ವಿಶೇಷ ಲೇಖನ
ಡಾ. ಸಂತೋಷ್ ಕೆ. ವಿ.
ಹೊಳಲ್ಕೆರೆ, ಚಿತ್ರದುರ್ಗ
ಮೊ : 9342466936
ಸುದ್ದಿಒನ್
ಕೋಣನೂರು ಗ್ರಾಮವು ದೊಡ್ಡಾಲಘಟ್ಟ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಚಿತ್ರದುರ್ಗದಿಂದ 26
ಕಿಲೋಮೀಟರ್ ದೂರ ವಾಯುವ್ಯಕ್ಕೆ,
ಚಿತ್ರದುರ್ಗ- ದಾವಣಗೆರೆ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಸಿರಿಗೆರೆ ಸರ್ಕಲ್ ನಿಂದ ದಕ್ಷಿಣಕ್ಕೆ 7 ಕಿಲೋಮೀಟರ್ ದೂರದಲ್ಲಿದೆ.
ಈ ಗ್ರಾಮಕ್ಕೆ ಹಳೆಗ್ರಾಮ ಇರುವ ಬಗ್ಗೆ ಸ್ಥಳೀಯರಿಗೆ ಮಾಹಿತಿ ಇರುವುದಿಲ್ಲ.
*ಹೆಸರಿನ ಮೂಲ*
ಹಿಂದಿನಿಂದಲೂ ಈ ಗ್ರಾಮದಲ್ಲಿ ಕೋಣಗಳ ಸಂಖ್ಯೆ ಯಥೇಚ್ಛವಾಗಿದ್ದು, ಇದಕ್ಕೆ ಅನ್ವರ್ಥಕ ಹಾಗೂ ಪೂರಕವಾಗಿರುವಂತೆ ಗ್ರಾಮದ ಅಕ್ಕಪಕ್ಕದಲ್ಲಿ ಹುಲ್ಲುಗಾವಲು ಹಾಗೂ ಹಸಿರು ಮೇವಿನ ಪ್ರದೇಶ ಹೆಚ್ಚಾಗಿರುವ ಕಾಡು ಪ್ರದೇಶವಿದೆ.
ಆ ಕಾರಣಕ್ಕೆ ಈ ಗ್ರಾಮಕ್ಕೆ ಕೋಣಗಳ ಊರಿನಿಂದ ಕೋಣನ ಊರು ಕೋಣನೂರು ಆಗಿದೆ.
ಆದರೆ ಇಂದಿನ ಆಧುನಿಕತೆಯ ಯುಗದಲ್ಲಿ ಕೋಣಗಳ ಸಂಖ್ಯೆ ಬಹಳಷ್ಟು ಕಡಿಮೆಯಾಗಿದ್ದು, ಬೆರಳಣಿಕೆಯಷ್ಟು ಮಾತ್ರ ಕೋಣಗಳು ಇವೆ.
ಭೌಗೋಳಿಕವಾಗಿ ಗಮನಿಸಬಹುದಾದರೆ ಗ್ರಾಮವು ಸಂಪೂರ್ಣ ಅರೆ ಮಲೆನಾಡಿನ ವಾತಾವರಣ ಹೊಂದಿದ್ದು, ಗ್ರಾಮದ ಸುತ್ತಲೂ ಬಯಲು ಸೀಮೆಯ ಉಷ್ಣವಲಯದ ಸಣ್ಣ ಕುರುಚಲು ಕಾಡು ಗ್ರಾಮದ ಸುತ್ತಲೂ ವ್ಯಾಪಿಸಿದೆ. ನೀರಿನ ಲಭ್ಯತೆಗೆ ಇದು ಪೂರಕವಾಗಿದೆ, ಹಾಗಾಗಿ ಗ್ರಾಮದ ಸುತ್ತಲೂ ಹಳ್ಳಗಳಲ್ಲಿ ಯಥೇಚ್ಛವಾಗಿ ಮಳೆಯ ಕಾರಣಕ್ಕೆ ಸದಾಕಾಲ ನೀರಿನ ಲಭ್ಯತೆ ಇರುತ್ತದೆ.
ಜೊತೆಗೆ ಹತ್ತಿರದ ಕೋಟೆಕೆರೆಯಲ್ಲಿ ನೀರು ಇರುವ ಕಾರಣ ಗ್ರಾಮದ ಅಂತರ್ಜಲದ ಮಟ್ಟ ಉತ್ತಮವಾಗಿದ್ದು ಮಳೆಯಾಶ್ರಿತ ಬೆಳೆಗಳ ಜೊತೆಗೆ ಇತರ ವಾಣಿಜ್ಯ ಹಾಗೂ ವಾರ್ಷಿಕ ಬೆಳೆಗಳತ್ತಲೂ ರೈತರು ಒಲವು ತೋರಿಸುತ್ತಿದ್ದಾರೆ.
ಗ್ರಾಮದ ಪೂರ್ವಕ್ಕೆ ಸಣ್ಣ ಗುಡ್ಡಗಳ ಸಾಲು ಆವೃತವಾಗಿದ್ದು ಇದರ ಉತ್ತರ ಭಾಗದಲ್ಲಿ (ಆಲಘಟ್ಟ ಗ್ರಾಮದ ದಕ್ಷಿಣ ಭಾಗದಲ್ಲಿ ) ಹಿಂದೆ ಶಿಲಾಯುಗದ ಮಾನವರು ವಾಸಿಸುತ್ತಿದ್ದ ಬೃಹತ್ ಶಿಲಾಯುಗದ ಕಾಲದ ಶಿಲಾಗೋರಿಗಳನ್ನು ಕಾಣಬಹುದಾಗಿದ್ದು, ಇಂದಿಗೂ ಕೆಲವು ಅದರಲ್ಲಿ ಉಳಿದಿದ್ದು ಅವಸಾನದ ಅಂಚಿಗೆ ತಲುಪಿದೆ.
ಇದರ ಮುಂದುವರೆದ ಭಾಗದಂತೆ ಈ ಗ್ರಾಮದ ಪೂರ್ವಭಾಗದಲ್ಲಿ ಕೂಡ ಶಿಲಾಗೋರಿಗಳ ಹಿಂದೆ ಇದ್ದಿರುವ ಬಗ್ಗೆ ಮತ್ತಷ್ಟು ವ್ಯಾಪಕ ಸಂಶೋಧನೆ ಹಾಗೂ ಕ್ಷೇತ್ರ ಕಾರ್ಯದ ಅವಶ್ಯಕತೆ ಇರುತ್ತದೆ.
ಇದೇ ಹೆಸರಿನ ಊರುಗಳು ಕರ್ನಾಟಕದಲ್ಲಿ ಹತ್ತಕ್ಕೂ ಅಧಿಕವಾಗಿವೆ.
ದೊಡ್ಡಾಲಘಟ್ಟ, ಚಿಕ್ಕೇನಹಳ್ಳಿ, ಕಡ್ಲೆಗುದ್ದು …
ಹತ್ತಿರದ ಗ್ರಾಮಗಳಾಗಿವೆ.
*ಗ್ರಾಮದಲ್ಲಿರುವ ದೇವಾಲಯಗಳು* :
1.*ಆಂಜನೇಯ ಸ್ವಾಮಿ ದೇವಸ್ಥಾನ:*
ಗ್ರಾಮದ ಮಧ್ಯಭಾಗದಲ್ಲಿರುವ ಆಂಜನೇಯಸ್ವಾಮಿ ದೇವಾಲಯವು ದಕ್ಷಿಣಾಭಿಮುಖವಾಗಿದ್ದು, ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾಗಿದೆ.
ಗರ್ಭಗೃಹದಲ್ಲಿ ಇತ್ತೀಚಿನ ವರ್ಷಗಳಲ್ಲಿ ಪ್ರತಿಷ್ಠಾಪನೆ ಮಾಡಿದ ಆಂಜನೇಯಸ್ವಾಮಿ ಶಿಲ್ಪವಿದ್ದು, ಪೂಜಿಸಲಾಗುತ್ತದೆ. ಗರ್ಭಗೃಹ ಹಾಗೂ ಸಭಾಮಂಟಪಗಳಿರುವ ದೇವಾಲಯವಿದು. ಬಾಗಿಲುವಾಡದಲ್ಲಿ ವೈಷ್ಣವ ದ್ವಾರಪಾಲಕರ ಕೆತ್ತನೆ ಇದೆ. ಲಲಾಟದಲ್ಲಿ ಸಣ್ಣ ಆಂಜನೇಯನ ಕೆತ್ತನೆ ಇದೆ. ಈ ದೇವಾಲಯದ ಗರ್ಭಗೃಹದ ಹೊರಗೋಡೆಯ ಆವರಣವು ಪಾಳೆಗಾರರ ಶೈಲಿಯಲ್ಲಿ ನಿರ್ಮಿಸಲಾಗಿದೆ.
ಈ ದೇವರ ಉತ್ಸವವನ್ನು ರಾಮನವಮಿಯಂದು ನಡೆಸಲಾಗುತ್ತದೆ.
ಗ್ರಾಮದ ಮಧ್ಯಭಾಗದಲ್ಲಿ ಈ ದೇವರ ಉತ್ಸವ ಮೂರ್ತಿ ಮಂದಿರವಿದೆ.
2.*.ಈಶ್ವರ ದೇವಸ್ಥಾನ:* ಗ್ರಾಮದ ಮಧ್ಯಭಾಗದಲ್ಲಿರುವ ಆಂಜನೇಯ ಸ್ವಾಮಿ ದೇವಾಲಯದ ಸಭಾಮಂಟಪದ ಬಲಭಾಗದಲ್ಲಿ ಈಶ್ವರ ದೇವಾಲಯವಿದೆ. ಗರ್ಭಗೃಹದಲ್ಲಿ ಈಶ್ವರ ಲಿಂಗ ಹಾಗೂ ನಂದಿಯನ್ನು ಪ್ರತಿಷ್ಠಾಪಿಸಲಾಗಿದೆ.
ದೇವಾಲಯದ ಹೊರ ಆವರಣದಲ್ಲಿ ನಾಗಶಿಲ್ಪ ಹಾಗೂ ವೀರಗಲ್ಲನ್ನು ಪ್ರತಿಷ್ಠಾಪಿಸಲಾಗಿದೆ. ಈ ವೀರಗಲ್ಲು ವಿಜಯನಗರ ಕಾಲಕ್ಕೆ ಸೇರಿದ್ದಾಗಿದ್ದು,16-17 ನೇ ಶತಮಾನಕ್ಕೆ ಸೇರಿದ್ದಾಗಿದೆ.ಇದರಲ್ಲಿ ಕುದುರೆ ಸವಾರಿ ಮಾಡುತ್ತಿರುವ ಯೋಧನು ಭರ್ಜಿಯನ್ನು ಹಿಡಿದಿರುವುದನ್ನು ಚಿತ್ರಿಸಲಾಗಿದೆ. ಗ್ರಾಮದ ಪ್ರಮುಖ ಐತಿಹಾಸಿಕ ಕುರುಹು ಇದೊಂದೇ ಆಗಿದೆ.
3.*ಬಸವೇಶ್ವರ ದೇವಸ್ಥಾನ*
ಗ್ರಾಮದ ಮಧ್ಯ ಭಾಗದಲ್ಲಿರುವ ಬಸವೇಶ್ವರ ದೇವಸ್ಥಾನವು ಸ್ಥಳೀಯ ಶೈಲಿಯಲ್ಲಿ ಪೂರ್ವಾಭಿಮುಖವಾಗಿ ನಿರ್ಮಿಸಲಾಗಿದೆ. ಗರ್ಭಗೃಹದಲ್ಲಿ ಬಸವಣ್ಣನನ್ನು ಪ್ರತಿಷ್ಠಾಪಿಸಲಾಗಿದೆ.
4. *ಕಂಪಳೇಶ್ವರ ಸ್ವಾಮಿ ದೇವಾಲಯ*
ಗ್ರಾಮದ ಹೊರ ಭಾಗದಲ್ಲಿ ಕಡ್ಲೆಗುದ್ದು ರಸ್ತೆಯ ಬಲಭಾಗದಲ್ಲಿರುವ ಶ್ರೀ ಕಂಪಳೇಶ್ವರ ಸ್ವಾಮಿ ದೇವಾಲಯವು ಸ್ಥಳೀಯ ಶೈಲಿಯಲ್ಲಿ ಪೂರ್ವಾಭಿಮುಖವಾಗಿ ನಿರ್ಮಾಣ ಮಾಡಲಾಗಿದೆ.
ಗ್ರಾಮದಲ್ಲಿ ನಾಲ್ಕು ದಿಕ್ಕಿಗೆ 4 ದೇವರ ದೇವಾಲಯಗಳಿದ್ದು, ಈ ದೇವಾಲಯವು ದಕ್ಷಿಣ ದಿಕ್ಕಿಗೆ ಇದೆ. ಇವೆಲ್ಲವೂ ಕ್ಷೇತ್ರ ಪಾಲಕ ದೇವರುಗಳಾಗಿದ್ದು,
ಗ್ರಾಮವನ್ನು ಸಲಹುತ್ತಿರುವುದಾಗಿ ಗ್ರಾಮದ ಜನರು ನಂಬುತ್ತಾರೆ.
ಗ್ರಾಮದ ಪೂರ್ವಭಾಗಕ್ಕೆ ಕೊಲ್ಲಾಪುರದಮ್ಮ ದೇವಿ ದೇವಾಲಯ, ವಾಯುವ್ಯ ದಿಕ್ಕಿಗೆ ಕುಕ್ಕುವಾಡೇಶ್ವರ ದೇವಿ ದೇವಾಲಯ,ಆಗ್ನೇಯ ದಿಕ್ಕಿಗೆ ಭೂತಪ್ಪ ಸ್ವಾಮಿ ದೇವಾಲಯಗಳಿವೆ.
*ಯಳಗೋಡು ಮಾರಮ್ಮ ದೇವಿ ಜಾತ್ರೆ:*
ಪ್ರತಿ ಐದು ವರ್ಷಕ್ಕೆ ಒಂದು ಬಾರಿ ಶೂನ್ಯಮಾಸ ಅಂದರೆ ಜನವರಿ ತಿಂಗಳಿನಲ್ಲಿ ಯಳಗೋಡು ಮಾರಮ್ಮ ದೇವಿ ಜಾತ್ರೆಯನ್ನು ಅತ್ಯಂತ ವಿಜೃಂಭಣೆಯಿಂದ ಗ್ರಾಮದಲ್ಲಿ ನಡೆಸಲಾಗುತ್ತದೆ. ಗ್ರಾಮದ ಮಧ್ಯಭಾಗದಲ್ಲಿರುವ ಉತ್ಸವ ಕಟ್ಟೆಯ ಮೇಲೆ ದೇವಿಯನ್ನು ಪ್ರತಿಷ್ಠಾಪನೆ ಮಾಡಿ ಹತ್ತಾರು ವೈವಿಧ್ಯಮಯ ಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ ಆಚರಣೆಗಳನ್ನು ನಡೆಸಲಾಗುತ್ತದೆ. ಗ್ರಾಮದ ಸುತ್ತಲೂ ಚರಗ ಚೆಲ್ಲುವುದು, ಕೋಣನಬಲಿ, ಬೇವು ಬೇಟೆ… ಮುಂತಾದ ಪ್ರಮುಖ ಆಚರಣೆಗಳು ಇದರಲ್ಲಿ ಸೇರಿವೆ.
ಹತ್ತಾರು ಗ್ರಾಮಗಳು ಹಾಗೂ ಬೇರೆ ಊರುಗಳಿಂದ ಆಗಮಿಸುವ ಭಕ್ತರು ಈ ಜಾತ್ರೆಯಲ್ಲಿ ಭಾಗವಹಿಸುತ್ತಾರೆ.







