ಬೆಂಗಳೂರು: ಕಾಂಗ್ರೆಸ್ ಪಕ್ಷ ಚುನಾವಣೆಗೂ ಮುನ್ನ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು. ಈಗ ಅಧಿಕಾರಕ್ಕೆ ಬಂದಿದೆ. ಜನ ರೊಚ್ಚಿಗೆದ್ದಿದ್ದಾರೆ. ನಮಗೆ ಆ ಯೋಜನೆಗಳ ಉಪಯೋಗ ಮಾಡಿಕೊಡಿ ಅಂತ. ಸರ್ಕಾರ ಇನ್ನು ಚರ್ಚೆ ಮಾಡುವ ಹಂತದಲ್ಲಿದ್ದರೆ ಜನ ತಾವಾಗಿಯೇ ನಿರ್ಧಾರಕ್ಕೂ ಬಂದು ಬಿಟ್ಟಿದ್ದಾರೆ. ಕರೆಂಟ್ ಬಿಲ್ ಕಟ್ಟುವುದಕ್ಕೆ ಒಪ್ಪದೆ, ಬಸ್ ಟಿಕೆಟ್ ತೆಗೆದುಕೊಳ್ಳುವುದಕ್ಕೂ ಒಪ್ಪಿಗೆ ನೀಡುತ್ತಿಲ್ಲ. ಹೀಗಾಗಿ ಇಂಧನ ಇಲಾಖೆ ಒಂದು ನಿರ್ಧಾರಕ್ಕೆ ಬಂದಿದೆ.
ಕರೆಂಟ್ ಬಿಲ್ ಕಟ್ಟಲ್ಲ ಎಂದವರಿಗೆ ಮುಲಾಜಿಲ್ಲದೆ ಕರೆಂಟ್ ಕನೆಕ್ಷನ್ ಕಿತ್ತಾಕುವುದಕ್ಕೆ ನಿರ್ಧಾರ ಕೈಗೊಂಡಿದೆ. ಬಿಲ್ ಕಟ್ಟಲ್ಲ ಎಂದು ವಾಗ್ವಾದಕ್ಕಿಳಿದವರಿಗೆ ಕರೆಂಟ್ ಕನೆಕ್ಷನ್ ಕಿತ್ತಾಕಿ ಎಂದು ಎಸ್ಕಾಂ ಇಲಾಖೆ ಸೂಚನೆ ನೀಡಿದೆ. ಎರಡು ತಿಂಗಳು ಬಾಕಿ ಇರುವ ಮನೆಯಲ್ಲಿ ಸಂಪರ್ಕ ಕಟ್, ಮೂರು ತಿಂಗಳು ಬಾಕಿ ಇದ್ದರೆ ಲೈಸೆನ್ಸ್ ರದ್ದು ಮಾಡಲು ಸೂಚಿಸಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮನೆಗೆ 200 ಯೂನಿಟ್ ವಿದ್ಯುತ್ ಫ್ರೀ ಕೊಡುವ ಬಗ್ಗೆ ಪ್ರಣಾಳಿಕೆಯಲ್ಲಿ ಹೊರಡಿಸಿತ್ತು. ಆದರೆ ಇನ್ನು ಅಧಿಕೃತ ಆದೇಶ ಬಂದಿಲ್ಲ. ಅಧಿಕೃತವಾಗಿ ಆದೇಶ ಬರಯವ ತನಕ ಬಿಲ್ ಕಟ್ಟಲೇ ಬೇಕು. ಇಲ್ಲ ಅಂದ್ರೆ ಸಂಪರ್ಕ ಕಡಿತಗೊಳಿಸಲು ಸೂಚನೆ ನೀಡಲಾಗಿದೆ.