ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ನವೆಂಬರ್. 23 : ನಿತ್ಯ ವಿದ್ಯಾರ್ಥಿಯಾಗಿರುವವನೆ ಅತ್ಯುತ್ತಮ ಶಿಕ್ಷಕ. ಕೇವಲ ಪದವಿ ಪಡೆದರೆ ಸಾಲದು. ಶಿಕ್ಷಣದ ಜೊತೆ ಕೌಶಲ್ಯವಿದ್ದಾಗ ಮಾತ್ರ ಬದುಕಿನಲ್ಲಿ ಯಶಸ್ಸು ಕಂಡುಕೊಳ್ಳಬಹುದೆಂದು ನಿವೃತ್ತ ಪ್ರಾಧ್ಯಾಪಕ ಹಾಗೂ ಸಾಹಿತಿ ಪ್ರೊ.ಹೆಚ್.ಎ.ಭಿಕ್ಷಾವರ್ತಿಮಠ್ ತಿಳಿಸಿದರು.
ದಾವಣಗೆರೆ ವಿಶ್ವವಿದ್ಯಾನಿಲಯ, ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಹತ್ತು ಬೆಳದಿಂಗಳ ಸಮಾರೋಪ ಹಾಗೂ ದ್ವಿತೀಯ ಬಿ.ಇ.ಡಿ.
ಪ್ರಶಿಕ್ಷಣಾರ್ಥಿಗಳಿಗೆ ಬೀಳ್ಕೊಡಿಗೆ ಸಮಾರಂಭ ಉದ್ಗಾಟಿಸಿ ಮಾತನಾಡಿದರು. ಪದವಿಧರರೆಲ್ಲಾ ಪ್ರಜ್ಞಾವಂತರಲ್ಲ. ಜನನಾಯಕರೆಲ್ಲಾ ಜನಸೇವಕರಲ್ಲ. ಕೈಯಲ್ಲಿ ಪುಸ್ತಕ ಹಿಡಿದವರೆಲ್ಲಾ ಅಧ್ಯಾಪಕರಲ್ಲ. ಹೃದಯವಿದ್ದವರೆಲ್ಲಾ ಹೃದಯವಂತರಲ್ಲ. ಶಿಕ್ಷಣದ ಪರೀಕ್ಷೆಗಿಂತ ಬದುಕಿನ ಪರೀಕ್ಷೆಯಲ್ಲಿ ಫೇಲಾಗಬಾರದು. ಜೀವನ ಕೌಶಲ್ಯವಿಲ್ಲದವರು ಮಾತ್ರ ಬದುಕಿನಲ್ಲಿ ಫೇಲಾಗುತ್ತಾರೆ. ಪ್ರತಿಯೊಬ್ಬರ ಜೀವನದಲ್ಲಿಯೂ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಬರುತ್ತವೆ. ಜಗತ್ತು ದಿನನಿತ್ಯವೂ ಹೊಸ ಅನುಭವ ಕಲಿಸುತ್ತದೆ. ಮಾತಿನಿಂದ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಏನೆಂಬುದು ಗೊತ್ತಾಗುತ್ತದೆಯೆಂದರು.
ಮೌನಕ್ಕೆ ದೊಡ್ಡ ಶಕ್ತಿಯಿದೆ. ಮೌನದಿಂದ ವ್ಯಕ್ತಿತ್ವ ಬೆಳೆಯುತ್ತದೆ. ಶಿಕ್ಷಕ ಮಾತೃ ಹೃದಯಿಯಾಗಿರಬೇಕು. ವಿದ್ಯಾರ್ಥಿಗಳು ನಿಮ್ಮ ನಡೆ ನುಡಿಯನ್ನು ಗಮನಿಸುತ್ತಿರುತ್ತಾರೆ. ಹಾಗಾಗಿ ನಿಮ್ಮ ವರ್ತನೆ ಕನ್ನಡಿಯಂತಿರಬೇಕೆಂದು ಶಿಕ್ಷಕರಿಗೆ ಕರೆ ನೀಡಿದರು. ಪಠ್ಯದ ಜೊತೆಗೆ ವಿವೇಕ, ಬುದ್ದಿವಂತಿಕೆ, ಸಾಹಿತ್ಯ ಬದುಕಿಗೆ ನೆರವಾಗುತ್ತದೆ. ಎಲ್ಲಿ ಯಾವಾಗ ಯಾರ ಮುಂದೆ ಏನು ಹೇಗೆ ಮಾತನಾಡಬೇಕೆಂಬ ಸಂಸ್ಕಾರ ಕಲಿಯುವುದು ಜೀವನದ ಒಂದು ಕೌಶಲ್ಯ ಎಂದು ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರಿನ ಆಡಳಿತ ವಿಭಾಗದ ಕುಲಸಚಿವ ಪ್ರೊ.ಪ್ರವೀಣ್ ಕೆ.ಬಿ. ಬೀಳ್ಕೊಡುಗೆ ಸಮಾರಂಭ ಉದ್ಗಾಟಿಸಿ ಮಾತನಾಡುತ್ತ ಬಿ.ಇ.ಡಿ. ಶಿಕ್ಷಣ ಮುಗಿಸಿಕೊಂಡು ಹೊರಗೆ ಹೋಗುವ ನೀವುಗಳು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು. ಸದೃಢ ಸಮಾಜ ನಿರ್ಮಿಸುವ ಹೊಣೆಗಾರಿಕೆ ನಿಮ್ಮ ಮೇಲಿರುವುದರಿಂದ ಒಳ್ಳೆಯ ಪ್ರಜೆಗಳನ್ನು ರೂಪಿಸಬೇಕು. ವರ್ತನೆಯನ್ನು ಅಧ್ಯಯನ ಮಾಡುವುದೇ ಮನೋವಿಜ್ಞಾನ. ಜೀವನದಲ್ಲಿ ಆನಂದ ಎನ್ನವುದು ಸುಲಭವಲ್ಲ. ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಕಾರ್ಯದರ್ಶಿ ಕೆ.ಎಂ.ವೀರೇಶ್‍ರವರು ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು ಡಾಕ್ಟರೇಟ್ ಗೌರವ ನೀಡಿ ಸನ್ಮಾನಿಸಿದೆ. ಮೈಸೂರು ವಿ.ವಿ.ಯಿಂದ ಡಾಕ್ಟರೇಟ್ ಪಡೆದುಕೊಳ್ಳುವುದು ಅಷ್ಟು ಸುಲಭವಲ್ಲ ಎಂದರು.
ಬೀಳ್ಕೊಡುಗೆ ಸಮಾರಂಭದ ಸಾನಿಧ್ಯ ವಹಿಸಿದ್ದ ಕಬೀರಾನಂದಾಶ್ರಮದ ಶಿವಲಿಂಗಾನಂದಸ್ವಾಮಿಗಳು ಆಶೀರ್ವಚನ ನೀಡಿ ಚಿತ್ರದುರ್ಗದಲ್ಲಿ ನಡೆದ ಅಖಿಲ ಭಾರತ 75 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ಕೆ.ಎಂ.ವೀರೇಶ್‍ರವರು ಸಮ್ಮೇಳನ ಅಚ್ಚುಕಟ್ಟಾಗಿ ನಡೆಸುವಲ್ಲಿ ಯಶಸ್ವಿಯಾದರು. ಎಲ್ಲರಿಗೂ ಚಿರಪರಿಚಿತರಾಗಿರುವ ಅವರು ಎಲ್ಲರೊಂದಿಗೆ ಉತ್ತಮ ಒಡನಾಟವಿಟ್ಟುಕೊಂಡಿದ್ದಾರೆಂದು ಗುಣಗಾನ ಮಾಡಿದರು.
ಶಿಕ್ಷಣ ಸಂಸ್ಥೆ ನಡೆಸುವುದೆಂದರೆ ಕಠಿಣವಾದ ಹಾದಿ, ನಾನಾ ಬಗೆಯ ಎಡರು ತೊಡರುಗಳನ್ನು ದಾಟಿಕೊಂಡು ಡಾ.ಕೆ.ಎಂ.ವೀರೇಶ್‍ರವರು 2004 ರಲ್ಲಿ ಆರಂಭಿಸಿದ ಹತ್ತು ಬೆಳದಿಂಗಳ ಕಾರ್ಯಕ್ರಮವನ್ನು ಇಲ್ಲಿಯವರೆಗೂ ನಿರಂತರವಾಗಿ ಮುನ್ನಡೆಸಿಕೊಂಡು ಬರುತ್ತಿರುವುದು ದೊಡ್ಡ ಸಾಧನೆ ಎಂದು ಹೇಳಿದರು.
ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರದ ಪ್ರೊ.ಎಂ.ಆರ್.ಜಯಲಕ್ಷ್ಮಿ ಪ್ರಾಸ್ತಾವಿಕವಾಗಿ ಮಾತನಾಡುತ್ತ ರಂಗ ನಿರ್ದೇಶಕ ಅಶೋಕ್‍ಬಾದರದಿನ್ನಿರವರ ಕನಸಿನ ಕೂಸು ಹತ್ತು ಬೆಳದಿಂಗಳ ಕಾರ್ಯಕ್ರಮ 2004 ರಲ್ಲಿ ರೂಪಿಸಲಾಯಿತು. ಪಠ್ಯೇತರ ಚಟುವಟಿಕೆಳನ್ನು ವಿದ್ಯಾರ್ಥಿಗಳು ಮಾತನಾಡುವಂತಾಗಬೇಕೆನ್ನುವುದು ಇದರ ಉದ್ದೇಶ. ಶಿಕ್ಷಕರು ಅಭಿನಯದ ಕಲೆ ಕಲಿಯುವಂತ ಅವಕಾಶವನ್ನು ಬಾಪೂಜಿ ಶಿಕ್ಷಣ ಮಹಾವಿದ್ಯಾಲಯ ಕಲ್ಪಿಸಿದೆ. ಕೌಶಲ್ಯ ಬದುಕಿಗೆ ಮುಖ್ಯ. ಕೌಶಲ್ಯವುಳ್ಳ ಶಿಕ್ಷಕರು ಮನೆಯಲ್ಲಿ ಕೂರುವುದಿಲ್ಲ ಎಂದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಕೆ.ಎಂ.ವೀರೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಉಪ ಪ್ರಾಚಾರ್ಯರಾದ ಪ್ರೊ.ಎಚ್.ಎನ್.ಶಿವಕುಮಾರ್ ವೇದಿಕೆಯಲ್ಲಿದ್ದರು. ಇದೇ ವೇಳೆ ಪ್ರೊ.ಹೆಚ್.ಎ.ಭಿಕ್ಷಾವರ್ತಿಮಠ್‍ರವರ ಆಧುನಿಕ ವಚನ ಸ್ಪಂದನ ಕೃತಿ ಬಿಡುಗಡೆಗೊಳಿಸಲಾಯಿತು.