ವಿಶೇಷ ಲೇಖನ
ಡಾ. ಸಂತೋಷ್ ಕೆ. ವಿ.
ಹೊಳಲ್ಕೆರೆ, ಚಿತ್ರದುರ್ಗ
ಮೊ : 9342466936
ಅಗ್ರಹಾರ ಗ್ರಾಮವು ಶಿವಪುರ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಹೊಳಲ್ಕೆರೆಯಿಂದ 10 ಕಿಲೋಮೀಟರ್ ದೂರ ವಾಯುವ್ಯಕ್ಕೆ ,
ಹೊಳಲ್ಕೆರೆ- ಕುನುಗಲಿ- ಅಗ್ರಹಾರ ಮಾರ್ಗದಲ್ಲಿದೆ.
ಈ ಗ್ರಾಮದ ಹಳೆ ಗ್ರಾಮ ನಿವೇಶನವು ಈಗಿನ ಗ್ರಾಮದ ಪೂರ್ವಕ್ಕೆ ಅರ್ಧ ಕಿಲೋಮೀಟರ್ ದೂರದಲ್ಲಿದ್ದು, ಅಲ್ಲಿ ಇಂದಿಗೂ ಆಂಜನೇಯ ಸ್ವಾಮಿ ಹಾಗೂ ಭೂತಪ್ಪ ದೇವಾಲಯಗಳನ್ನು ಕಾಣಬಹುದು. ಹಳೆಗ್ರಾಮ ನಿವೇಶನದ ಹೆಸರಿನ ಬಗ್ಗೆ ಸ್ಥಳೀಯರಿಗೆ ಮಾಹಿತಿ ಇರುವುದಿಲ್ಲ. ಗ್ರಾಮವು ಐತಿಹಾಸಿಕವಾಗಿ ಇರುವ ಬಗ್ಗೆ ಮಾಹಿತಿ ಇದ್ದರೂ ಇಲ್ಲಿ ಯಾವುದೇ ಐತಿಹಾಸಿಕ ದಾಖಲೆಗಳು, ಕುರುಹುಗಳು ಕಂಡು ಬರುವುದಿಲ್ಲ. ಪ್ರತಿವರ್ಷ ಶ್ರಾವಣ ಮಾಸದಲ್ಲಿ ಗ್ರಾಮದ ಪರವಾಗಿ ಈ ಜಾಗದಲ್ಲಿ ಪರೇವು ಆಚರಣೆ ನಡೆಸಲಾಗುತ್ತದೆ. ಹಳೆ ಗ್ರಾಮ ನಿವೇಶನದ ಪೂರ್ವ ಭಾಗದಲ್ಲಿ ಹಿರೇಹಳ್ಳವು ಹರಿಯುತ್ತದೆ. ಈ ಹಳ್ಳವು ತಾಲೂಕಿನ ಅರಸನಘಟ್ಟದ ಗುಡ್ಡಗಳ ಭಾಗದಿಂದ ಹರಿದು ಬರುತ್ತದೆ. ಇದು ಮುಂದೆ ಹರಿದು ಚಿಕ್ಕನಕಟ್ಟೆ ಬಳಿಯ ಸಂಗಮನಾಥೇಶ್ವರ ದೇವಸ್ಥಾನದ ಬಳಿಯಲ್ಲಿ ರಾಮಗಿರಿ,ಮಲ್ಲಾಡಿಹಳ್ಳಿ ಕಡೆಯಿಂದ ಬರುವ ಮತ್ತೊಂದು ಹಿರೇಹಳ್ಳದ ಜೊತೆಗೆ ಸೇರಿಕೊಂಡು ಮುಂದೆ ಚನ್ನಗಿರಿ ತಾಲೂಕು ಶಾಂತಿಸಾಗರ (ಸೂಳೆಕೆರೆಗೆ )ತಲುಪುತ್ತದೆ. ಈಗಿರುವ ಗ್ರಾಮವನ್ನು ಗ್ರಾಮದ ಉತ್ತರಕ್ಕೆ ಹರಿಯುವ ಹಿರೇಹಳ್ಳದ ಎಡದಂಡೆಯ ಮೇಲೆ ನಿರ್ಮಿಸಲಾಗಿದೆ. ಈ ಹಳ್ಳವು ಗ್ರಾಮದ ತೋಟಗಳಿಗೆ ಉತ್ತಮ ನೀರಾವರಿ ಸೌಲಭ್ಯ ಕಲ್ಪಿಸುತ್ತದೆ.
ಭೌಗೋಳಿಕವಾಗಿ ಗ್ರಾಮದ ಸುತ್ತಲೂ ಸಮತಟ್ಟು ಮೈದಾನದ ಒಣ ಭೂಪ್ರದೇಶವೇ ಹೆಚ್ಚಾಗಿದೆ.
ಹೆಸರಿನ ಮೂಲ :
ಕರ್ನಾಟಕದಲ್ಲಿ ಅಗ್ರಹಾರ ಹೆಸರಿನ ಮೇಲೆ ನೂರಕ್ಕೂ ಅಧಿಕ ಸ್ಥಳಗಳಿವೆ. ಎಲ್ಲಾ ಪ್ರಮುಖ ಊರುಗಳಲ್ಲಿ ಇಂದಿಗೂ ಅಗ್ರಹಾರ ಹೆಸರಿನ ಬ್ರಾಹ್ಮಣರ ಕೇರಿಯನ್ನು ಕಾಣಬಹುದು.
ಅದರಲ್ಲಿ ಈ ಗ್ರಾಮವು ಕೂಡ ಒಂದಾಗಿದೆ. ಹಿಂದೆಲ್ಲಾ ಗ್ರಾಮಗಳಲ್ಲಿ ಬ್ರಾಹ್ಮಣರ ಕೇರಿಗಳಿಗೆ ಅಗ್ರಹಾರ ಎಂಬ ಹೆಸರು ನೀಡಿ ಬ್ರಾಹ್ಮಣರಿಗೆ ದತ್ತಿ ನೀಡಲಾಗುತ್ತಿತ್ತು. ಗ್ರಾಮದ ಪ್ರಮುಖ ದೇವಾಲಯಗಳಿಗೆ ಪೂಜೆ- ಪುನಸ್ಕಾರ ಮಾಡಿಕೊಂಡು ಅವರು ಅಲ್ಲೇ ನೆಲೆ ನಿಲ್ಲಲು ಅನುಕೂಲವಾಗುವಂತೆ ಅವರಿಗೆ ಜಮೀನುಗಳನ್ನು ನೀಡಲಾಗುತ್ತಿತ್ತು. ಇಂತಹ ಬ್ರಾಹ್ಮಣರ ಕೇರಿಯೇ ಈ ಅಗ್ರಹಾರ. ಹಿಂದೆ ಈ ಇಡೀ ಗ್ರಾಮವನ್ನು ಅಗ್ರಹಾರವನ್ನಾಗಿ ಮಾಡಿ ಬ್ರಾಹ್ಮಣರಿಗೆ ದತ್ತಿ ನೀಡಲಾಗಿತ್ತಂತೆ. ಆದರೆ ಇದು ಯಾವ ಕಾಲದಲ್ಲಿ ಎಂಬುದರ ಬಗ್ಗೆ ಸ್ಥಳೀಯರಿಗೆ ಮಾಹಿತಿ ಇರುವುದಿಲ್ಲ. ಪ್ರಸ್ತುತ ಇಲ್ಲಿ ಯಾವುದೇ ಬ್ರಾಹ್ಮಣರ ಕುಟುಂಬಗಳು ವಾಸವಾಗಿಲ್ಲ. ಹಳೆಯ ತಲೆಮಾರಿನವರಿಗೂ ಇಲ್ಲಿ ಬ್ರಾಹ್ಮಣರು ಇದ್ದ ಬಗ್ಗೆ ಯಾವುದೇ ದಾಖಲೆಗಳು, ಮಾಹಿತಿ ಇರುವುದಿಲ್ಲ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಹಾಗೂ ಸಂಶೋಧನೆಯ ಅಗತ್ಯವಿರುತ್ತದೆ.
ಹುಲೇಮಳಲಿ,ಕುನುಗಲಿ, ಪಾಡಿಗಟ್ಟೆ ..
ಹತ್ತಿರದ ಗ್ರಾಮಗಳಾಗಿವೆ.
ಗ್ರಾಮದಲ್ಲಿರುವ ದೇವಾಲಯಗಳು :
1.ಆಂಜನೇಯ ಸ್ವಾಮಿ ದೇವಾಲಯ:
ಗ್ರಾಮದ ಮಧ್ಯಭಾಗದಲ್ಲಿ ಶಾಲೆಯ ಬಳಿ ದಕ್ಷಿಣಾಭಿಮುಖವಾಗಿ ಸ್ಥಳೀಯ ಶೈಲಿಯಲ್ಲಿ
ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ.
2.ಕರಿಯಮ್ಮ ದೇವಿ ದೇವಾಲಯ:
ಗ್ರಾಮದ ಪೂರ್ವಭಾಗದಲ್ಲಿರುವ ಈ ದೇವಾಲಯವು ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾಗಿದೆ. ಗರ್ಭಗೃಹದಲ್ಲಿ ಕರಿಯಮ್ಮ ದೇವಿಯ ಶಿಲ್ಪವಿದ್ದು, ಪೂಜಿಸಲಾಗುತ್ತದೆ. ಈ ದಿವ್ಯ ಜಾತ್ರೋತ್ಸವವನ್ನು ವಿಶೇಷವಾಗಿ ಆಚರಿಸಲಾಗುತ್ತದೆ.
3.ಕೊಪ್ಪದಮ್ಮ ದೇವಸ್ಥಾನ
ಗ್ರಾಮದ ಪೂರ್ವಭಾಗದಲ್ಲಿರುವ ಶ್ರೀ ಕೊಪ್ಪದಮ್ಮ ದೇವಿ ದೇವಸ್ಥಾನವನ್ನು ಸ್ಥಳೀಯ ಶೈಲಿಯಲ್ಲಿ ಪೂರ್ವಾಭಿಮುಖವಾಗಿ ನಿರ್ಮಾಣ ಮಾಡಲಾಗಿದೆ.
4 .ಕೊಲ್ಲಾಪುರದಮ್ಮ ದೇವಿ ದೇವಸ್ಥಾನ :
ಗ್ರಾಮದ ಮಧ್ಯಭಾಗದಲ್ಲಿರುವ ಕೊಲ್ಲಾಪುರದಮ್ಮ ದೇವಿ ದೇವಸ್ಥಾನವು ಪೂರ್ವಾಭಿಮುಖವಾಗಿದ್ದು ಸ್ಥಳೀಯ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಹಿಂದೆ ಇದ್ದ ಹಳೆಯ ಮಂದಿರವು ಶಿಥಿಲವಾದ ಕಾರಣ ಅದನ್ನು ತೆಗೆದು ಇತ್ತೀಚಿನ ದಶಕಗಳಲ್ಲಿ ನೂತನವಾಗಿ ಈ ದೇವಾಲಯ ನಿರ್ಮಾಣ ಮಾಡಲಾಗಿದೆ.
ಗರ್ಭಗೃಹ ಹಾಗೂ ಸಭಾಮಂಟಪಗಳನ್ನು ಒಳಗೊಂಡಿರುವ ಈ ದೇವಾಲಯದ ಗರ್ಭಗೃಹದಲ್ಲಿ ಕೊಲ್ಲಾಪುರದಮ್ಮ ದೇವಿಯ ಶಿಲ್ಪವಿದ್ದು ಪೂಜಿಸಲಾಗುತ್ತದೆ. ಈ ದೇವರ ಉತ್ಸವ ಮೂರ್ತಿಯನ್ನು ಹತ್ತಿರದ ಗ್ರಾಮಗಳ ಧಾರ್ಮಿಕ ಕಾರ್ಯಕ್ರಮಗಳಿಗೆ ಹಾಗೂ ಕುರುಹುಗಳಿಗೆ ತೆಗೆದುಕೊಂಡು ಹೋಗಲಾಗುತ್ತದೆ. ಈ ದೇವರ ಕಾರ್ತಿಕೋತ್ಸವ ಬಲು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
5.ಹಳೆ ಗ್ರಾಮ ನಿವೇಶನದ ಆಂಜನೇಯಸ್ವಾಮಿ ದೇವಸ್ಥಾನ :
ಗ್ರಾಮದ ಪೂರ್ವಕ್ಕೆ ಅರ್ಧ ಕಿಲೋಮೀಟರ್ ದೂರದಲ್ಲಿ ಇರುವ ಹಳೆ ಗ್ರಾಮ ನಿವೇಶನದ ಶ್ರೀ ಆಂಜನೇಯ ಸ್ವಾಮಿ ದೇವಾಲಯವು ಸ್ಥಳೀಯ ಶೈಲಿಯಲ್ಲಿದ್ದು, ಇಲ್ಲಿ 17-18 ನೇ ಶತಮಾನದ ಆಂಜನೇಯ ಸ್ವಾಮಿಯ ಶಿಲ್ಪವಿದ್ದು ಪೂಜಿಸಲಾಗುತ್ತದೆ.
ಇದರ ಬಳಿಯಲ್ಲಿ ಭೂತಪ್ಪ ಸ್ವಾಮಿ ಇದ್ದು ಪೂಜಿಸಲಾಗುತ್ತದೆ.
ಭಕ್ತರು ಆಗಾಗ ಆಗಮಿಸಿ ಪೂಜಿಸಿ ಪರೇವು,ದೊಡ್ಡೆಡೆ ಸೇವೆ.. ಮುಂತಾದ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಾರೆ.






