ಸುದ್ದಿಒನ್ : ಬೇವಿನಹಳ್ಳಿ ಗ್ರಾಮವು ಚಿತ್ರದುರ್ಗದಿಂದ 31 ಕಿಲೋಮೀಟರ್ ದೂರ ವಾಯುವ್ಯಕ್ಕೆ ಚಿತ್ರದುರ್ಗ- ಭರಮಸಾಗರ – ಬೇವಿನಹಳ್ಳಿ ಮಾರ್ಗದಲ್ಲಿದೆ.
ತಾಲೂಕಿನ ಅತ್ಯಂತ ಪ್ರಾಚೀನ ಗ್ರಾಮಗಳಲ್ಲಿ ಇದೂ ಒಂದಾಗಿದೆ. ಪಾಳೆಗಾರರ ಕಾಲದ ಪಟ್ಟಡಿಗಳ 32 ಗ್ರಾಮಗಳಲ್ಲಿ ಇದು ಕೂಡ ಒಂದಾಗಿತ್ತು. ಗ್ರಾಮದ ಹಳೆಗ್ರಾಮ ನಿವೇಶನವು ಗ್ರಾಮದ ಪೂರ್ವಭಾಗದ ಆಂಜನೇಯ ಸ್ವಾಮಿ ದೇವಾಲಯದ ಬಳಿಯಲ್ಲಿ ಇದ್ದು, ನಂತರ ಪಶ್ಚಿಮ ಭಾಗಕ್ಕೆ ಸ್ಥಳಾಂತರಗೊಂಡು ಮತ್ತೆ ಪುನಃ ಈಗಿರುವ ಗ್ರಾಮದ ಸ್ಥಳದಲ್ಲಿ ನೆಲೆಗೊಳ್ಳಲಾಗಿದೆ.ಹಳೆ ಗ್ರಾಮದ ಹೆಸರಿನ ಬಗ್ಗೆ ಸ್ಥಳೀಯರಲ್ಲಿ ಮಾಹಿತಿ ಇರುವುದಿಲ್ಲ.
ಗ್ರಾಮದ ಭೌಗೋಳಿಕ ಪರಿಸರವು ಬೇವಿನ ಮರಗಳ ಬೆಳವಣಿಗೆಗೆ ಪೂರಕವಾಗಿದ್ದು, ಹಿಂದೆ ಗ್ರಾಮದ ಆಸುಪಾಸು ಹಾಗೂ ಸುತ್ತಮುತ್ತಲ ಜಮೀನುಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬೇವಿನ ಮರಗಳು ಇದ್ದವು. ಆದರೆ ಇಂದು ಈ ಸಂಖ್ಯೆ ಬಹಳಷ್ಟು ಕಡಿಮೆಯಾಗಿದೆ. ಇಂದಿಗೂ ಗ್ರಾಮದಲ್ಲಿ ಬೇವಿನ ಉತ್ಪನ್ನ,ಬೀಜಗಳ ಸಂಸ್ಕರಣೆ ಹಾಗೂ ಮಾರಾಟ ನಡೆಯುತ್ತದೆ. ಆ ಕಾರಣಕ್ಕೆ ಈ ಗ್ರಾಮಕ್ಕೆ ಬೇವಿನಹಳ್ಳಿ ಹೆಸರು ಬಂದಿದೆ. ಗ್ರಾಮದ ಪಶ್ಚಿಮಕ್ಕೆ ಬೇವಿನಹಳ್ಳಿ ಗುಡ್ಡ ಸಾಲುಗಳು ಹರಡಿದ್ದು, ಇದು ಮುಂದೆ ಉತ್ತರದ ಕಡೆಗೆ ಹಾಲೇಕಲ್ ಬೆಟ್ಟಸಾಲುಗಳೊಂದಿಗೆ ಮುಂದುವರಿಯುತ್ತದೆ.
ಇತಿಹಾಸ ಹಾಗೂ ದೇವಾಲಯ ಪರಿಚಯ:
1.ಆಂಜನೇಯ ಸ್ವಾಮಿ ದೇವಾಲಯ:
ಗ್ರಾಮದ ಪ್ರಾರಂಭದ ಭಾಗದಲ್ಲಿರುವ ಈ ದೇವಾಲಯದ ಮುಂಭಾಗದಲ್ಲಿ ಕ್ರಿ. ಶ.968 ಶಾಸನವಿದೆ. ಇದು ರಾಷ್ಟ್ರಕೂಟರ ಕಾಲದ್ದಾಗಿದ್ದು, ಕೊಟ್ಟಿಗೆದೇವನು ಆಳುತ್ತಿದ್ದನು. ಈ ಅವಧಿಯಲ್ಲಿ ಈ ಗ್ರಾಮದಲ್ಲಿ ಜಕ್ಕಿಸುಂದರಿ ಎಂಬುವವಳು ಬಸದಿ ಕಟ್ಟಿಸಿದ ವಿವರಣೆ ಇದೆ. ಇವಳಿಗೆ ಸಮಸ್ತಗುಣಗಣಾಳಕ್ರಿತೆ, ಸಮ್ಯಕ್ತ ದವಳೇ, ಸಹಜಸರಸ್ವತಿ, ವಿಳಾಸ ವಿದ್ಯಾಧರೆ ಎಂಬ ಬಿರುದುಗಳನ್ನು ಹೊಂದಿದ್ದಳು. ಇವಳು ನಿರ್ಮಿಸಿದ ಬಸದಿಗೆ ಮಹಾಸಮಂತನಾದ ದ್ರೋಹರ ಶೂಲ,ಮದಕರಿ ಗಂಡ..ಬಿರುದಾಂಕಿತನಾದ ಪಂದಿಗನು ಕದಂಬಳಿಗೆ ಸಾವಿರವನ್ನು ಆಳುತ್ತಿದ್ದು, ಇವನು ಈ ಬಸದಿಗೆಂದು ರಾಮಚಂದ್ರ ಭಟಾರರ ಕಾಲನ್ನು ತೊಳೆದು ಮದಲೂರು ಮತ್ತು ಮಳಗವಾಡಿಗಳ ಸಿದ್ದಾಯ 50 ಗದ್ಯಾಣಗಳನ್ನು ಬಿಟ್ಟುಕೊಟ್ಟನೆಂದು ಹೇಳಿದೆ. ಆದರೆ ಗ್ರಾಮದಲ್ಲಿ ಎಲ್ಲಿಯೂ ಬಸದಿಯ ಕುರುಹುಗಳು ಕಂಡುಬರುವುದಿಲ್ಲ. ಈ ಶಾಸನದಲ್ಲಿ ಗೊಗ್ಗಿಯಪುರ, ಕೆರೆಯೂರ, ಪೊಸವೂರ,ಅಸಗೋರ, ಕಾಕಂಬಾಳು, ಸೇಂಬನೂರ, ಕೊಡಗನೂರ..ಗ್ರಾಮಗಳನ್ನು ಹೆಸರಿಸಲಾಗಿದೆ.
2. ಮೈಲಾರಲಿಂಗೇಶ್ವರ ದೇವಸ್ಥಾನ:
ಗ್ರಾಮದ ಪಶ್ಚಿಮಕ್ಕೆ ಶಾಲೆಯ ಆವರಣದಲ್ಲಿ ಇರುವ ಈ ದೇವಾಲಯವನ್ನು 16-17 ನೇ ಶತಮಾನದಲ್ಲಿ ವಿಜಯನಗರ ಶೈಲಿಯಲ್ಲಿ ನಿರ್ಮಿಸಲಾಗಿದೆ. ಗರ್ಭಗೃಹ ಮತ್ತು ಅಂತರಾಳಗಳಿಂದ ಕೂಡಿರುವ ದೇವಾಲಯವಿದು. ಗರ್ಭಗೃಹದಲ್ಲಿ ಮೈಲಾರಲಿಂಗಪ್ಪ, ಗಂಗಮಾಳಮ್ಮ, ಗಣೇಶ, ಸರಸ್ವತಿಯರ ಶಿಲ್ಪಗಳಿವೆ. ಎರಡೂವರೆ ಅಡಿ ಎತ್ತರದಲ್ಲಿರುವ ಮೈಲಾರಲಿಂಗಪ್ಪ ಶಿಲ್ಪವು 4 ಕೈಗಳನ್ನು ಹೊಂದಿದ್ದು, ಡಮರುಗ ಖಡ್ಗ ಮತ್ತು ಪಾನಭಟ್ಟಲುಗಳನ್ನು ಹಿಡಿದಿದ್ದಾನೆ. ಗಂಗಮಾಳಮ್ಮ ಶಿಲ್ಪವು ಕೂಡ ಮೈಲಾರಲಿಂಗನ ಶಿಲ್ಪದಂತಿದೆ. ಸುಖಾಸನದಲ್ಲಿ ಕುಳಿತ ಸರಸ್ವತಿಯು ತನ್ನ 4 ಕೈಗಳಲ್ಲಿ ಶಂಖ ಮತ್ತು ಚಕ್ರ, ಕೆಳಗಿನ ಕೈಗಳಲ್ಲಿ ಲೇಖನ ಮತ್ತು ಹಸ್ತ ಪ್ರತಿಗಳನ್ನು ಹಿಡಿದಿದ್ದಾಳೆ. ಗರ್ಭಗೃಹದ ಬಾಗಿಲವಾಡವು ಸರಳವಾಗಿದೆ.
ಅಂತರಾಳದ ಬಾಗಿಲುವಾಡವನ್ನು ಆಳವಾಗಿ ಕಡೆದ ಶೈವ ದ್ವಾರಪಾಲಕರು ನರ್ತಕಿಯರು ಮತ್ತು ಹೂಬಳ್ಳಿಗಳ ರಚನೆಯಿಂದ ಅಲಂಕರಿಸಲಾಗಿದೆ.
ದೇವಾಲಯದ ಹೊರ ಭಾಗದ ಗೋಡೆಯನ್ನು ಎತ್ತರದ ಅಧಿಷ್ಠಾನದ ಮೇಲೆ ನಿರ್ಮಿಸಲಾಗಿದೆ. ದೇವಾಲಯದ ಮುಂಭಾಗದಲ್ಲಿ ನಾಗಶಿಲ್ಪ,ಭೈರವನಪಾದ, ರುಂಡ ಮತ್ತು ಸಭಾಮಂಟಪದ ಕಂಬಗಳನ್ನು ಕಾಣಬಹುದು.
ಇದರ ಜೊತೆಗೆ ಗ್ರಾಮದಲ್ಲಿ ಆಂಜನೇಯ ಸ್ವಾಮಿ, ಉಡಿಸಲಮ್ಮ, ಸೇವಾಲಾಲ್, ಗಣಪತಿ, ಮರಿಯಮ್ಮ ದೇವಾಲಯಗಳಿವೆ. ಇವೆಲ್ಲವೂ ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾದ ದೇವಾಲಯಗಳಾಗಿವೆ.
ಉಡಿಸಲಮ್ಮ ದೇವಿಯ ಜಾತ್ರೆಯನ್ನು ಅತ್ಯಂತ ವಿಜೃಂಭಣೆಯಿಂದ ನಡೆಸಲಾಗುತ್ತದೆ. ಉಡಿಸಲಮ್ಮ ದೇವಿಯ ಮೂಲಪಾದಗಳು ಗ್ರಾಮದ ಪಶ್ಚಿಮಕ್ಕೆ ಇರುವ ಬೇವಿನಹಳ್ಳಿ ಗುಡ್ಡದ ಮೇಲೆ ಇದ್ದು, ಮಳೆ ಬಾರದ ವರ್ಷದಲ್ಲಿ ಇಲ್ಲಿ ಪರೇವು ಆಚರಣೆ ನಡೆಸಲಾಗುತ್ತದೆ
ವೀರಗಲ್ಲು :
ಗ್ರಾಮದ ಮೈಲಾರಲಿಂಗೇಶ್ವರ ಸ್ವಾಮಿ ದೇವಾಲಯದ ಹಿಂಭಾಗದಲ್ಲಿ ವೀರಮಾಸ್ತಿಗಲ್ಲು ಇದ್ದು, ಸಂರಕ್ಷಣೆಯ ಅಗತ್ಯತೆ ಇರುತ್ತದೆ.
ಇವು 15-16 ನೇ ಶತಮಾನದ ವಿಜಯನಗರ ಕಾಲಕ್ಕೆ ಸೇರಿದೆ.
ಇದರಲ್ಲಿ ವೀರ ಹಾಗೂ ಆತನ ಪತ್ನಿ ಸತಿಯಾಗಿರುವುದನ್ನು ಚಿತ್ರಿಸಲಾಗಿದೆ.
ಪೂರಕ ಮಾಹಿತಿ :
ಹಂಪಿ ಕನ್ನಡ ವಿವಿ ಕರ್ನಾಟಕ ದೇವಾಲಯ ಕೋಶ ಚಿತ್ರದುರ್ಗ ಜಿಲ್ಲೆ.ಡಾ.ಎಸ್.ವೈ.ಸೋಮಶೇಖರ್.






