ನಮ್ಮ ಊರು ನಮ್ಮ ಹೆಮ್ಮೆ | ಚಿತ್ರದುರ್ಗದ ಹಳೇರಂಗಾಪುರ ಗ್ರಾಮ ದರ್ಶನ

2 Min Read

 

ವಿಶೇಷ ಲೇಖನ
ಡಾ. ಸಂತೋಷ್ ಕೆ. ವಿ.
ಹೊಳಲ್ಕೆರೆ, ಚಿತ್ರದುರ್ಗ
ಮೊ : 9342466936

 

ಹಳೇರಂಗಾಪುರ ಗ್ರಾಮವು ಸಿರಿಗೆರೆ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಚಿತ್ರದುರ್ಗದಿಂದ 28 ಕಿಲೋಮೀಟರ್ ದೂರ ವಾಯುವ್ಯಕ್ಕೆ ,
ಚಿತ್ರದುರ್ಗ- ಹಿರೇಬೆನ್ನೂರು- ಸಿರಿಗೆರೆ – ಹಳೇರಂಗಾಪುರ ಮಾರ್ಗದಲ್ಲಿದೆ.

ಗ್ರಾಮಕ್ಕೆ ಹಳೆಗ್ರಾಮ ನಿವೇಶನವು ಗ್ರಾಮದಿಂದ ಹಂಪನೂರು ರಸ್ತೆಯ ಬಲಭಾಗದಲ್ಲಿ ಒಂದು ಕಿಲೋಮೀಟರ್ ದೂರದಲ್ಲಿದೆ. ಹಳೆ ಗ್ರಾಮ ನಿವೇಶನದ ಹೆಸರು ಸ್ಥಳೀಯರಿಗೆ ಮಾಹಿತಿ ಇರುವುದಿಲ್ಲ.

ಹೆಸರಿನ ಮೂಲ :
ಹೆಸರಿನ ಮೂಲಕ್ಕೆ ಅನ್ವರ್ಥಕವಾಗಿ ಗ್ರಾಮದಲ್ಲಿ ಯಾವುದೇ ರಂಗನಾಥ ಸ್ವಾಮಿ ದೇವಾಲಯ ಇರುವುದಿಲ್ಲ. ಹಿಂದೆ ಗ್ರಾಮಕ್ಕೆ ಹುಗಿ ಹೊಯ್ದ ರಂಗಪ್ಪ ಎನ್ನುವ ಹೆಸರಿನ ವ್ಯಕ್ತಿಯಿಂದ ಗ್ರಾಮಕ್ಕೆ ರಂಗಾಪುರ ಹೆಸರು ಬಂದಿರಬಹುದು. ಇದರ ಬಗ್ಗೆ ಮತ್ತಷ್ಟು ಮಾಹಿತಿಯ ಅಗತ್ಯತೆ ಇರುತ್ತದೆ. ಗ್ರಾಮದ ನೈರುತ್ಯಕ್ಕೆ ಇರುವ ಹೊಸರಂಗಾಪುರ ಗ್ರಾಮವನ್ನು ಪ್ರತ್ಯೇಕಿಸಲು ಈ ಗ್ರಾಮಕ್ಕೆ ಹಳೇರಂಗಾಪುರ ಹೆಸರು ಬಂದಿದೆ.

ಭೌಗೋಳಿಕವಾಗಿ ಗಮನಿಸಬಹುದಾದರೆ ಗ್ರಾಮವು ಸಂಪೂರ್ಣ ಬಯಲು ಸೀಮೆಯ ವಾತಾವರಣ ಹೊಂದಿದ್ದು,
ಸುತ್ತಲೂ ಸಮತಟ್ಟು, ಕೆಲವೆಡೆ ಏರು ತಗ್ಗುಗಳ ಭೂಪ್ರದೇಶವು ಕಂಡು ಬರುತ್ತದೆ. ಗ್ರಾಮದ ವಾಯುವ್ಯಕ್ಕೆ ಹಳ್ಳ ಹರಿಯುತ್ತದೆ. ಇದು ಮುಂದೆ ಭರಮಸಾಗರ ಕೆರೆಗೆ ತಲುಪುತ್ತದೆ. ಮಳೆಯಾಶ್ರಿತ ಬೆಳೆಗಳ ಜೊತೆಗೆ ಅಡಿಕೆ ಮಂತಾದ ವಾಣಿಜ್ಯ ಬೆಳೆಗಳತ್ತಲೂ ರೈತರು ಇತ್ತೀಚಿನ ದಿನಗಳಲ್ಲಿ ಗಮನಹರಿಸಿದ್ದಾರೆ.

ವೀರಗಲ್ಲು :
ಹಳೆಗ್ರಾಮ ನಿವೇಶನದಲ್ಲಿ 15 ನೇ ಶತಮಾನಕ್ಕೆ ಸೇರಿದ ಮಾಸ್ತಿಗಲ್ಲು ಇದ್ದು,ಇದು ತೃಟಿತವಾಗಿದೆ. ಇದರ ಬಳಿಯಲ್ಲಿ ಹಿಂದೆ ಆಂಜನೇಯ ಸ್ವಾಮಿ ದೇವಾಲಯವಿದ್ದ ಕುರುಹುಗಳು, ಭಗ್ನಾವಶೇಷಗಳು ಕಂಡುಬರುತ್ತವೆ. ಇದರ ಬಳಿಯಲ್ಲಿ 16 ನೇ ಶತಮಾನದ ವಿಜಯನಗರ ಕಾಲಕ್ಕೆ ಸೇರಿದ ವೀರಮಾಸ್ತಿಗಲ್ಲು ಇದ್ದು, ಐದು ಅಡಿ ಎತ್ತರವಿದೆ. ಇದು ಬಹಳಷ್ಟು ಅಪರೂಪದ್ದಾಗಿದೆ ಎಂದು ಸಂಶೋಧಕರಾದ ಮಹೇಶ್ ಕುಂಚಿಗನಾಳ ಹೇಳುತ್ತಾರೆ. ಪ್ರತಿ ವರ್ಷ ಈ ಜಾಗದಲ್ಲಿ ಗ್ರಾಮದ ಪರವಾಗಿ ಪರೇವು ಆಚರಣೆ ನಡೆಸಲಾಗುತ್ತದೆ.ಇದಕ್ಕೆ ಸಂರಕ್ಷಣೆಯ ಅಗತ್ಯತೆ ಇರುತ್ತದೆ.

ಗ್ರಾಮದಲ್ಲಿರುವ ದೇವಾಲಯಗಳು :

1.ಆಂಜನೇಯ ಸ್ವಾಮಿ ದೇವಸ್ಥಾನ
ಗ್ರಾಮದ ಮಧ್ಯಭಾಗದಲ್ಲಿ ದಕ್ಷಿಣಾಭಿಮುಖವಾಗಿ ಈ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ.
ಗರ್ಭಗೃಹದಲ್ಲಿ ಆಂಜನೇಯನ ಶಿಲ್ಪವಿದ್ದು, ಪೂಜಿಸಲಾಗುತ್ತದೆ. ಗರ್ಭಗೃಹ ಹಾಗೂ ಸಭಾಮಂಟಪಗಳು ಇರುವ ದೇವಾಲಯ ಇದಾಗಿದ್ದು. ರಾಮನವಮಿಯ ಸಮಯದಲ್ಲಿ ಈ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು, ರಥೋತ್ಸವ ನಡೆಯುತ್ತವೆ.

ಈ ದೇವಾಲಯದ ಬಳಿಯಲ್ಲಿ ಕರಿಗಲ್ಲು ಇದ್ದು , ಇದು ಗ್ರಾಮದ ಹುಗಿ ಹೊಯ್ದ ಸ್ಥಳವಾಗಿದೆ. ಇದರ ಬಳಿಯಲ್ಲಿ ಬರಹಗಲ್ಲು ಇದ್ದು ಮಳೆ ಬಾರದ ವರ್ಷಗಳಲ್ಲಿ ಇದಕ್ಕೆ ನೂರಾ ಒಂದು ಬಿಂದಿಗೆ ನೀರನ್ನು ಅಭಿಷೇಕ ಮಾಡುವ ಆಚರಣೆ ಇದೆ. ಇದು ದೇವಾಲಯಗಳಿಗೆ ಹಿಂದೆ ದಾನ ಕೊಟ್ಟ ಜಮೀನು, ಭೂಮಿಯ ಮೇರೆಗಲ್ಲಾಗಿರುತ್ತದೆ ಎಂದು ಸಂಶೋಧಕರಾದ ಹಂಪಿ ವಿ.ವಿ ಯ ಡಾ.ಸೋಮಶೇಖರ್.ಎಸ್. ವೈ. ಅಭಿಪ್ರಾಯ ಪಡುತ್ತಾರೆ. ಸ್ಥಳೀಯರು ಇದಕ್ಕೆ ನಿಪ್ಪೇಗಲ್ಲು ಎನ್ನುತ್ತಾರೆ. ಪ್ರತಿ ವರ್ಷ ಗ್ರಾಮದ ದೇವರುಗಳನ್ನು ಮಿಂಚೇರಿ ಗುಡ್ಡಕ್ಕೆ ಹೊಳೆಪೂಜೆಗಾಗಿ ಕರೆದುಕೊಂಡು ಹೋಗಲಾಗುತ್ತದೆ.

2.ದೊಣ್ಣೆ ಕೆಂಚಮ್ಮ ದೇವಿ ದೇವಸ್ಥಾನ :
ಗ್ರಾಮದ ಮಧ್ಯಭಾಗದಲ್ಲಿ ಸ್ಥಳೀಯ ಶೈಲಿಯಲ್ಲಿ ಈ ದೇವಾಲಯವಿದೆ. ಈ ದೇವರ ಜಾತ್ರೆಯನ್ನು ಪ್ರತಿ ಐದು ವರ್ಷಕ್ಕೆ ಒಂದು ಬಾರಿ ವಿಜೃಂಭಣೆಯಿಂದ ನಡೆಸಲಾಗುತ್ತದೆ.

3.ಕೊಲ್ಲಾಪುರದಮ್ಮ ದೇವಿ ದೇವಾಲಯ :
ಗ್ರಾಮದ ಮಧ್ಯಭಾಗದಲ್ಲಿ ಸ್ಥಳೀಯ ಶೈಲಿಯಲ್ಲಿ ಈ ದೇವಸ್ಥಾನ ನಿರ್ಮಾಣ ಮಾಡಲಾಗಿದೆ.

4.ಈಶ್ವರ ದೇವಸ್ಥಾನ:
ಗ್ರಾಮದ ಮಧ್ಯ ಭಾಗದಲ್ಲಿರುವ ಈ ದೇವಾಲಯವು ಪೂರ್ವಾಭಿಮುಖವಾಗಿ ನಿರ್ಮಾಣ ಮಾಡಲಾಗಿದೆ. ಗರ್ಭಗೃಹದಲ್ಲಿ ಈಶ್ವರಲಿಂಗ ಹಾಗೂ ಬಸವಣ್ಣ ದೇವರನ್ನು ಪೂಜಿಸಲಾಗುತ್ತದೆ. ಇದರ ಜೊತೆಗೆ ಗ್ರಾಮದ ಮಧ್ಯಭಾಗದಲ್ಲಿ ಗೌರಸಂದ್ರ ಮಾರಮ್ಮ, ಗುರುಮೂರ್ತಿ ದೇವಸ್ಥಾನವಿದೆ.

Share This Article