ವಿಶೇಷ ಲೇಖನ
ಡಾ. ಸಂತೋಷ್ ಕೆ. ವಿ.
ಹೊಳಲ್ಕೆರೆ, ಚಿತ್ರದುರ್ಗ
ಮೊ : 9342466936
ಸುದ್ದಿಒನ್
ಎಮ್ಮೆಹಟ್ಟಿ ಗ್ರಾಮವು ಕೊಳಹಾಳ್ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು,
ಚಿತ್ರದುರ್ಗದಿಂದ 32 ಕಿಲೋಮೀಟರ್ ದೂರ ವಾಯುವ್ಯಕ್ಕೆ ,
ಚಿತ್ರದುರ್ಗ- ದಾವಣಗೆರೆ ರಾಷ್ಟ್ರೀಯ ಹೆದ್ದಾರಿ 4 ರಮಾರ್ಗದಲ್ಲಿದೆ.
ಗ್ರಾಮಕ್ಕೆ ಹಳೆಗ್ರಾಮ ಇರುವ ಬಗ್ಗೆ ಸ್ಥಳೀಯರಿಗೆ ಮಾಹಿತಿ ಇರುವುದಿಲ್ಲ. ಆದರೆ ಗ್ರಾಮದ ಉತ್ತರಕ್ಕೆ ಹಿಂದೆ ಹಳೆಗ್ರಾಮ ನಿವೇಶನ ಇದ್ದಿರಬಹುದು ಎಂಬುದು ಸ್ಥಳೀಯರ ಅಭಿಪ್ರಾಯವಿದೆ.
ಇದರ ಹತ್ತಿರ ಜಾಗದಲ್ಲಿ ಈಗ ಆಂಜನೇಯ ಸ್ವಾಮಿ ದೇವಾಲಯವಿದ್ದು, ಇದರ ಎದುರು ಭಾಗದಲ್ಲಿ ಶಿಲಾಯುಗದ ಕಾಲದ ನಿಲುವುಗಲ್ಲು ಕಂಡು ಬರುತ್ತದೆ. ಇದರಿಂದ ಹಿಂದೆ ಈ ಸ್ಥಳವು ಪ್ರಾಚೀನ ಮಾನವನ ನೆಲೆಯಾಗಿತ್ತು ಎಂದು ಹೇಳಬಹುದಾಗಿದೆ.
ಗ್ರಾಮದಲ್ಲಿ ಹಿಂದೆ ಬಹಳಷ್ಟು ಸಂಖ್ಯೆಯಲ್ಲಿ ಎಮ್ಮೆಗಳು ಕಂಡು ಬರುತ್ತಿದ್ದ ಕಾರಣಕ್ಕೆ ಈ ಗ್ರಾಮಕ್ಕೆ ಎಮ್ಮೆಹಟ್ಟಿ ಎಂಬ ಹೆಸರು ಬಂದಿದೆ. ಆದರೆ ಇಂದು ಗ್ರಾಮದಲ್ಲಿ ಎಮ್ಮೆಗಳು ಅಷ್ಟಾಗಿ ಕಂಡು ಬರುವುದಿಲ್ಲ.
ಭೌಗೋಳಿಕವಾಗಿ ಇಲ್ಲಿನ ಪ್ರದೇಶವು ಗುಡ್ಡ ಸಾಲಿನ ಇಳಿಜಾರು ಪ್ರದೇಶದಲ್ಲಿ ಗ್ರಾಮದ ನಿರ್ಮಾಣವಾಗಿದೆ. ಗ್ರಾಮದ ಪೂರ್ವ ಭಾಗದಲ್ಲಿ ಕೆರೆಯು ಕಂಡುಬರುತ್ತದೆ. ಸುತ್ತಮುತ್ತಲಿನ ಪ್ರದೇಶವು ಬಯಲು ಸೀಮೆಯ ವಿಶಾಲ ಮೈದಾನವಾಗಿದೆ. ಗ್ರಾಮದ ಪಶ್ಚಿಮಕ್ಕೆ ನೀರ್ಥಡಿ ಗುಡ್ಡವಿದೆ.
ಇತಿಹಾಸ :
ಹತ್ತಿರದ ನೀರ್ಥಡಿ( ದಾವಣಗೆರೆ ತಾ.) ದೇವಾಲಯವನ್ನು ಮುಸ್ಲಿಂ ದಾಳಿಕೋರರು ದಾಳಿ ಮಾಡಿ ಹಾನಿಗೊಳಿಸಿರುತ್ತಾರೆ. ಕ್ರಿ. ಶ.1698 ರಲ್ಲಿ ಚಿತ್ರದುರ್ಗದ ದೊರೆ ಬಿಚ್ಚುಗತ್ತಿ ಭರಮಣ್ಣ ನಾಯಕರು ಮತ್ತೆ ಪುನಃ ಗುಡಿಯನ್ನು ಕಟ್ಟಿಸಿ,ರಂಗನಾಥ ಸ್ವಾಮಿಯ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿಸಿ,ದೇವರ ಅಮೃತಪಡಿಗೆ ನಂದಾದೀವಿಗೆಗಾಗಿ ಭರಮಸಾಗರ ಪಟ್ಟಡಿಗೆ ಸೇರಿದ್ದ ಎಮ್ಮೆಹಟ್ಟಿ ಗ್ರಾಮವನ್ನು ದತ್ತಿ ನೀಡಿ ಶಿಲಾಶಾಸನ ಮಾಡಿಸಿರುತ್ತಾರೆ. ಶಾಸನವನ್ನು ರಂಗನಾಥ ಸ್ವಾಮಿ ದೇವಾಲಯದ ಬಳಿಯಲ್ಲಿ ಇಂದಿಗೂ ಕಾಣಬಹುದಾಗಿದೆ.
ಗ್ರಾಮದ ದಕ್ಷಿಣಕ್ಕೆ ಇರುವ ಗುಡ್ಡದ ಮೇಲೆ ಹಿಂದೆ ತಿಮ್ಮಪ್ಪನ ದೇವಾಲಯವಿದ್ದಿತು. ಆದರೆ ಇಂದು ಇದು ಕಂಡು ಬರುವುದಿಲ್ಲ.
ದೇವಾಲಯ ಪರಿಚಯ:
1. ಚೌಡೇಶ್ವರಿ, ತಿಪ್ಪೇರುದ್ರಸ್ವಾಮಿ,ಬೀರಪ್ಪ (ಬೀರಲಿಂಗೇಶ್ವರ ) ದೇವಾಲಯ:
ಗ್ರಾಮದ ಮಧ್ಯಭಾಗದಲ್ಲಿ ಈ ದೇವಾಲಯವಿದ್ದು,ಉತ್ತಮ ಸಂರಕ್ಷಣಾ ಸ್ಥಿತಿಯಲ್ಲಿದೆ.
ಮೂರು ಗರ್ಭಗೃಹ ಹೊಂದಿರುವ ದೇವಾಲಯ ಇದಾಗಿದೆ. ,ಚೌಡೇಶ್ವರಿ ಶಿಲಾಮೂರ್ತಿ, ಬೀರಲಿಂಗೇಶ್ವರ ತಿಪ್ಪೇರುದ್ರಸ್ವಾಮಿ (ಒಳಮಠ ) ಉತ್ಸವ ಮೂರ್ತಿಗಳನ್ನು ಇಲ್ಲಿ ಪೂಜಿಸಲಾಗುತ್ತದೆ.
2. ತಿಪ್ಪೇರುದ್ರ ಸ್ವಾಮಿ (ಹೊರಮಠ )ದೇವಾಲಯ :
ಗ್ರಾಮದ ಉತ್ತರಭಾಗದಲ್ಲಿರುವ ಈ ದೇವಾಲಯವು 2004 ರಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸಂದರ್ಭದಲ್ಲಿ ನೂತನವಾಗಿ ನಿರ್ಮಿಸಲಾಗಿದೆ.
ಗರ್ಭಗೃಹದಲ್ಲಿ ತಿಪ್ಪೇರುದ್ರಸ್ವಾಮಿಯನ್ನು ಪೂಜಿಸಲಾಗುತ್ತದೆ.
ಪ್ರತಿ ಸೋಮವಾರ, ಅಮಾವಾಸ್ಯೆ,ಹುಣ್ಣಿಮೆ ದಿನ ಇಲ್ಲಿ ವಿಶೇಷ ಪೂಜೆ ಹಾಗೂ ದಾಸೋಹ ನಡೆಯುತ್ತದೆ. ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಈ ಗ್ರಾಮದಲ್ಲಿ ರಥೋತ್ಸವ ನಡೆಸಲಾಗುತ್ತದೆ. ಈ ದೇವಾಲಯದ ಮತ್ತೊಂದು ಗರ್ಭಗೃಹದಲ್ಲಿ ಬಸವಣ್ಣ ದೇವರನ್ನು ಪೂಜಿಸಲಾಗುತ್ತದೆ.
ಗ್ರಾಮದ ಉತ್ತರಕ್ಕೆ ಚೌಡೇಶ್ವರಿಯ ಪುಟ್ಟ ಗುಡಿ ಇದ್ದು, ಪ್ರತಿ ವರ್ಷ ಯುಗಾದಿಯ ನಂತರದ ದಿನಗಳಲ್ಲಿ ಸಾಮೂಹಿಕ ದಾಸೋಹ, ಪರೇವು ನಡೆಸಲಾಗುತ್ತದೆ.
ಇದರ ಜೊತೆಗೆ ಗ್ರಾಮದಲ್ಲಿ ಆಂಜನೇಯ ಸ್ವಾಮಿ,
ಮಾರಮ್ಮ, ಉಡಿಸಲಮ್ಮ, ಗಲ್ಲೆ ದುರ್ಗಮ್ಮದೇವಿ, ದುರ್ಗಾಂಬಿಕಾ ದೇವಿ. ದೇವಾಲಯಗಳಿವೆ. ಇವೆಲ್ಲವೂ ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾದ ದೇವಾಲಯಗಳಾಗಿವೆ.







