ಬೆಂಗಳೂರು: ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಂಪುಟ ಸಭೆ ನಡೆದಿದೆ. ಈ ಸಭೆಯಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಅದರಲ್ಲಿ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಕೇಸ್ ಕೂಡ ಚರ್ಚೆಗೆ ಬಂದಿದೆ. ಡಿವೈಎಸ್ಪಿ ಎಂಕೆ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ.ಎನ್.ಕೇಶವ ನಾರಾಯಣ ನೇತೃತ್ವದ ಏಕ ಸದಸ್ಯ ವಿಚಾರಣಾ ಆಯೋಗದ ಶಿಫಾರಸನ್ನು ಸಚಿವ ಸಂಪುಟ ತಿರಸ್ಕಾರ ಮಾಡಿದೆ.
ಈ ಸಂಬಂಧ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಮಾಹಿತಿ ನೀಡಿದ್ದಾರೆ. 2016 ಜುಲೈ 7ರಂದು ಗಣಪತಿ ಅವರು ಮಡಿಕೇರಿಯ ವಿನಾಯಕ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲಾಗಿತ್ತು. ಆನಂತರ ಮುಖ್ಯಮಂತ್ರಿಯ ಆದೇಶದಂತೆ ಈ ಪ್ರಕರಣದ ತನಿಖೆ ನಡೆಸಲು ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಕೆ.ಎನ್.ಕೇಶವ ನಾರಾಯಣ ನೇತೃತ್ವದಲ್ಲಿ ಏಜ ಸದಸ್ಯ ವಿಚಾರಣಾ ಆಯೋಗವನ್ನು ನೇಮಕ ಮಾಡಲಾಗಿತ್ತು. ವಿಚಾರಣಾ ಆಯೋಗವು 2018ರ ಫೆಬ್ರವರಿ 26 ರಂದು ಸರ್ಕಾರಕ್ಕೆ ವರದಿಯನ್ನು ಸಲ್ಲಿಕೆ ಮಾಡಿತ್ತು. ಆ ವರದಿಯಲ್ಲಿನ ಎಂಟು ಭಾಗಗಳ ಕುರಿತು ಅಧ್ಯಯನ ನಡೆಸಿ, ಆ ವರದಿಯಲ್ಲಿನ ಎಲ್ಲಾ ಅಂಶಗಳು ಹಾಗೂ ಶಿಫಾರಸ್ಸುಗಳನ್ನು ಪರಿಶೀಕನೆ ನಡೆಸಿ, ಅಧ್ಯಯನ ವರದಿಯನ್ನು ನೀಡಲು ಸರ್ಕಾರವು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಎಂ.ಕೆ.ಶ್ರೀವಾತ್ಸವ್ ಅವರನ್ನು ನೇಮಿಸಲಾಗಿತ್ತು. ಎಂ.ಕೆ.ಶ್ರೀವಾಸ್ತವ್ ಸರಕಾರಕ್ಕೆ ಸಲ್ಲಿಸಿರುವ ಅಧ್ಯಯನ ವರದಿಯಲ್ಲಿ ತನಿಖಾ ಕ್ರಮಗಳ ಬಗ್ಗೆ ವಿಚಾರಣಾ ಆಯೋಗವು ಮಾಡಿರುವ ಆಕ್ಷೇಪಣೆಗಳನ್ನು, ಸಿಬಿಐ ಸಲ್ಲಿಸಿರುವ ವರದಿಯನ್ನು ಹೈಕೋರ್ಟ್ ಮಾನ್ಯ ಮಾಡಿರುವುದರಿಂದ ಮತ್ತು ಸುಪ್ರಿಂಕೋರ್ಟ್ ಎಸ್.ಎಲ್.ಪಿ ಯಲ್ಲಿ ಸಿ.ಬಿ.ಐ ಪ್ರಕರಣವನ್ನು ಮುಕ್ತಾಯ ಮಾಡಿರುವುದನ್ನು ಎತ್ತಿ ಹಿಡಿದಿರುವುದರಿಂದ, ಅಧಿಕಾರಿಗಳ ವಿರುದ್ಧದ ಇಲಾಖಾ ವಿಚಾರಣೆಯ ಶಿಫಾರಸ್ಸನ್ನು ಒಪ್ಪುವ ಅಗತ್ಯವಿಲ್ಲವೆಂದು ಅಧ್ಯಯನ ವರದಿಯಲ್ಲಿ ತಿಳಿಸಿದ್ದಾರೆ. ಆದುದರಿಂದ, ಕೇಶವ ನಾರಾಯಣ ಆಯೋಗವು ಸಲ್ಲಿಸಿರುವ ವಿಚಾರಣಾ ವರದಿಯನ್ನು ಸಂಪುಟವು ತಿರಸ್ಕಾರ ಮಾಡಿದೆ ಎಂದಿದ್ದಾರೆ.






