ಬೆಂಗಳೂರು: ಆಂಧ್ರ ಪ್ರದೇಶದ ಕರ್ನೂಲ್ ಬಳಿ ಹೊತ್ತಿ ಉರಿದ ಬೆಂಕಿಗೆ ಇಪ್ಪತ್ತು ಜನ ಸಜೀವ ದಹನವಾಗಿದ್ದಾರೆ. ಅದೃಷ್ಟವಶಾತ್ ಒಂದಷ್ಟು ಜನ ಬದುಕುಳುದಿದ್ದಾರೆ. ಕಿಟಕಿಯಿಂದ ಹೊರಗೆ ಬಂದು, ಹಾರಿ ಹೀಗೆ ಸಾಹಸ ಮಾಡಿ ತಮ್ಮ ಜೀವನವನ್ನ ಕಾಪಾಡಿಕೊಂಡಿದ್ದಾರೆ. ಆದರೆ ಇನ್ನಷ್ಟು ಜನಕ್ಕೆ ಅದು ಸಾಧ್ಯವಾಗಿಲ್ಲ. ಇದೀಗ ಬದುಕುಳಿದವರಲ್ಲಿ ನಾಲ್ವರು ಬೆಂಗಳೂರಿನವರು ಎಂಬುದು ಗೊತ್ತಾಗಿದೆ.
ದೀಪಾವಳಿ ಹಬ್ಬಕ್ಕೆಂದು ಜನ ತಮ್ಮ ತಮ್ಮ ಊರುಗಳಿಗೆ ಹೋಗಿದ್ರು. ಮನೆಯಲ್ಲಿ ದೀಪ ಬೆಳಗಿಸಿ ಬಂದವರ ಬದುಕಲ್ಲಿ ಬಸ್ ತುಂಬಾ ಬೆಂಕಿ ಆವರಿಸಿ, ಬದುಕನ್ನೇ ಕತ್ತಲೆಯಾಗಿಸಿದೆ. ಈ ದುರಂತದಲ್ಲಿ ಅದೃಷ್ಟವೆಂಬಂತೆ ಬದುಕುಳಿದವರಲ್ಲಿ ಶಿವ, ಗ್ಲೋರಿಯಾ ಈಸ್ಟಾ, ಸ್ಯಾಮ್, ಚರಿತ್ ಮತ್ತು ಮಹಮ್ಮದ್ ಖಾಜಿರ್ ಬದುಕುಳಿದವರಾಗಿದ್ದಾರೆ. ಇವರೆಲ್ಲ ಬೆಂಗಳೂರಿನವರೇ ಆಗಿದ್ದು, ರಜೆಗೆ ಆಂಧ್ರಕ್ಕೆ ಹೋಗಿದ್ದವರಾಗಿದ್ದಾರೆ.
ರಾತ್ರಿಯ ಪ್ರಯಾಣವಾಗಿದ್ದ ಕಾರಣ ಸಹಜವಾಗಿಯೇ ಎಲ್ಲರೂ ನಿದ್ದೆಗೆ ಜಾರಿರುತ್ತಾರೆ. ಹೀಗಾಗಿ ಈ ಅನಾಹುತದ ತೀವ್ರತೆ ಸ್ವಲ್ಪ ಜಾಸ್ತಿಯೇ ಆಗಿದೆ. ಎಲ್ಲರೂ ನಿದ್ದೆಯಲ್ಲಿರುವಾಗ ಬಸ್ ಗೆ ಬೆಂಕಿ ತಾಗಿದೆ. ತಕ್ಷಣ ಕೆಲವರಿಗೆ ಎಚ್ಚರವಾಗಿದೆ. ಹಾಗೇ ಎಚ್ಚರವಾದವರಿಗೆ ಬೆಂಕಿ ಹೊತ್ತಿಕೊಂಡದ್ದು ಗಮನಕ್ಕೆ ಬಂದು, ತಕ್ಷಣ ಎಮರ್ಜೆನ್ಸಿ ಎಕ್ಸಿಟ್ ಗಳಿಂದ ಹೊರಕ್ಕೆ ಹಾರಿದ್ದಾರೆ. ಒಳಗೆ ಇರುವವರನ್ನು ಕೂಡ ಬದುಕಿಸುವುದಕ್ಕೆ ಪ್ರಯತ್ನ ಮಾಡಿದ್ದಾರೆ. ಆದರೆ ಅದು ಸಾಧ್ಯವಾಗಿಲ್ಲ. ಯಾಕಂದ್ರೆ ಬೆಂಕಿಯ ತೀವ್ರತೆ ಸಿಕ್ಕಾಪಟ್ಟೆ ಜಾಸ್ತಿಯಾಗಿತ್ತು. ಹೀಗಾಗಿಯೇ ಬದುಕುಳಿಯುವುದು ಕಷ್ಟಕರವಾಗಿದೆ. ಇನ್ನು ಪ್ರಧಾನಿ ಮೋದಿ ಅವರು ಕೂಡ ಈ ಘಟನೆಗೆ ಬೇಸರ ವ್ಯಕ್ತಪಡಿಸಿದ್ದು, ಪರಿಹಾರವನ್ನು ಘೋಷಿಸಿದ್ದಾರೆ. ಘಟನೆಯಲ್ಲಿ ಬಚಾವ್ ಆದವರಿಗೆ ಚಿಕಿತ್ಸೆಯೂ ಮುಂದುವರೆದಿದೆ. ಬೆಂಗಳೂರಿನವರನ್ನು ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ.






