ತುರುವನೂರು ಪಂಚಾಯತಿ ವ್ಯಾಪ್ತಿಯಲ್ಲಿರುವ ಬೊಗಳೇರಹಟ್ಟಿ ಗ್ರಾಮವು ಚಿತ್ರದುರ್ಗದಿಂದ ಉತ್ತರಕ್ಕೆ 24 ಕಿಲೋಮೀಟರ್ ದೂರದಲ್ಲಿ ಚಿತ್ರದುರ್ಗ – ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ದೂರದಲ್ಲಿದೆ.
ಗ್ರಾಮವು ತುರುವನೂರು ಕಂದಾಯ ಗ್ರಾಮ ವ್ಯಾಪ್ತಿಯಲ್ಲಿದೆ.( ಇದೀಗ ನೂತನ ಕಂದಾಯ ಗ್ರಾಮ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ.)
ಮೂಲ ಗ್ರಾಮವು ಹಿಂದೆ ಪಶ್ಚಿಮಕ್ಕೆ ಇರುವ ಸಂಗೇನಹಳ್ಳಿ ಕೆರೆಯ ಮಧ್ಯಭಾಗದ ಓಬಳಾಪುರ ಗಡ್ಡೆಯಲ್ಲಿದ್ದಿತು. 1952-53 ರಲ್ಲಿ ಕೆರೆಯ ನಿರ್ಮಾಣದ ಸಂದರ್ಭದಲ್ಲಿ ಅಲ್ಲಿಂದ ಗ್ರಾಮವನ್ನು
ಹವಳೇನಹಳ್ಳಿ ಹಳೆ ಗ್ರಾಮ ನಿವೇಶನ ಜಾಗಕ್ಕೆ ಸ್ಥಳಾಂತರ ಮಾಡಲಾಯಿತು ಅಲ್ಲಿಂದ ಗ್ರಾಮವು ಮತ್ತೆ ಈಗಿರುವ ಜಾಗಕ್ಕೆ ಸ್ಥಳಾಂತರ ಮಾಡಲಾಗಿದೆ. ಹಳೆ ಗ್ರಾಮ ನಿವೇಶನವು ಗ್ರಾಮದ ದಕ್ಷಿಣ ಭಾಗದಲ್ಲಿದೆ.
ಹೆಸರಿನ ಮೂಲ :
ಗ್ರಾಮಕ್ಕೆ ನಾಯಕ ಸಮುದಾಯದ ಬೊಗಳೇರ ಬೆಡಗಿನವರಿಂದ ಹೆಸರು ಬಂದಿದೆ.
ಭೌಗೋಳಿಕ ಲಕ್ಷಣ :
ಭೌಗೋಳಿಕವಾಗಿ ಗ್ರಾಮದ
ಸುತ್ತಮುತ್ತಲಿನ ಪ್ರದೇಶವು ಬಯಲು ಸೀಮೆಯ ವಿಶಾಲ ಮೈದಾನವಾಗಿದ್ದು, ಸಮತಟ್ಟು ಭೂ ಪ್ರದೇಶವೇ ಸುತ್ತಲೂ ಹರಡಿದೆ. ಗ್ರಾಮದ ಪಶ್ಚಿಮಕ್ಕೆ ವಿಶಾಲವಾಗಿ ಹರಡಿರುವ ಸಂಗೇನಹಳ್ಳಿ ಕೆರೆಯಿದ್ದು, ಗ್ರಾಮದ ಅಂತರ್ಜಲ ವೃದ್ಧಿಗೆ ಸಹಕಾರಿಯಾಗಿದೆ.
ಚಿತ್ರದುರ್ಗ ತಾಲೂಕಿನ ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಇದೂ ಒಂದಾಗಿದೆ.
ಹೊಸಪೇಟೆ ರಸ್ತೆಯಲ್ಲಿ ಉತ್ತರ ದಿಕ್ಕಿಗೆ ತಾಲೂಕಿನ ಗಡಿ ಗ್ರಾಮವಾಗಿದೆ. ಮಹಾರಾಷ್ಟ್ರದ ಪಂಡರಾಪುರಕ್ಕೆ ಗ್ರಾಮದಿಂದ ಪ್ರತಿ ವರ್ಷ ಅಪಾರ ಭಕ್ತರು ಪಾದಯಾತ್ರೆ ಕೈಗೊಳ್ಳುತ್ತಾರೆ.
ಕಳೆದ 20 ವರ್ಷಗಳಿಂದ ಇದನ್ನು ನಡೆಸಿಕೊಂಡು ಬರಲಾಗುತ್ತಿದೆ.
ದೇವಾಲಯ ಪರಿಚಯ:
1.ದುರ್ಗಾಂಬಿಕಾ ದೇವಿ ದೇವಸ್ಥಾನ
ಗ್ರಾಮದ ಮಧ್ಯಭಾಗದಲ್ಲಿ ಹಿಂದೆ ಇದ್ದ ದೇವಾಲಯವನ್ನು ತೆಗೆದು ಇದೀಗ ನೂತನವಾಗಿ ಸ್ಥಳೀಯ ಶೈಲಿಯಲ್ಲಿ ದೇವಾಲಯವನ್ನು ನಿರ್ಮಿಸಲಾಗುತ್ತಿದೆ.
ಹಬ್ಬ,ಜಾತ್ರೆಯ ಸಮಯದಲ್ಲಿ ಈ ದೇವರನ್ನು ಹೊರಡಿಸಲಾಗುತ್ತದೆ.
ಪ್ರತಿ 5 ವರ್ಷಕ್ಕೆ ಒಂದು ಬಾರಿ ವಿಜೃಂಭಣೆಯಿಂದ ಈ ದೇವಿಯ ಜಾತ್ರೆಯನ್ನು ನಡೆಸಲಾಗುತ್ತದೆ.
ಈ ಜಾತ್ರೆಗೆ ಸುತ್ತಮುತ್ತಲ ಹತ್ತಾರು ತಾಲೂಕು ಹಾಗೂ ಅಕ್ಕಪಕ್ಕದ ಜಿಲ್ಲೆಗಳ ನಾಯಕ ಸಮುದಾಯದ ಸಾವಿರಾರು ಭಕ್ತರು ಭಾಗವಹಿಸುತ್ತಾರೆ.
2. ಎಲ್ಲಮ್ಮ ದೇವಿ ದೇವಸ್ಥಾನ:
ಗ್ರಾಮದ ಮಧ್ಯಭಾಗದಲ್ಲಿರುವ ಈ ದೇವಾಲಯವು ಪೂರ್ವಾಭಿಮುಖವಾಗಿ ಸ್ಥಳೀಯ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಗರ್ಭಗೃಹ ಹಾಗೂ ಸಭಾಮಂಟಪಗಳಿರುವ ದೇವಾಲಯ ಇದಾಗಿದೆ.
3.ಚಿತ್ರಹಳ್ಳಿ ಯಲ್ಲಮ್ಮ ದೇವಸ್ಥಾನ :
ಗ್ರಾಮದ ಮಧ್ಯ ಭಾಗದಲ್ಲಿರುವ ಈ ದೇವಸ್ಥಾನವು ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇದರಲ್ಲಿ ವೀರಭದ್ರೇಶ್ವರ ದೇವರನ್ನು ಸಹ ಪೂಜಿಸಲಾಗುತ್ತದೆ.
4.ದಡ್ಲ ಮಾರಮ್ಮ ದೇವಸ್ಥಾನ :
ಗ್ರಾಮದ ಮಧ್ಯ ಭಾಗದಲ್ಲಿರುವ ಈ ದೇವಿಯ ದೇವಸ್ಥಾನವು ಸ್ಥಳೀಯ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ.
ಈ ದೇವರ ಜಾತ್ರಾ ಮಹೋತ್ಸವವನ್ನು ಪ್ರತಿವರ್ಷ ಶೂನ್ಯ ಮಾಸದಲ್ಲಿ ನಡೆಸಲಾಗುತ್ತದೆ. ಗ್ರಾಮದ ಪಶ್ಚಿಮಕ್ಕೆ ಇರುವ ಗೋಸೆರಪ್ಪನ ಗುಡ್ಡಕ್ಕೆ ಈ ದೇವರನ್ನು ಉತ್ಸವ ಸಮಯದಲ್ಲಿ ಕರೆದೊಯ್ಯಲಾಗುತ್ತದೆ.






