ವರದಿ : ಕೆ.ಎಂ. ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ : ತುರುವನೂರು ಹೋಬಳಿಯ ಆರು ಪಂಚಾಯಿತಿಗಳಲ್ಲಿರುವ 45 ಶುದ್ದ ಕುಡಿಯುವ ನೀರಿನ ಘಟಕಗಳ ಪೈಕಿ ಏಳು ಘಟಕಗಳು ರಿಪೇರಿಯಲ್ಲಿದ್ದು, ಇನ್ನೊಂದು ವಾರದೊಳಗೆ ಸರಿಪಡಿಸಿ ಗ್ರಾಮೀಣ ಜನರಿಗೆ ಕುಡಿಯಲು ಶುದ್ದ ನೀರು ಒದಗಿಸುವಂತೆ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಹಾಗೂ ಪಂಚಾಯಿತಿಯ ಪಿ.ಡಿ.ಓ.ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ತುರುವನೂರು ಹೋಬಳಿಯ ಆರು ಪಂಚಾಯಿತಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅಧಿಕಾರಿಗಳು ಹಾಗೂ ಪಿ.ಡಿ.ಓ.ಗಳಿಂದ ಮಾಹಿತಿ ಪಡೆದುಕೊಂಡ ಶಾಸಕರು ಕೊರೋನಾ ರೂಪಾಂತರಿ ಓಮಿಕ್ರಾನ್ ಮೂರನೆ ಅಲೆ ವ್ಯಾಪಕವಾಗಿ ಹರಡುತ್ತಿರುವುದನ್ನು ತಡೆಗಟ್ಟುವುದು ಸರ್ಕಾರದ ಆದ್ಯ ಕರ್ತವ್ಯವಾಗಿರುವುದರಿಂದ ಕೊರೋನಾ ವಾರಿಯರ್ಸ್ಗಳಾದ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಪೊಲೀಸ್, ಕಂದಾಯ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿಗಳಿಗೆ ಲಸಿಕೆ ನೀಡಬೇಕೆಂದು ಆರೋಗ್ಯ ಇಲಾಖೆಯವರಿಗೆ ತಾಕೀತು ಮಾಡಿದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ಗಿರೀಶ್ ಹದಿನೈದರಿಂದ ಹದಿನೆಂಟು ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಿದ್ದು, ಶೇ.83 ರಷ್ಟು ಗುರಿ ತಲುಪಲಾಗಿದೆ. ಅರವತ್ತು ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ನೀಡಲಾಗುತ್ತಿದೆ. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ದಿಸಲಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ರಾಯನಹಳ್ಳಿಯಲ್ಲಿ ಶುದ್ದ ಕುಡಿಯುವ ನೀರಿನ ಘಟಕದ ಫಿಲ್ಟರ್ ಕೆಟ್ಟು ಹೋಗಿ ನಾಲ್ಕು ತಿಂಗಳಾಗಿದ್ದರೂ ಇನ್ನು ಏಕೆ ರಿಪೇರಿ ಮಾಡಿಸಿಲ್ಲ ಎಂದು ಪಿ.ಡಿ.ಓ.ರನ್ನು ತರಾಟೆ ತೆಗೆದುಕೊಂಡ ಶಾಸಕರು ದೀಪದ ಕೆಳಗೆ ಕತ್ತಲೆ ಎನ್ನುವಂತಾಗಿದೆ ತುರುವನೂರು ಹೋಬಳಿಯ ಪರಿಸ್ಥಿತಿ.
ಜಿಲ್ಲಾಡಳಿತಕ್ಕೆ ಹತ್ತಿರವಿದ್ದರೂ ಸುತ್ತಮುತ್ತಲಿನವರಿಗೆ ಸರ್ಕಾರದ ಸೌಲಭ್ಯಗಳು ಸರಿಯಾಗಿ ತಲುಪತ್ತಿಲ್ಲ ಎಂದು ಅಸಮಾಧಾನಗೊಂಡು ಕುಡಿಯುವ ನೀರಿನ ಘಟಗಳನ್ನು ಸುಸ್ಥಿತಿಯಲ್ಲಿಡುವುದು ಎಲ್ಲಾ ಪಿ.ಡಿ.ಓ.ಗಳ ಜವಾಬ್ದಾರಿ ಎಂದು ಎಚ್ಚರಿಸಿದರು.
ಯಾವ್ಯಾವ ಪಂಚಾಯಿತಿಗಳಲ್ಲಿ ಶಾಲಾ ಕೊಠಡಿಗಳಿಲ್ಲ. ಎಲ್ಲಿ ಕೊಠಡಿಗಳು ಬೀಳುವ ಸ್ಥಿತಿಯಲ್ಲಿವೆ. ಎಲ್ಲೆಲ್ಲಿ ಮರದ ಕೆಳಗೆ ಕುಳಿತು ಮಕ್ಕಳು ಪಾಠ ಕೇಳುವ ಪರಿಸ್ಥಿತಿಯಿದೆ ಎನ್ನುವುದನ್ನು ಪಟ್ಟಿ ಮಾಡಿ ಎಂದು ಶಾಸಕರು ಅಧಿಕಾರಿಗಳನ್ನು ಎಚ್ಚರಿಸಿದಾಗ ತುರುವನೂರು ಹೋಬಳಿಯ ಆರು ಪಂಚಾಯಿತಿಯಿಂದ ಹನ್ನೆರಡು ಕೊಠಡಿಗಳು ಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.
ಉಪ್ಪಾರಹಟ್ಟಿ ಮತ್ತು ದೊಡ್ಡಘಟ್ಟದಲ್ಲಿ ಶವಸಂಸ್ಕಾರಕ್ಕಾಗಿ ಸರ್ಕಾರಿ ಜಾಗವಿಲ್ಲ. ಅಂತಹ ಕಡೆ ಖಾಸಗಿ ಜಮೀನು ಖರೀಧಿಸಿ ಸ್ಮಶಾನಕ್ಕೆ ಮೊದಲು ಜಾಗ ಒದಗಿಸಬೇಕು. ತುರುವನೂರು ಹೋಬಳಿಯ ಆರು ಪಂಚಾಯಿತಿಗಳಲ್ಲಿ ಎಲ್ಲಿಯೂ ಸ್ಮಶಾನಕ್ಕೆ ಜಾಗದ ಕೊರತೆಯಿದೆ ಎನ್ನುವ ದೂರು ಗ್ರಾಮಸ್ಥರಿಂದ ಕೇಳಬಾರದು. ಈ ವಿಚಾರದಲ್ಲಿ ನಿರ್ಲಕ್ಷೆ ಮಾಡಿದರೆ ಸಹಿಸುವುದಿಲ್ಲ. ಗಂಭೀರವಾಗಿ ಪರಿಗಣಿಸಬೇಕು. ಸ್ಮಶಾನದ ಸುತ್ತ ತಂತಿ ಬೇಲಿ ಹಾಕಿ ಗೇಟ್ ಅಳವಡಿಸಿದರೆ ಸಾಲದು. ಒಳಗೆ ಜಾಲಿಗಿಡಗಳು ಬೆಳೆದಿರುವುದರಿಂದ ಶವ ಸಂಸ್ಕಾರಕ್ಕೆ ಹೋಗುವುದು ಕಷ್ಟವಾಗುತ್ತದೆ. ಸರಿಯಾಗಿ ನಿರ್ವಹಣೆ ಮಾಡಬೇಕು. ಆರು ಪಂಚಾಯಿತಿಗಳಲ್ಲಿ ಯಾವ್ಯಾವ ರಸ್ತೆಗಳಲ್ಲಿ ಮರಗಳಿಲ್ಲವೋ ಅಲ್ಲಿ ಎನ್.ಆರ್.ಇ.ಜಿ. ಯೋಜನೆಯಡಿ ಗಿಡಗಳನ್ನು ನೆಡಲು ಪಟ್ಟಿ ಮಾಡಿ. ಅದಕ್ಕಾಗಿ ಪಂಚಾಯಿತಿ ಮಟ್ಟದಲ್ಲಿ ಆಕ್ಷನ್ ಪ್ಲಾನ್ ಸಿದ್ದಪಡಿಸುವಂತೆ ಸೂಚಿಸಿದರು.
ಬೆಳೆ ಪರಿಹಾರದ ಹಣ ರೈತರ ಬ್ಯಾಂಕ್ ಖಾತೆಗಳಿಗೆ ಸರಿಯಾಗಿ ಜಮಾ ಆಗಬೇಕು. ಬೆಳೆ ನಷ್ಟದಿಂದ ಮೊದಲೆ ಕಂಗಾಲಾಗಿರುವ ರೈತರನ್ನು ಅಲೆದಾಡಿಸಬಾರದು ಎಂದು ಕೃಷಿ ಇಲಾಖೆ ಅಧಿಕಾರಿಗೆ ಸೂಚಿಸಿದರು.
ಚಿತ್ರದುರ್ಗ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹನುಮಂತಪ್ಪ, ತಹಶೀಲ್ದಾರ್ ಜಿ.ಹೆಚ್.ಸತ್ಯನಾರಾಯಣ, ಅಪ್ಪರ್‌ಭದ್ರಾದ ಇಂಜಿನಿಯರ್ ಭದ್ರಣ್ಣ, ಪಿ.ಆರ್.ಇ.ಡಿ.ಸಹಾಯಕ ಇಂಜಿನಿಯರ್ ವೀರಪ್ಪ ಸಭೆಯಲ್ಲಿ ಹಾಜರಿದ್ದರು.
ಚಿತ್ರದುರ್ಗ ತಾಲ್ಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ತುರುವನೂರು ಹೋಬಳಿ ಆರು ಪಂಚಾಯಿತಿಯ ಪಿ.ಡಿ.ಓ.ಗಳು ಸಭೆಯಲ್ಲಿ ಭಾಗವಹಿಸಿದ್ದರು.