ಬ್ಯಾಟರಾಯನಪುರ : ಚಿಕ್ಕಂದಿನಲ್ಲಿ ನಾವು ಏನೆಲ್ಲಾ ಕನಸು ಕಂಡಿರುತ್ತೇವೆ. ಡಾಕ್ಟರ್, ಇಂಜಿನಿಯರ್ ಆಗಬೇಕೆನ್ನುವ ಹಂಬಲ ಎಲ್ಲರದ್ದು. ಆದರೆ, ಆಸೆ ಇದ್ದರಷ್ಟೇ ಸಾಲದು ಅದಕ್ಕೆ ಶ್ರಮವೂ ಮುಖ್ಯ ಎಂದು ಬ್ಯಾಟರಾಯನಪುರ ಶಾಸಕಾರದ ಶ್ರೀ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಕ್ಷೇತ್ರದ ಚಿಕ್ಕಜಾಲದಲ್ಲಿ ಹಮ್ಮಿಕೊಂಡಿದ್ದ ನಮ್ಮ ಯಂಗ್ ಸ್ಟಾರ್ ಹಾಗೂ ನಮ್ಮೂರ ಹೆಮ್ಮೆ ಕಾರ್ಯಕ್ರಮದ 9ನೇ ಹಾಗೂ ಕಡೆಯ ಆವೃತ್ತಿಯ ಕಾರ್ಯಕ್ರಮದಲ್ಲಿ ಸಭಿಕರನ್ನುದ್ದೇಶಿಸಿ ಅವರು ಮಾತನಾಡಿದರು.
ಶ್ರಮವಿದ್ದರೆ ಮಾತ್ರ ಪ್ರತಿಫಲ ದೊರೆಯುತ್ತಿದೆ. ಯಾವ ಮಕ್ಕಳು ಉತ್ತಮ ಪರಿಶ್ರಮ ಹಾಕುತ್ತಾರೋ ಅಂತಹ ಮಕ್ಕಳಿಗೆ ಉತ್ತಮ ಅಂಕಗಳು ದೊರೆಯುತ್ತದೆ. ಮಕ್ಕಳ ಶೈಕ್ಷಣಿಕ ಸಾಧನೆಗೆ ಪೋಷಕರ ಸಹಕಾರ ಅತಿ ಮುಖ್ಯ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮಾತ್ರ ಪ್ರಗತಿ ಹೊಂದಿದರೆ ಸಾಲದು ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಅವರು ಮುಂದಿರಬೇಕು ಆಗ ಮಾತ್ರ ಅವರು ಓದು ಮುಗಿಸಿದ ನಂತರ ಬದುಕಿನಲ್ಲಿ ಸೆಟಲ್ ಆಗಲು ಸಾಧ್ಯ ಎಂದು ಅವರು ಹೇಳಿದರು.
ಕ್ಷೇತ್ರದ ಯುವ ಜನತೆಯ ಶೈಕ್ಷಣಿಕ ಹಾಗೂ ಪಠ್ಯೇತರ ಪ್ರತಿಭೆಯನ್ನು ಗುರುತಿಸಲು ಕ್ರಮವಾಗಿ ನಮ್ಮೂರ ಹೆಮ್ಮೆ ಹಾಗೂ ನಮ್ಮ ಯಂಗ್ ಸ್ಟಾರ್ ಕಾರ್ಯಕ್ರಮವನ್ನು ಎಲ್ಲಾ ವಾರ್ಡ್‌ಗಳಲ್ಲೂ ಆಯೋಜಿಸಲಾಗಿತ್ತು. ಸುಮಾರು ಎರಡು ತಿಂಗಳುಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗಿದೆ. ಪ್ರತೀ ವಾರ್ಡ್‌ನಲ್ಲಿ ಕಾರ್ಯಕ್ರಮ ನಡೆಸಿದಾಗಲೂ ಕನಿಷ್ಠ ನಾಲ್ಕು ಸಾವಿರ ಮಂದಿ ಹಾಜರಿದ್ದು ನಮ್ಮ ಪ್ರಯತ್ನಕ್ಕೆ ಬೆನ್ನು ತಟ್ಟಿದ್ದಾರೆ ಎಂದು ತಿಳಿಸಿದರು.
2 ತಿಂಗಳ ಕಾರ್ಯಕ್ರಮಕ್ಕೆ ತೆರೆ:
ಕ್ಷೇತ್ರದ ಯುವ ಪ್ರತಿಭೆಗಳನ್ನು ಗುರುತಿಸುವ ಹಾಗೂ ಎಸ್ಸೆಸ್ಸೆಲ್ಸಿ, ಪಿಯುನಲ್ಲಿ ಶೇ65ಕ್ಕಿಂತ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಬೇಕೆನ್ನುವ ಉದ್ದೇಶದಿಂದ ಕೃಷ್ಣ ಬೈರೇಗೌಡ ಅವರು ಎರಡು ತಿಂಗಳ ಹಿಂದೆ ನಮ್ಮ ಯಂಗ್ ಸ್ಟಾರ್ ಹಾಗೂ ನಮ್ಮೂರ ಹೆಮ್ಮೆ ಎನ್ನುವ ಕಾರ್ಯಕ್ರಮವನ್ನು ಪ್ರತೀ ವಾರ್ಡ್ನಲ್ಲಿ ನಡೆಸಲು ನಿರ್ಧರಿಸಿದ್ದರು. ಅದರಂತೆ ವಿವಿಧ ವಾರ್ಡ್ಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 3100 ಮಂದಿಗೆ ಸನ್ಮಾನ ಮಾಡಲಾಗಿದ್ದು, ಸುಮಾರು 500 ಮಂದಿ ಯುವಕ/ಯುವತಿಯರು ತಮ್ಮ ನೃತ್ಯ, ಗಾಯನ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಶಾಸಕರು ಹಮ್ಮಿಕೊಂಡಿದ್ದ ಈ ಕಾರ್ಯಕ್ರಮಕ್ಕೆ ಕ್ಷೇತ್ರದೆಲ್ಲಡೆಯಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು ಪೋಷಕರು ಹಾಡಿ ಹೊಗಳಿದ್ದಾರೆ.
ಶಾಸಕ ಕೃಷ್ಣ ಬೈರೇಗೌಡ ಅವರು ಆಯೋಜಿಸಿರುವ ಕಾರ್ಯಕ್ರಮದ ಮೂಲಕ ನಮ್ಮ ಮಕ್ಕಳಿಗೆ ಒಂದು ವೇದಿಕೆ ಸಿಕ್ಕಂತಾಗಿದೆ. ನಮ್ಮ ಮಕ್ಕಳೂ ಸಹ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ರೇಣುಕಾ, ವಿದ್ಯಾರಣ್ಯಪುರ
ನಮ್ಮ ಮಗಳು ಸಂಗೀತಾಭ್ಯಾಸ ಮಾಡುತ್ತಿದ್ದಾಳೆ. ಆಕೆಗೆ ನಮ್ಮ ಯಂಗ್ ಸ್ಟಾರ್ ಕಾರ್ಯಕ್ರಮ ಒಂದು ವೇದಿಕೆ ನೀಡಿ ಪ್ರೋತ್ಸಾಹಿಸಿದೆ. ಮಕ್ಕಳ ಪ್ರತಿಭೆಯನ್ನು ಪೋಷಕರು ಯಾವಾಗಲೂ ಪ್ರೋತ್ಸಾಹಿಸಬೇಕು.
ಗುರುನಾಥ್, ಸಹಕಾರನಗರ