ಹುಬ್ಬಳ್ಳಿ: ದೆಹಲಿಯಲ್ಲಿ ನಡೆದ ಸ್ಪೋಟದಿಂದ ಎಲ್ಲಾ ರಾಜ್ಯದಲ್ಲೂ ಹೈಅಲರ್ಟ್ ಘೋಷಿಸಲಾಗಿದೆ. ಯಾಕಂದ್ರೆ ದೆಹಲಿಯಲ್ಲಿ ಸ್ಫೋಟದಲ್ಲಿ ಭಾಗಿಯಾದವರ ಮೇಲೆ ಸಣ್ಣ ಅನುಮಾನವೂ ಬಾರದಂತ ವೈದ್ಯರು ಸಿಕ್ಕಿಬಿದ್ದಿದ್ದಾರೆ. ಅಲ್ಲಿನ ಸ್ಪೋಟದ ತೀವ್ರತೆಗೆ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ರಾಜ್ಯದಲ್ಲೂ ಹೈ ಅಲರ್ಟ್ ಆಗಿದ್ದು, ದೆಹಲಿ ಹಾಗೂ ಧಾರವಾಡ ನಗರ ಪ್ರವೇಶಿಸುವ ಗಡಿ ಪ್ರದೇಶದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮಾರಾಗಳನ್ನು ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಮಂಗಳವಾರ ಪರಿಶೀಲನೆ ನಡೆಸಿದ್ದಾರೆ.
ಎಲ್ಲಾ ಕಡೆಯಲ್ಲೂ ಪರಿಶೀಲನೆ ಶುರುವಾಗಿದೆ. ಇದರ ಭಾಗವಾಗಿ, ಹಾಳಾಗಿರುವ ಎಲ್ಲಾ ಸಿಸಿಟುವಿ ಕ್ಯಾಮಾರಾಗಳನ್ನು ದುರಸ್ತಿ ಮಾಡಿಸಿದ್ದಾರೆ. ನಗರದ ಪ್ರಮುಖ ವೃತ್ತಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಸಹ ಪರಿಶೀಲನೆ ನಡೆಸಿ,ತಂತ್ರಜ್ಞರ ಸಹಾಯದಿಂದ ಅವುಗಳ ಸಂಪರ್ಕ ಜಾಲವನ್ನು ತಪಾಸಣೆ ನಡೆಸಿದ್ದಾರೆ. ನಿಯಂತ್ರಣ ಕೊಠಡಿಗೆ ಬರುವ ಯಾವುದೇ ದೂರುಗಳನ್ನು ನಿರ್ಲಕ್ಷ್ಯ ಮಾಡುತ್ತಿಲ್ಲ. ಅನುಮಾನಾಸ್ಪದ ಕರೆಗಳು ಬಂದರೆ ತಕ್ಷಣ ಮೇಲಧಿಕಾರಿಗಳಿಗೆ ತಿಳಿಸಲು ಸೂಚನೆ ನೀಡಲಾಗಿದೆ.
ಪ್ರತಿ ಠಾಣೆ ವ್ಯಾಪ್ತಿಯಲ್ಲಿ ಎರಡು ಚೆಕ್ ಪೋಸ್ಟ್ ಹಾಗೂ ಜಿಲ್ಲಾ ಗಡಿ ಪ್ರದೇಶದಲ್ಲಿ 20ಕ್ಕೂ ಹೆಚ್ಚು ಚೆಕ್ ಪೋಸ್ಟ್ ಹಾಕಲಾಗಿದೆ. ಪ್ರಮುಖ ಸ್ಥಳಗಳಲ್ಲಿ ಭದ್ರತೆ ಕೈಗೊಂಡು ನಿರಂತರವಾಗಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಮಾಹಿತಿ ನೀಡಿದ್ದಾರೆ. ವಿಮಾನ ನಿಲ್ದಾಣ, ಪ್ರಮುಖ ಬಸ್ ನಿಲ್ದಾಣಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದ್ದು, ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ ನಡೆಸುತ್ತಿದೆ. ಇಂದು ಕೂಡ ಪರಿಶೀಲನೆ ಎಲ್ಲೆಡೆ ಮುಂದುವರೆದಿದೆ. ಒಟ್ಟಾರೆ, ರಾಜ್ಯದಲ್ಲಿಯೂ ಪೊಲೀಸರು ಅಲರ್ಟ್ ಆಗಿದ್ದಾರೆ. ಅನುಮಾನ ಇರುವ ಕಡೆ ಪರಿಶೀಲನೆ ನಡೆಸುತ್ತಿದ್ದಾರೆ.






