ನಮ್ಮ ಊರು ನಮ್ಮ ಹೆಮ್ಮೆ : ಚಿತ್ರದುರ್ಗದ ಹಂಪನೂರು ಗ್ರಾಮ ದರ್ಶನ

4 Min Read

ವಿಶೇಷ ಲೇಖನ
ಡಾ. ಸಂತೋಷ್ ಕೆ. ವಿ.
ಹೊಳಲ್ಕೆರೆ, ಚಿತ್ರದುರ್ಗ
ಮೊ : 9342466936

ಹಂಪನೂರು ಗ್ರಾಮವು ಕೊಳಹಾಳ್ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಚಿತ್ರದುರ್ಗದಿಂದ 32 ಕಿಲೋಮೀಟರ್ ದೂರ ವಾಯುವ್ಯಕ್ಕೆ ,
ಚಿತ್ರದುರ್ಗ- ದಾವಣಗೆರೆ ರಾಷ್ಟ್ರೀಯ ಹೆದ್ದಾರಿ 4 ರ ಮುಖ್ಯ ರಸ್ತೆಯಿಂದ ದಕ್ಷಿಣಕ್ಕೆ 1.5 ಕಿ. ಮೀ. ದೂರದಲ್ಲಿದೆ.

ಹೆಸರಿನ ಮೂಲ :
ಗ್ರಾಮದ ಹೆಸರು ವ್ಯಕ್ತಿ ವಾಚಕವಾಗಿದ್ದು, ಹಿಂದೆ ಈ ಗ್ರಾಮವನ್ನು ಹಂಪಯ್ಯ ಎಂಬುವವನು ಹುಗಿ ಹೊಯ್ದ ಕಾರಣಕ್ಕೆ ಹಂಪಯ್ಯನ ಊರು ಹಂಪನೂರು ಆಗಿದೆ. ಮತ್ತೊಂದು ಹೇಳಿಕೆ ಪ್ರಕಾರ ಹಂಪು(ಬು ) ಎಂದರೆ ಬಳ್ಳಿ ತರುಲತೆಗಳ ಪ್ರದೇಶವೆಂಬ ಅರ್ಥವಿದೆ. ಹಂಪು +ಊರು = ಹಂಪನೂರು ಆಗಿದೆ.

ಗ್ರಾಮಕ್ಕೆ ಹಳೆಗ್ರಾಮ ಇರುವ ಬಗ್ಗೆ ಸ್ಥಳೀಯರಿಗೆ ಮಾಹಿತಿ ಇರುವುದಿಲ್ಲ. ಮೂಲ ಗ್ರಾಮ ಸ್ಥಳವು ಈಗಿನ ಕರಿಗಲ್ಲು ಇರುವ ಜಾಗದಿಂದ ಪಶ್ಚಿಮಕ್ಕೆ ಇದೆ. ಹಳೆಯ ಸ್ಥಳಕ್ಕೆ ಒಂದು ಸುತ್ತು ಕೋಟೆಗೋಡೆ ಇದ್ದು,ಅದರ ಕುರುಹುಗಳನ್ನು ಇಂದಿಗೂ ಕಾಣಬಹುದಾಗಿರುತ್ತದೆ. ಕೋಟೆ ಗೋಡೆ ಸಂಪೂರ್ಣವಾಗಿ ನಾಮಾವಶೇಷವಾಗಿದೆ.ಇದಕ್ಕೆ ಪೂರ್ವ ಮತ್ತು ಪಶ್ಚಿಮದ ದ್ವಾರ ಬಾಗಿಲುಗಳು ಇದ್ದು, ಕಲ್ಲಿನ ಚೌಕಟ್ಟು ಬಾಗಿಲುವಾಡವನ್ನು ಸ್ಥಳೀಯ ಶೈಲಿಯಲ್ಲಿರುವುದನ್ನು ಗಮನಿಸಬಹುದಾಗಿದೆ. ಈಗಿರುವ ಹಂಪನೂರು ಗ್ರಾಮವು ಕೋಟೆ ಗೋಡೆಯ ಪೂರ್ವ ದಿಕ್ಕಿನಲ್ಲಿ ಬೆಳವಣಿಗೆಯಾಗಿದೆ.

ಇದರ ಮಧ್ಯ ಭಾಗದಲ್ಲಿ ಮೂಲ ರಂಗನಾಥ ಸ್ವಾಮಿ ದೇವಸ್ಥಾನ ಇದ್ದಿತು. ಇದು 17-18 ನೇ ಶತಮಾನದಲ್ಲಿ ಸ್ಥಳೀಯ ಕಲ್ಲುಗಳನ್ನು ಬಳಸಿ ಕಟ್ಟಲಾಗಿತ್ತು. ಆದರೆ ಇಂದು ಯಾವುದೇ ಶಿಲ್ಪವಾಗಲಿ, ಪೂಜೆಯಾಗಲಿ ಕಂಡುಬರುವುದಿಲ್ಲ. ದೇವಾಲಯವು ಜೀರ್ಣಾವಸ್ಥೆಯಲ್ಲಿದೆ. ಪ್ರತಿ ವರ್ಷ ಜಾತ್ರಾ ಸಮಯದಲ್ಲಿ ಇದರ ಹೊಸ್ತಿಲಿಗೆ ಪೂಜೆ ನಡೆಸಲಾಗುತ್ತದೆ. ಇಲ್ಲಿಂದ ರಂಗನಾಥ ಸ್ವಾಮಿ ದೇವಾಲಯವನ್ನು ಪೂರ್ವ ದಿಕ್ಕಿನ ಮಟ್ಟಿಯ ಮೇಲೆ ಸ್ಥಳಾಂತರಿಸಿ ನಿರ್ಮಿಸಲಾಯಿತು.

ಭೌಗೋಳಿಕ ಲಕ್ಷಣ :
ಭೌಗೋಳಿಕವಾಗಿ ಗ್ರಾಮದ ಪೂರ್ವ ಭಾಗದ ಪ್ರದೇಶವು ಗುಡ್ಡಸಾಲಿನ ಇಳಿಜಾರು ಪ್ರದೇಶದಲ್ಲಿ ನಿರ್ಮಾಣವಾಗಿದೆ.
ಸುತ್ತಮುತ್ತಲಿನ ಪ್ರದೇಶವು ಬಯಲು ಸೀಮೆಯ ವಿಶಾಲ ಮೈದಾನವಾಗಿದ್ದು, ಅಲ್ಲಲ್ಲಿ ಸಮತಟ್ಟಲ್ಲದ ಏರು – ಇಳಿಜಾರು ಪ್ರದೇಶ ಕೂಡಾ ಕಂಡುಬರುತ್ತದೆ. ಗ್ರಾಮದ ಪಶ್ಚಿಮ ಭಾಗಕ್ಕೆ ಕರಡಿಗುಡ್ಡ ಕಂಡುಬರುತ್ತದೆ. ಇದು ಅಳಗವಾಡಿ ಗುಡ್ಡ ಸಾಲುಗಳ ಮುಂದುವರೆದ ಭಾಗವಾಗಿದ್ದು ದಕ್ಷಿಣದಿಂದ ಉತ್ತರಕ್ಕೆ ಹಬ್ಬಿದ್ದು ಇದು ಮುಂದೆ ಹಾಲೇಕಲ್ ಗುಡ್ಡದೊಂದಿಗೆ ಸೇರಿ ಮುಂದುವರೆಯುತ್ತದೆ.

ಬೆಳೆ ಪದ್ಧತಿ :
ಹಿಂದೆ ಗ್ರಾಮವು ಹತ್ತಿ ಬೆಳೆಗೆ ಹಾಗೂ ಬೇಸಾಯಕ್ಕೆ ತಾಲೂಕಿನಲ್ಲಿ ಪ್ರಸಿದ್ಧಿ ಪಡೆದ ಗ್ರಾಮವಾಗಿತ್ತು. ಉತ್ಕೃಷ್ಟ ಗುಣಮಟ್ಟದ ಇಲ್ಲಿನ ಹತ್ತಿಗೆ ಉತ್ತಮ ಬೆಲೆ ಹಾಗೂ ಮಾರುಕಟ್ಟೆ ಮೌಲ್ಯ ಇದ್ದಿತು. ಇದೀಗ ಹತ್ತಿ ಬೆಳೆ ಅಷ್ಟಾಗಿ ಕಂಡು ಬರುವುದಿಲ್ಲ. ಆದರೆ ಇಂದಿನ ದಿನಗಳಲ್ಲಿ ಇಲ್ಲಿ ಅಡಿಕೆ ಬೆಳೆ, ಮೆಕ್ಕೆಜೋಳ..ಬೆಳೆಯುವ ಕಡೆಗೆ ರೈತರು ಗಮನ ಹರಿಸಿದ್ದಾರೆ.

ದೇವಾಲಯ ಪರಿಚಯ:

1.ರಾಮೇಶ್ವರ ದೇವಾಲಯ:(ರಾಮಸ್ವಾಮಿ )
ಗ್ರಾಮದ ಮಧ್ಯಭಾಗದಲ್ಲಿ ಈ ದೇವಾಲಯವಿದ್ದು,ಉತ್ತಮ ಸಂರಕ್ಷಣಾ ಸ್ಥಿತಿಯಲ್ಲಿದೆ. ಗರ್ಭಗೃಹ ಹಾಗೂ ಸಭಾಮಂಟಪಗಳಿರುವ ದೇವಾಲಯ ಇದಾಗಿದೆ. ಗರ್ಭಗೃಹದಲ್ಲಿ ಈಶ್ವರ ಲಿಂಗವಿದ್ದು ಪೂಜಿಸಲಾಗುತ್ತದೆ. (ಮೂಲ ಹಳೆ ರಾಮೇಶ್ವರ ದೇವಾಲಯವು ಈ ದೇವಾಲಯದ ಪಶ್ಚಿಮ ದಿಕ್ಕಿನಲ್ಲಿದ್ದು,17-18 ನೇ ಶತಮಾನದಲ್ಲಿ ಸ್ಥಳೀಯ ಶೈಲಿಯಲ್ಲಿ, ಸ್ಥಳೀಯ ಕಲ್ಲುಗಳನ್ನು ಬಳಸಿ ನಿರ್ಮಿಸಲಾಗಿತ್ತು.
ಈ ದೇವಾಲಯವು ಈಗ ಜೀರ್ಣಾವಸ್ಥೆಯಲ್ಲಿ ಇದೆ.) ಶ್ರಾವಣದ 4 ವಾರಗಳಲ್ಲಿ ಈ ದೇವಾಲಯದ ಆವರಣದಲ್ಲಿ ಪ್ರತಿವಾರ ಸಾಮೂಹಿಕ ಅನ್ನದಾಸೋಹ ಕಾರ್ಯಕ್ರಮ ನಡೆಸಲಾಗುತ್ತದೆ.

2.ರಂಗನಾಥ ಸ್ವಾಮಿ ದೇವಾಲಯ :
ಗ್ರಾಮದ ಪೂರ್ವ ಭಾಗದ ಮಟ್ಟಿಯ ಮೇಲೆ 18-19 ನೇ ಶತಮಾನದಲ್ಲಿ ಪಾಳೇಗಾರರ ಸೇವೆಯಲ್ಲಿ ಪೂರ್ವಾಭಿಮುಖವಾಗಿ ಈ ದೇವಾಲಯ ನಿರ್ಮಾಣ ಮಾಡಲಾಗಿದೆ. ಗರ್ಭಗೃಹ, ಅಂತರಾಳ, ಸಭಾಮಂಟಪಗಳಿರುವ ದೇವಾಲಯ ಇದಾಗಿದೆ.
ಗರ್ಭಗೃಹದಲ್ಲಿ ಶ್ರೀ ರಂಗನಾಥ ಸ್ವಾಮಿಯ ಶಿಲ್ಪವಿದ್ದು, ಪೂಜಿಸಲಾಗುತ್ತದೆ.

ಅಂತರಾಳದಲ್ಲಿ ಭೂತಪ್ಪ (ಸೋಮ )ಗಳಿವೆ. ದೇವಾಲಯದ ಹೊರಭಾಗದ ಗೋಡೆಯ ಮೇಲೆ ಪಾಳೇಗಾರರ ಲಾಂಛನ ನಾಗರಹಾವಿನ ಉಬ್ಬುಕೆತ್ತನೆ ಕಾಣಬಹುದು.
ಪ್ರತಿವರ್ಷ ವಿಜೃಂಭಣೆಯಿಂದ ಈ ದೇವರ ರಥೋತ್ಸವವನ್ನು ಫೆಬ್ರವರಿ ತಿಂಗಳಿನಲ್ಲಿ ನಡೆಸಲಾಗುತ್ತದೆ.
ಈ ದೇವರಿಗೆ ಸಾವಿರಾರು ಭಕ್ತರು ನಡೆದುಕೊಳ್ಳುತ್ತಾರೆ. ಆ ಕಾರಣಕ್ಕೆ ರಂಗಪ್ಪ, ರಂಗಸ್ವಾಮಿ, ರಂಗನಾಥ, ರಂಗಮ್ಮ…ಎಂಬ ಹೆಸರಿನ ವ್ಯಕ್ತಿಗಳು ಪ್ರತಿ ಮನೆಯಲ್ಲೂ ಕಂಡು ಬರುತ್ತಾರೆ.
ತಮ್ಮ ಊರಿನಲ್ಲಿ ಮಳೆ ಬಾರದಿದ್ದಾಗ,ಮಳೆ ತಡವಾದಾಗ ಈ ದೇವರಿಗೆ ಪೂಜಿಸಿ ಹೊರಡಿಸಿದರೆ ಕಡ್ಡಾಯವಾಗಿ ಮಳೆ ಬರುವುದೆಂಬ ಪ್ರತೀತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.ಆ ಕಾರಣಕ್ಕೆ ಈ ದೇವರಿಗೆ ಮಳೆ ರಂಗಪ್ಪ ಎಂಬ ಹೆಸರು ಕೂಡ ಇದೆ. ಗ್ರಾಮದಿಂದ
ಪಶ್ಚಿಮಕ್ಕೆ 10 ಕಿ.ಮೀ ದೂರವಿರುವ (ನೀರ್ಥಡಿ ವ್ಯಾಪ್ತಿಯಲ್ಲಿ ) ಕರಡಿಗುಡ್ಡದ ಗವಿರಂಗನಾಥ ಗುಡಿಯ ಬಳಿಗೆ ದೇವರನ್ನು ಹೊರಡಿಸಿ ವಿಶೇಷ ಪೂಜೆ ನಡೆಸಲಾಗುತ್ತದೆ. ಗ್ರಾಮದ ವಾರ್ಷಿಕ ಪರೇವು ಆಚರಣೆಯನ್ನು ಇಲ್ಲಿ ನಡೆಸಲಾಗುತ್ತದೆ.

ಈ ದೇವಾಲಯದ ಹೊರ ಭಾಗದಲ್ಲಿ ಲಕ್ಷ್ಮೀ ದೇವಾಲಯ, ಚೌಡೇಶ್ವರಿ ದೇವಾಲಯ,
ಪಾಳೇಗಾರರ ಕಾಲದ ಆಂಜನೇಯ ಸ್ವಾಮಿ ದೇವಾಲಯವನ್ನು ಕಾಣಬಹುದು.

ಇದರ ಜೊತೆಗೆ ಗ್ರಾಮದಲ್ಲಿ ಬೀರಲಿಂಗೇಶ್ವರ, ಆಲದ ಮರದಮ್ಮ, ಉಡಿಸಲಮ್ಮ
ಮಾರಮ್ಮ,
ಗಲ್ಲೆ ದುರ್ಗಮ್ಮದೇವಿ, ದುರ್ಗಾಂಬಿಕಾ ದೇವಿ … ದೇವಾಲಯಗಳಿವೆ.
ಇವೆಲ್ಲವೂ ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾದ ದೇವಾಲಯಗಳಾಗಿವೆ.

*ಶಿವರಾಮ ದೂತರ ಮಠ*
ಅವಧೂತ ಪರಂಪರೆಗೆ ಸೇರಿದ ಮಠ ಇದಾಗಿದೆ. ಶ್ರಾವಣ ಮಾಸದಲ್ಲಿ ವಿಶೇಷ ಭಜನೆ,ಪೂಜಾ ಕಾರ್ಯಕ್ರಮ ಹಾಗೂ ಅನ್ನದಾಸೋಹ ಕಾರ್ಯಕ್ರಮ ಹಿಂದಿನಿಂದಲೂ ನಡೆದುಕೊಂಡು ಬರಲಾಗುತ್ತಿತ್ತು.
ಇತ್ತೀಚಿನ ವರ್ಷಗಳಲ್ಲಿ ಇದು ಅಷ್ಟಾಗಿ ಕಂಡು ಬರುತ್ತಿಲ್ಲ.

Share This Article