿದೆ.
ಚಿತ್ರ ಬಿಡುಗಡೆಯ ಹೊಸ್ತಿಲಿನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಹಲವು ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡಿತು. ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ವಿಮಲ್ ರಾಜ್ ಎನ್, ನಾಯಕ ಸುಜನೀತ್ ಶೆಟ್ಟಿ, ನಾಯಕಿ ಅಶ್ವಿನಿ ಶೆಣೈ ಹಾಗೂ ಛಾಯಾಗ್ರಾಹಕ ದೇವೇಂದ್ರ ರೆಡ್ಡಿ ಉಪಸ್ಥಿತರಿದ್ದರು.
ಚಿತ್ರದ ಹುಟ್ಟಿನ ಬಗ್ಗೆ ಮಾಹಿತಿ ಹಂಚಿಕೊಂಡ ನಿರ್ದೇಶಕ ವಿಮಲ್ ರಾಜ್ ಎನ್, “2020ರಲ್ಲಿ ನಿರ್ಮಾಪಕರನ್ನು ಸೆಳೆಯುವ ಉದ್ದೇಶದಿಂದ ‘A Date’ ಹೆಸರಿನಲ್ಲೇ ಇಂಗ್ಲಿಷ್ ಕಿರುಚಿತ್ರ ಮಾಡಿದ್ದೆವು. ಆದರೆ ನಿರ್ಮಾಪಕರು ಸಿಗದ ಕಾರಣ ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡಿದೆವು. ಆ ಕಿರುಚಿತ್ರಕ್ಕೆ ಬರೋಬ್ಬರಿ 72 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಹಾಗೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ಅದೇ ಆತ್ಮವಿಶ್ವಾಸದಿಂದ ಈಗ ಪೂರ್ಣ ಪ್ರಮಾಣದ ಸಿನಿಮಾ ರೂಪಿಸಿದ್ದೇವೆ” ಎಂದರು.
ಒಂದು ದಿನದ ಕಥೆ
ಬೆಂಗಳೂರಿನ ಯುವಕ ಹಾಗೂ ದೆಹಲಿ ಮೂಲದ ಯುವತಿಯ ನಡುವೆ ಕೇವಲ ಒಂದು ದಿನದಲ್ಲಿ ನಡೆಯುವ ಘಟನೆಗಳ ಸುತ್ತ ಈ ಚಿತ್ರದ ಕಥೆ ಸಾಗಲಿದೆ. 2016ರಿಂದ ಕಿರುಚಿತ್ರಗಳನ್ನು ನಿರ್ದೇಶಿಸುತ್ತಾ ಬಂದಿರುವ ವಿಮಲ್ ರಾಜ್ ಅವರಿಗೆ ಇದು ಪೂರ್ಣ ಪ್ರಮಾಣದ ಮೊದಲ ಸಿನಿಮಾ.
‘ಹೋಪ್’, ‘ಲಾಫಿಂಗ್ ಬುದ್ಧ’ ಖ್ಯಾತಿಯ ಸುಜನೀತ್ ಶೆಟ್ಟಿ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದ್ದು, ಆಡಿಷನ್ ಮೂಲಕ ಆಯ್ಕೆಯಾದ ಪ್ರತಿಭಾನ್ವಿತ ನಟಿ ಅಶ್ವಿನಿ ಶೆಣೈ ನಾಯಕಿಯಾಗಿ ಅಭಿನಯಿಸಿದ್ದಾರೆ.
ವೀಕೆಂಡ್ ಶಾರ್ಟ್ಸ್ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಸಮಾನ ಮನಸ್ಕರ ತಂಡ ಈ ಚಿತ್ರವನ್ನು ನಿರ್ಮಿಸಿದ್ದು, ಖ್ಯಾತ ಪಿವಿಆರ್ ಐನಾಕ್ಸ್ (PVR INOX) ಸಂಸ್ಥೆ ಚಿತ್ರವನ್ನು ಅರ್ಪಿಸಿ ವಿತರಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ.
ಚಿತ್ರಕ್ಕೆ ಮೋಕ್ಷ ಬೀಟ್ಸ್ ಸಂಗೀತ ನೀಡಿದ್ದು, ವಡ್ಡೆ ದೇವೇಂದ್ರ ರೆಡ್ಡಿ ಛಾಯಾಗ್ರಹಣ ನಿರ್ವಹಿಸಿದ್ದಾರೆ. ವಿಮಲ್ ರಾಜ್ ಎನ್ ಸಂಕಲನದ ಜವಾಬ್ದಾರಿ ಹೊತ್ತಿದ್ದು, ಹಾಡುಗಳಿಗೆ ಸುಜನೀತ್ ಶೆಟ್ಟಿ ಹಾಗೂ ವಿಮಲ್ ರಾಜ್ ಸಾಹಿತ್ಯ ಬರೆದಿದ್ದಾರೆ.










