ನಮ್ಮ ಊರು ನಮ್ಮ ಹೆಮ್ಮೆ | ಚಿತ್ರದುರ್ಗದ ಹಳವುದರ ಗ್ರಾಮ ದರ್ಶನ

3 Min Read

ವಿಶೇಷ ಲೇಖನ
ಡಾ. ಸಂತೋಷ್ ಕೆ. ವಿ.
ಹೊಳಲ್ಕೆರೆ, ಚಿತ್ರದುರ್ಗ
ಮೊ : 9342466936

ಸುದ್ದಿಒನ್

ಹಳವುದರ ಗ್ರಾಮವು ಅಳಗವಾಡಿ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು,
ಚಿತ್ರದುರ್ಗದಿಂದ 31 ಕಿಲೋಮೀಟರ್ ದೂರ ವಾಯುವ್ಯಕ್ಕೆ ,
ಚಿತ್ರದುರ್ಗ- ಸಿರಿಗೆರೆ- ಹಳೆರಂಗಾಪುರ- ಹಳವುದರ ಮಾರ್ಗದಲ್ಲಿದೆ.

ಹೆಸರಿನ ಮೂಲ :
ಗ್ರಾಮದ ಹೆಸರು ಭೂವಾಚಕವಾಗಿದ್ದು, ಹಳವು ಎಂದರೆ ಪೊದೆ, ಕುರುಚಲು ಕಾಡಿನ ಅರಣ್ಯ +ದರೆ /ದರ ಎಂದರೆ ಪ್ರದೇಶವೆಂಬ ಅರ್ಥವಿದೆ. ಹಳವುದರ ಎಂದರೆ ಪೊದೆಗಳ ಅರಣ್ಯ ಪ್ರದೇಶ ಎಂಬ ಅರ್ಥವಿದೆ. ಹಿಂದೆ ಈ ಭಾಗದಲ್ಲಿ ಯಥೇಚ್ಛವಾಗಿ ಅರಣ್ಯ ಪ್ರದೇಶ ಇದ್ದಿರಬಹುದು. ಆದರೆ ಇಂದು ಈ ಗ್ರಾಮದ ಅಕ್ಕಪಕ್ಕದಲ್ಲಿ ಅರಣ್ಯ ಪ್ರದೇಶವಾಗಲಿ, ಕಾಡು ಕಂಡುಬರುವುದಿಲ್ಲ.

ಗ್ರಾಮದ ಹಂಪನೂರು ರಸ್ತೆಯ ಹಳವುದರ ಲಂಬಾಣಿಹಟ್ಟಿಯ ಉತ್ತರ ಭಾಗದಲ್ಲಿ ಹಳೆ ಗ್ರಾಮ ನಿವೇಶನ ಇರುವ ಬಗ್ಗೆ ಸ್ಥಳೀಯರು ತಿಳಿಸುತ್ತಾರೆ. ಆ ಭಾಗದಲ್ಲಿ ಇಂದಿಗೂ ಭಗ್ನಾವಶೇಷಗಳು ಹಾಗೂ ನಾಮಾವಶೇಷವಾದ ಆಂಜನೇಯ ದೇವಾಲಯದ ಕುರುಹುಗಳು ಕಂಡುಬರುತ್ತವೆ. ಹಳೆಗ್ರಾಮದ ಹೆಸರಿನ ಬಗ್ಗೆ ಸ್ಥಳೀಯರಿಗೆ ಮಾಹಿತಿ ಇರುವುದಿಲ್ಲ.

ಭೌಗೋಳಿಕ ಲಕ್ಷಣ :
ಭೌಗೋಳಿಕವಾಗಿ ಗ್ರಾಮದ ಪ್ರದೇಶವು ಇಳಿಜಾರು ಪ್ರದೇಶದಲ್ಲಿ ನಿರ್ಮಾಣವಾಗಿದೆ. ಇಂದಿಗೂ ಇಲ್ಲಿ ಯಾವುದೇ ಮೊಬೈಲ್ ಸಿಗ್ನಲ್ ದೊರಕುವುದಿಲ್ಲ. ಸುತ್ತಮುತ್ತಲಿನ ಪ್ರದೇಶವು ಬಯಲು ಸೀಮೆಯ ವಿಶಾಲ ಮೈದಾನವಾಗಿದ್ದು, ಅಲ್ಲಲ್ಲಿ ಸಮತಟ್ಟಲ್ಲದ ಏರು – ಇಳಿಜಾರು ಪ್ರದೇಶ ಕೂಡಾ ಕಂಡುಬರುತ್ತದೆ. ಗ್ರಾಮದ ಪಶ್ಚಿಮ ಭಾಗಕ್ಕೆ ಅಳಗವಾಡಿ ಗುಡ್ಡ ಸಾಲುಗಳು ಕಂಡುಬರುತ್ತದೆ. ಇವು ದಕ್ಷಿಣದಿಂದ ಉತ್ತರಕ್ಕೆ ಹಬ್ಬಿದ್ದು ಇದು ಮುಂದೆ ಹಾಲೇಕಲ್ ಗುಡ್ಡದೊಂದಿಗೆ ಸೇರಿ ಮುಂದುವರೆಯುತ್ತದೆ. ಗ್ರಾಮದ ಸುತ್ತಲಿನ ಗುಡ್ಡಗಳಲ್ಲಿ ಹುಟ್ಟುವ ಹಳ್ಳಗಳು ಗ್ರಾಮದ ಮೂರು ಭಾಗಗಳಲ್ಲಿ ಹರಿದು ಮುಂದೆ ಭರಮಸಾಗರ ಕೆರೆಗೆ ತಲುಪುತ್ತವೆ.

ಗ್ರಾಮದ ಹೈನುಗಾರಿಕೆ :
ಗ್ರಾಮದಲ್ಲಿ ಹಸು -ಎಮ್ಮೆಗಳ ಸಾಕಾಣಿಕೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹಾಲು ಹಾಗೂ ಅದರ ಉತ್ಪನ್ನಗಳ ಉತ್ಪಾದನೆ ಇಲ್ಲಿ ಯಥೇಚ್ಛವಾಗಿ ಇಂದಿಗೂ ನಡೆಯುತ್ತದೆ. ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಹೈನುಗಾರಿಕೆ ಬಹಳಷ್ಟು ಸಹಕಾರಿಯಾಗಿದೆ. ಗ್ರಾಮದ ಪ್ರತಿ ಮನೆಯಲ್ಲೂ ಹಸುಗಳನ್ನು ಕಾಣಬಹುದು. ಇಲ್ಲಿನ ಡೈರಿಯಲ್ಲಿ ಉತ್ತಮ ಗುಣಮಟ್ಟದ ಹಾಲಿನ ಸಂಗ್ರಹಣೆ ಪ್ರತಿನಿತ್ಯ ನಡೆಯುತ್ತದೆ. ತಾಲೂಕಿನಲ್ಲಿ ಹೆಚ್ಚು ಹಾಲು ಸಂಗ್ರಹಣೆ ಹಾಗೂ ಉತ್ಪಾದನೆಯಾಗುವ ಪ್ರಮುಖ ಗ್ರಾಮಗಳಲ್ಲಿ ಈ ಗ್ರಾಮವೂ ಒಂದಾಗಿದೆ.

ವೀರಗಲ್ಲುಗಳು :
ಗ್ರಾಮದ ಕಲ್ಲೇಶ್ವರ ದೇವಾಲಯದ ಬಳಿಯಲ್ಲಿ ವೀರಗಲ್ಲು ಇದ್ದು, ಸಂರಕ್ಷಣೆ ಮಾಡಲಾಗಿರುತ್ತದೆ. ಇದು ಮೂರು ಹಂತಗಳಲ್ಲಿ ಇದ್ದು,ತುರುಗೋಳ್ ವೀರಗಲ್ಲು ಆಗಿದೆ. ಹಸುಗಳ ರಕ್ಷಣೆಯಲ್ಲಿ ಪ್ರಾಣ ತ್ಯಾಗ ಮಾಡಿದ ಗ್ರಾಮದ ಯೋಧನಿಗಾಗಿ ನೆಟ್ಟ ವೀರಗಲ್ಲು ಇದಾಗಿದೆ.
ಇವು 12-13 ನೇ ಶತಮಾನದ ಹೊಯ್ಸಳರ ಕಾಲಕ್ಕೆ ಸೇರಿದೆ ಎಂದು ಸಂಶೋಧಕರಾದ ಮಹೇಶ್ ಕುಂಚಿಗನಾಳ ಹೇಳುತ್ತಾರೆ.
ಇದರಲ್ಲಿ ವೀರನನ್ನು ಅಪ್ಸರೆಯರು ದೇವಲೋಕಕ್ಕೆ ಕೊಂಡೊಯ್ಯುತ್ತಿರುವ ಚಿತ್ರಣವಿದೆ.

ದೇವಾಲಯ ಪರಿಚಯ:

1.ಕಲ್ಲೇಶ್ವರ ದೇವಾಲಯ:
ಗ್ರಾಮದ ಮಧ್ಯಭಾಗದಲ್ಲಿ ಈ ದೇವಾಲಯವಿದ್ದು,ಉತ್ತಮ ಸಂರಕ್ಷಣಾ ಸ್ಥಿತಿಯಲ್ಲಿದೆ. ಗರ್ಭಗೃಹ ಹಾಗೂ ಸಭಾಮಂಟಪಗಳಿರುವ ದೇವಾಲಯ ಇದಾಗಿದೆ. ಗರ್ಭಗೃಹದಲ್ಲಿ ಈಶ್ವರ ಲಿಂಗವಿದ್ದು ಪೂಜಿಸಲಾಗುತ್ತದೆ. ಪ್ರತಿ ವರ್ಷ ಈ ದೇವಾಲಯದ ಬಳಿಯಲ್ಲಿ ಸಾಮೂಹಿಕ ಪರೇವು ಆಚರಣೆ ಹಾಗೂ ಮಹೇಶ್ವರ ಸ್ವಾಮಿ ಜಾತ್ರೆಯನ್ನು ನಡೆಸಲಾಗುತ್ತದೆ. ಈ ದೇವಾಲಯದ ಹೊರಭಾಗದಲ್ಲಿ ಗಣಪತಿ ದೇವಾಲಯವಿದೆ. ಗ್ರಾಮದ ಮಧ್ಯಭಾಗದಲ್ಲಿ ಕಲ್ಲೇಶ್ವರ ಸ್ವಾಮಿಯ ಉತ್ಸವ ಮೂರ್ತಿ ಮಂದಿರವಿದೆ.

2. ಆಂಜನೇಯ ಸ್ವಾಮಿ ದೇವಾಲಯ :
ಗ್ರಾಮದ ಮಧ್ಯಭಾಗದಲ್ಲಿ ದಕ್ಷಿಣಾಭಿಮುಖವಾಗಿ ನಿರ್ಮಾಣ ಮಾಡಲಾಗಿರುವ ಈ ದೇವಾಲಯದ ಗರ್ಭಗೃಹದಲ್ಲಿ ಆಂಜನೇಯ ಸ್ವಾಮಿಯನ್ನು ಪೂಜಿಸಲಾಗುತ್ತದೆ. ಗರ್ಭಗೃಹದಲ್ಲಿ ಭೂತಪ್ಪ ಹಾಗೂ ಬಾಣಪ್ಪಗಳಿದ್ದು ಜಾತ್ರೆ,ಮೆರವಣಿಗೆ ಸಮಯದಲ್ಲಿ ಇದನ್ನು ಹೊರಡಿಸಲಾಗುತ್ತದೆ. ಗರ್ಭಗೃಹ, ಸಭಾಮಂಟಪಗಳಿರುವ ದೇವಾಲಯ ಇದಾಗಿದೆ. ಪ್ರತಿ ವರ್ಷ ಈ ದೇವರ ರಥೋತ್ಸವವನ್ನು ನಡೆಸಲಾಗುತ್ತದೆ.

3. ಮಾಸ್ತಮ್ಮ ದೇವಾಲಯ :
ಗ್ರಾಮದ ಮಧ್ಯ ಭಾಗದಲ್ಲಿ ಪೂರ್ವಭಿಮುಖವಾಗಿ 16-17 ನೇ ಶತಮಾನದಲ್ಲಿ ನಿರ್ಮಿಸಲಾದ ಪಾಳೇಗಾರರ ಕಾಲದ ದೇವಾಲಯ ಇದಾಗಿದೆ. ದೇವಾಲಯದ ಹೊರ ಗೋಡೆಯ ಮೇಲೆ ಪಾಳೆಗಾರರ ಲಾಂಛನವಾದ ನಾಗರಹಾವಿನ ಉಬ್ಬುಕೆತ್ತನೆಯನ್ನು ಕಾಣಬಹುದು.ಗರ್ಭಗೃಹದಲ್ಲಿ ವೀರಮಾಸ್ತಿಗಲ್ಲು ಇದ್ದು, ಮಾಸ್ತಮ್ಮ ಎಂದು ಪೂಜಿಸಲಾಗುತ್ತದೆ.

ಇದರ ಮುಂದೆ ನಿಪ್ಪೆಗಲ್ಲು ಎಂದು ಹೇಳಲಾಗುವ ಶಾಸನವಿದ್ದು,ಇದನ್ನು ಕ್ರಿ. ಶ.1718 ರಲ್ಲಿ ಚಿತ್ರದುರ್ಗದ ಪಾಳೆಯಗಾರ ಬಿಚ್ಚುಗತ್ತಿ ಭರಮಣ್ಣನಾಯಕನ ಕಾಲದಲ್ಲಿ ಹಾಕಿಸಲಾಗಿದೆ. ಇದನ್ನು ಎಪಿಗ್ರಾಫಿಯ ಕರ್ನಾಟಕ ಚಿತ್ರದುರ್ಗ ಜಿಲ್ಲಾ ಶಾಸನ ಸಂಪುಟ 11ರಲ್ಲಿ ಪ್ರಕಟಿಸಲಾಗಿದೆ.( ಪೂರಕ ಮಾಹಿತಿ :ಚಿತ್ರದುರ್ಗದ ರಾಜಾ ಬಿಚ್ಚುಗತ್ತಿ ಭರಮಣ್ಣ ನಾಯಕ ಲೇಖಕರಾದ ಲಕ್ಷ್ಮಣ್ ತೆಲಗಾವಿ.)

ಶಾಸನದ ವಿವರಣೆ :
ಇದೊಂದು ಅಗ್ರಹಾರ ಗ್ರಾಮದಾನದ ಶಾಸನ. ಚಿತ್ರದುರ್ಗ ಸೀಮೆಗೆ ಸೇರಿದ ಹಳವುದರ ಗ್ರಾಮವನ್ನು ಬಿಚ್ಚುಗತ್ತಿ ಭರಮಣ್ಣ ನಾಯಕನು ತನ್ನ ಭಟ್ಟರುಗಳಿಗೆ ಕೀರ್ತಿ ಸುಕೃತವಾಗಬೇಕೆಂದು ಭಟ್ಟರ ತಿಮ್ಮಪ್ಪ ಎಂಬುವವನಿಗೆ ಧಾರಾಪೂರ್ವಕವಾಗಿ ಕೊಡುತ್ತಾನೆ. ಈ ಶಾಸನದ ಉದ್ದೇಶಕ್ಕೆ ಭಂಗತಾರದಂತೆ ನಡೆದುಕೊಳ್ಳಲು ಕ್ಷತ್ರಿಯರು, ಬೇಡರು,ಗುರಸ್ತರು, ತುರುಕರು, ಬ್ರಾಹ್ಮಣರು ಈ ವರ್ಗಗಳವರಿಗೆ ಆದೇಶಿಸಲಾಗಿದೆ.

ಇದರ ಜೊತೆಗೆ ಗ್ರಾಮದಲ್ಲಿ ಉಡಿಸಲಮ್ಮ, ಪೀರದಮ್ಮ,
ದೇವಾಲಯಗಳಿವೆ. ಇವೆಲ್ಲವೂ ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾದ ದೇವಾಲಯಗಳಾಗಿವೆ.

Share This Article