ಮೊಬೈಲ್ ರೀಚಾರ್ಜ್ ದರ ಏರಿಕೆಯಿಂದ ಕಂಗೆಟ್ಟಿದ್ದ ಗ್ರಾಹಕರಿಗೆ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ಮಹತ್ವದ ಸಿಹಿಸುದ್ದಿ ನೀಡಿದೆ. ಟೆಲಿಕಾಂ ಕಂಪನಿಗಳ ಹೆಚ್ಚುತ್ತಿರುವ ದರಗಳಿಗೆ ಕಡಿವಾಣ ಹಾಕಲು ಮುಂದಾದ ಟ್ರಾಯ್, ಕೇವಲ ಕರೆ ಮತ್ತು ಎಸ್‌ಎಂಎಸ್ ಸೇವೆಗಳನ್ನು ಬಯಸುವ ಗ್ರಾಹಕರಿಗಾಗಿ ಕಡಿಮೆ ದರದ ವಿಶೇಷ ಪ್ಲಾನ್‌ಗಳನ್ನು ಪರಿಚಯಿಸಲು ಸೂಚಿಸಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಬಹುತೇಕ ಎಲ್ಲಾ ರೀಚಾರ್ಜ್ ಪ್ಲಾನ್‌ಗಳು ಡೇಟಾ ಆಧಾರಿತವಾಗಿರುವುದರಿಂದ, ಇಂಟರ್ನೆಟ್ ಬಳಸದ ಗ್ರಾಹಕರಿಗೂ ಹೆಚ್ಚಿನ ಮೊತ್ತ ಪಾವತಿಸಬೇಕಾದ ಅನಿವಾರ್ಯತೆ ಎದುರಾಗಿತ್ತು. ಇದೀಗ ಟ್ರಾಯ್ ನಿರ್ದೇಶನದಂತೆ, ಡೇಟಾ ಇಲ್ಲದೆ ಕೇವಲ ವಾಯ್ಸ್ ಕಾಲ್ ಮತ್ತು ಎಸ್‌ಎಂಎಸ್ ಸೇವೆಗಳನ್ನು ಒಳಗೊಂಡ ಅಗ್ಗದ ಪ್ಲಾನ್‌ಗಳು ಶೀಘ್ರದಲ್ಲೇ ಲಭ್ಯವಾಗಲಿವೆ.‘ಟೆಲಿಕಾಂ ಗ್ರಾಹಕರ ರಕ್ಷಣೆ (13ನೇ ತಿದ್ದುಪಡಿ) ನಿಯಮಗಳು, 2026’ ಅಡಿಯಲ್ಲಿ ರೂಪುಗೊಂಡಿರುವ ಈ ಹೊಸ ಮಾರ್ಗಸೂಚಿಗಳ ಪ್ರಕಾರ, ಪ್ರತಿಯೊಂದು ಟೆಲಿಕಾಂ ಸಂಸ್ಥೆಯೂ ಕನಿಷ್ಠ ಒಂದು ಕರೆ–ಎಸ್‌ಎಂಎಸ್ ಪ್ಲಾನ್ ಅನ್ನು ಕಡ್ಡಾಯವಾಗಿ ಒದಗಿಸಬೇಕು. ಈ ಪ್ಲಾನ್‌ಗಳು ದೀರ್ಘಾವಧಿಗೆ ಮಾತ್ರವಲ್ಲದೆ ಕಡಿಮೆ ಅವಧಿಯ ವ್ಯಾಲಿಡಿಟಿಯಲ್ಲಿಯೂ ಲಭ್ಯವಾಗಬೇಕು ಹಾಗೂ ಡೇಟಾ ಪ್ಲಾನ್‌ಗಳಿಗಿಂತ ಕಡಿಮೆ ದರದಲ್ಲಿರಬೇಕು ಎಂದು ಸ್ಪಷ್ಟಪಡಿಸಲಾಗಿದೆ.
ಈ ಕ್ರಮದಿಂದ ಹಿರಿಯ ನಾಗರಿಕರು ಹಾಗೂ ಇಂಟರ್ನೆಟ್ ಬಳಸದ ಗ್ರಾಹಕರಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಗ್ರಾಮೀಣ ಭಾಗದ ಜನರಿಗೆ ರೀಚಾರ್ಜ್ ವೆಚ್ಚದಲ್ಲಿ ಉಳಿತಾಯವಾಗುವ ನಿರೀಕ್ಷೆಯಿದ್ದು, ಗ್ರಾಹಕರು ತಮ್ಮ ಅಗತ್ಯಕ್ಕೆ ತಕ್ಕ ಸೇವೆಗಳನ್ನು ಆಯ್ಕೆಮಾಡುವ ಅವಕಾಶ ದೊರೆಯಲಿದೆ. ಟ್ರಾಯ್‌ನ ಈ ನಿರ್ಧಾರ ಟೆಲಿಕಾಂ ಕ್ಷೇತ್ರದಲ್ಲಿ ಪಾರದರ್ಶಕತೆ ಹೆಚ್ಚಿಸುವುದರ ಜೊತೆಗೆ, ಸಾಮಾನ್ಯ ಜನರ ಮೊಬೈಲ್ ಖರ್ಚನ್ನು ಕಡಿಮೆ ಮಾಡುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.













