ನಮ್ಮ ಊರು ನಮ್ಮ ಹೆಮ್ಮೆ | ಚಿತ್ರದುರ್ಗ ಬೊಮ್ಮಕ್ಕನಹಳ್ಳಿ ಗ್ರಾಮ ದರ್ಶನ

3 Min Read

 

ವಿಶೇಷ ಲೇಖನ
ಡಾ. ಸಂತೋಷ್ ಕೆ. ವಿ.
ಹೊಳಲ್ಕೆರೆ, ಚಿತ್ರದುರ್ಗ
ಮೊ : 9342466936

ಬೊಮ್ಮಕ್ಕನಹಳ್ಳಿ ಗ್ರಾಮವು ಕೂನಬೇವು ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಚಿತ್ರದುರ್ಗದಿಂದ 22 ಕಿಲೋಮೀಟರ್ ದೂರ ಈಶಾನ್ಯಕ್ಕೆ , ಚಿತ್ರದುರ್ಗ- ನಾಯಕನಹಟ್ಟಿ ಮಾರ್ಗದಲ್ಲಿದೆ.
ಗ್ರಾಮದ ಹಳೆಗ್ರಾಮ ನಿವೇಶನವು ಗ್ರಾಮದಿಂದ ಪಶ್ಚಿಮಕ್ಕೆ ಅರ್ಧ ಕಿಲೋಮೀಟರ್ ದೂರದಲ್ಲಿದೆ. ಈಗ ಹಳೆಗ್ರಾಮವು ಬೇಚರಾಕ್ ಆಗಿದೆ. ಹಳೆ ಗ್ರಾಮ ನಿವೇಶನದಲ್ಲಿ ಈಗ ಆಂಜನೇಯ ಸ್ವಾಮಿ ದೇವಸ್ಥಾನ ಹಾಗೂ ವೀರಗಲ್ಲು ಕಂಡುಬರುತ್ತದೆ. ವೀರಗಲ್ಲುಗಳಿಂದ ಗ್ರಾಮವು ಸುಮಾರು 9ನೇ ಶತಮಾನದಿಂದಲೂ ಅಸ್ತಿತ್ವದಲ್ಲಿ ಇರುವ ಬಗ್ಗೆ ತಿಳಿಯುತ್ತದೆ.

ಹೆಸರಿನ ಮೂಲ :
ಗ್ರಾಮದ ಹೆಸರು ವ್ಯಕ್ತಿ ವಾಚಕವಾಗಿದ್ದು, ಬೊಮ್ಮಕ್ಕ ಎಂಬ ಹೆಸರಿನ ವ್ಯಕ್ತಿಯಿಂದ ಈ ಗ್ರಾಮಕ್ಕೆ ಹೆಸರು ಬಂದಿದೆ.

ಗ್ರಾಮದ ಉತ್ತರಕ್ಕೆ ಇರುವ ಸಿದ್ದಲಿಂಗೇಶ್ವರ ಸ್ವಾಮಿ ಗುಡ್ಡವು ಹಿಂದಿನಿಂದಲೂ ಎರಡು ತಾಲೂಕುಗಳ (ಚಿತ್ರದುರ್ಗ ಹಾಗೂ ಚಳ್ಳಕೆರೆ ತಾಲೂಕುಗಳು) ಗಡಿ ರೇಖೆಯಾಗಿದೆ.ಹಿಂದೆ ಇದೇ ಚಿತ್ರದುರ್ಗ ಸಂಸ್ಥಾನ ಹಾಗೂ (ನಾಯಕನ)ಹಟ್ಟಿ ಸಂಸ್ಥಾನದ ಮಧ್ಯದ ಗಡಿ ರೇಖೆ ಕೂಡ ಆಗಿತ್ತು ಎನ್ನಲಾಗುತ್ತದೆ. ಇಂದಿಗೂ ಇದೇ 2 ತಾಲೂಕುಗಳಿಗೆ ಗಡಿಯಾಗಿ ಮುಂದುವರೆದಿದೆ.

ಭೌಗೋಳಿಕ ಲಕ್ಷಣ :
ಭೌಗೋಳಿಕವಾಗಿ ಗ್ರಾಮದ
ಸುತ್ತಮುತ್ತಲಿನ ಪ್ರದೇಶವು ಬಯಲು ಸೀಮೆಯ ವಿಶಾಲ ಮೈದಾನವಾಗಿದ್ದು, ಸಮತಟ್ಟು ಭೂ ಪ್ರದೇಶವೇ ಸುತ್ತಲೂ ಹರಡಿದೆ. ಅಲ್ಲಲ್ಲಿ ಏರಿಳಿತ ಇರುವ ಭೂಪ್ರದೇಶಗಳು ಕಂಡುಬರುತ್ತದೆ. ಚಿತ್ರದುರ್ಗ ತಾಲೂಕಿನ ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಇದೂ ಒಂದಾಗಿದೆ.

ವೀರಗಲ್ಲುಗಳು :
ಗ್ರಾಮದ ಹಳೆಗ್ರಾಮದ ಜಮೀನಿನಲ್ಲಿ ಇರುವ ತುರುಗೋಳ್ ವೀರಗಲ್ಲು ಅತ್ಯಂತ ಅಪರೂಪ, ಹಳೆಯದಾದ, ದೊಡ್ಡದಾದ ವೀರಗಲ್ಲಾಗಿದೆ. ಸ್ಥಳೀಯರು ಇದನ್ನು ಹುಲುಸುಕಲ್ಲು ಎನ್ನುತ್ತಾರೆ.
ಇದು ಸರಿಸುಮಾರು 9-10 ನೇ ಶತಮಾನದ (ಗಂಗರ ಅಧೀನದಲ್ಲಿ) ನೊಳಂಬರ ಕಾಲಕ್ಕೆ ಸೇರಿದ್ದು, ಮೂರು ಹಂತಗಳಿವೆ.

ಇದರಲ್ಲಿ ವೀರನು ತುರುಗಳ ( ದನ ಕರುಗಳ)ರಕ್ಷಣಾ ಕಾರ್ಯದಲ್ಲಿ ಬಿಲ್ಲು ಬಾಣದ ಹೋರಾಟ ನಡೆಸಿ ಹುತಾತ್ಮನಾಗಿದ್ದು,ಆತನನ್ನು ಅಪ್ಸರೆಯರು ಸ್ವರ್ಗಲೋಕಕ್ಕೆ ಕರೆದುಕೊಂಡು ಹೋಗುತ್ತಿರುವ ಚಿತ್ರಣವನ್ನು ಕಾಣಬಹುದು. ಮತ್ತೊಂದು ವೀರಗಲ್ಲು ಗ್ರಾಮದ ಚಳ್ಳಕೆರೆ ರಸ್ತೆಯಲ್ಲಿದೆ. ಇದು 10 ನೇ ಶತಮಾನಕ್ಕೆ ಸೇರಿದ್ದು, ಅತ್ಯಂತ ದೊಡ್ಡದಾದ ವೀರಗಲ್ಲಾಗಿದೆ. ಇದರಲ್ಲಿ ಹುತಾತ್ಮನಾದ ಯೋಧನು ಅಶ್ವರೂಢನಾಗಿದ್ದು, ಭರ್ಜೀಯನ್ನು ಹಿಡಿದಿದ್ದಾನೆ.
ಬಿಲ್ಲು ಬಾಣಗಳ ಹೋರಾಟದಲ್ಲಿ ಯೋಧನು ಹುತಾತ್ಮನಾಗಿದ್ದು, ಆತನನ್ನು ಅಪ್ಸರೆಯರು ಕೈಲಾಸಕ್ಕೆ ಕರೆದುಕೊಂಡು ಹೋಗುತ್ತಿರುವುದನ್ನು ಹಾಗೂ ಯೋಧನು ಶಿವಸ್ಮರಣೆಯಲ್ಲಿ ನಿರತನಾಗಿರುವುದನ್ನು ಚಿತ್ರಿಸಲಾಗಿದೆ ಎಂದು ಸಂಶೋಧಕರಾದ ಮಹೇಶ್ ಕುಂಚಿಗನಾಳ ಹೇಳುತ್ತಾರೆ. ಇವುಗಳನ್ನು ಸಂರಕ್ಷಣೆ ಮಾಡುವ ಅಗತ್ಯತೆ ಇರುತ್ತದೆ.

ದೇವಾಲಯ ಪರಿಚಯ:

1.ಗುಂಡು ಬೋರಲಿಂಗೇಶ್ವರ ಸ್ವಾಮಿ (ಸಿದ್ಧಲಿಂಗೇಶ್ವರ) ದೇವಾಲಯ:
ಗ್ರಾಮದ ಮಧ್ಯಭಾಗದಲ್ಲಿರುವ ಈ ದೇವಾಲಯ ಸ್ಥಳೀಯ ಶೈಲಿಯಲ್ಲಿ ಪೂರ್ವಾಭಿಮುಖವಾಗಿ ನಿರ್ಮಾಣ ಮಾಡಲಾಗುತ್ತಿದೆ. ಹಿಂದಿನ ದೇವಾಲಯವು 19 ನೇ ಶತಮಾನದ ಸ್ಥಳಿಯ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿತ್ತು.
ಗ್ರಾಮದ ಉತ್ತರಕ್ಕೆ ಇರುವ ಸಿದ್ಧಲಿಂಗೇಶ್ವರ ಸ್ವಾಮಿ ಬೆಟ್ಟದ ಮೇಲೆ ಈ ದೇವರ ಉದ್ಭವ ಮೂರ್ತಿ ಇದ್ದು, ಇದನ್ನು ಬೋರೆದೇವರು ಎಂದು ಕೂಡ ಹೇಳುತ್ತಾರೆ. ಈ ದೇವರ ಉತ್ಸವಗಳು ಶಿವರಾತ್ರಿಯ ಸಮಯದಲ್ಲಿ ಜರುಗುತ್ತವೆ.

2.ಆಂಜನೇಯ ಸ್ವಾಮಿ ದೇವಾಲಯ :
ಗ್ರಾಮದ ಹಳೆಗ್ರಾಮ ಭಾಗದಲ್ಲಿ ದಕ್ಷಿಣಾಭಿಮುಖವಾಗಿ ನಿರ್ಮಾಣ ಮಾಡಲಾಗಿರುವ ಈ ದೇವಾಲಯದ ಗರ್ಭಗೃಹದಲ್ಲಿ ಪಾಳೇಗಾರರ ಕಾಲದ ಆಂಜನೇಯ ಸ್ವಾಮಿಯನ್ನು ಪೂಜಿಸಲಾಗುತ್ತದೆ.
ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಇಲ್ಲಿ ಸಾಮೂಹಿಕ ಪರೇವು ಆಚರಣೆಯನ್ನು ನಡೆಸಲಾಗುತ್ತದೆ. ಇದರ ಎದುರು ಭಾಗದಲ್ಲಿ ಭೂತಪ್ಪ ದೇವರ ಬಯಲು ಆಲಯವಿದೆ.

3. ಬೀರಲಿಂಗೇಶ್ವರಸ್ವಾಮಿ ದೇವಸ್ಥಾನ
ಗ್ರಾಮದ ಮಧ್ಯಭಾಗದಲ್ಲಿ ಪೂರ್ವಾಭಿಮುಖವಾಗಿ ಸ್ಥಳೀಯ ಶೈಲಿಯಲ್ಲಿ ಈ ದೇವರ ದೇವಾಲಯವನ್ನು ನಿರ್ಮಿಸಲಾಗುತ್ತಿದೆ.

4.ದುರ್ಗಾಂಬಿಕಾ ದೇವಿ ದೇವಸ್ಥಾನ
ಗ್ರಾಮದ ಮಧ್ಯ ಭಾಗದಲ್ಲಿ ಸ್ಥಳೀಯ ಶೈಲಿಯಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ.

ಇದರ ಜೊತೆಗೆ ಗ್ರಾಮದಲ್ಲಿ ಪೆದ್ದಮ್ಮ,ಮಾರಮ್ಮ, ಪೀರಲ ದೇವರು ದೇವಾಲಯಗಳಿವೆ.

Share This Article