ತುಮಕೂರು: ಧರ್ಮಸ್ಥಳದ ಬುರುಡೆ ಕೇಸ್ ಎಲ್ಲಿಂದಲೋ ಎಲ್ಲಿಗೋ ಹೋಗಿ ಇನ್ನೇನೋ ಆಗಿ ನಿಂತಿದೆ. ಚಿನ್ನಯ್ಯ ಹೇಳಿದ್ದಕ್ಕೆ ಎಸ್ಐಟಿ ಕೂಡ ಅಗೆದು ಹಾಕಿತ್ತು. ಆದ್ರೆ ಎಲ್ಲಿಯೂ ನಿರೀಕ್ಷೆ ಮಾಡಿದಂತ ಅಸ್ಥಿಪಂಜರಗಳು ಸಿಕ್ಕಿರಲಿಲ್ಲ. ಅದೇ ಕಾರಣಕ್ಕೆ ಚಿನ್ನಯ್ಯನನ್ನ ಅರೆಸ್ಟ್ ಮಾಡಿರುವ ಎಸ್ಐಟಿ ತನಿಖೆಯನ್ನ ನಡೆಸುತ್ತಿದೆ. ಇದರ ನಡುವೆ ಚಿನ್ನಯ್ಯನ ಹೆಂಡತಿ, ತನಗೆ ಜೀವ ಬೆದರಿಕೆ ಇದೆ. ರಕ್ಷಣೆ ಕೊಡಿ ಎಂದು ಕೇಳಿದ್ದರು. ಈ ಸಂಬಂಧ ಗೃಹ ಸಚಿವ ಜಿ ಪರಮೇಶ್ವರ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ತುಮಕೂರು ದಸರಾ ಉದ್ಘಾಟನೆಯ ಬಳಿಕ ಮಾತನಾಡಿ, ಆ ರೀತಿಯಾಗಿ ಕಂಡು ಬಂದರೆ ಖಂಡಿತವಾಗಲೂ ರಕ್ಷಣೆ ಕೊಡುತ್ತೇವೆ. ಇದು ನಡೆಯುತ್ತಿರುವುದು ಬಹಳ ದೊಡ್ಡ ತನಿಖೆಯಾಗಿದೆ. ಹಾಗಾಗಿ ಸತ್ಯವನ್ನು ಹೊರಗೆ ತರುವುದಕ್ಕೆ ಯಾರಿಗೆ ತೊಂದರೆಯಾಗುತ್ತದೋ ಅವರಿಗೆ ರಕ್ಷಣೆ ಕೊಡೋಣಾ. ಇದರಲ್ಲಿ ಸದ್ಯ ಎಸ್ಐಟಿ ತನಿಖೆಯೇ ಮುಂದುವರೆಯುತ್ತದೆ ಎಂದಿದ್ದಾರೆ.
ಸದ್ಯ ಈ ಕೇಸಲ್ಲಿ ಮಧ್ಯಂತರ ವರದಿಯಾಗಲಿ, ಚಾರ್ಜ್ ಶೀಟ್ ಹಾಕಿದ್ದಾಗಲಿ ಕಾಣಿಸ್ತಾ ಇಲ್ಲ. ಆದಷ್ಟು ಬೇಗ ಮುಗಿಸಿ ಅಂತ ಹೇಳಿದ್ದೇವೆ. ತನಿಖೆಯನ್ನ ನಿರ್ದಿಷ್ಠವಾಗಿ, ಇಷ್ಟೇ ಸಮಯದಲ್ಲಿ ಮುಗಿಸಬೇಕು ಎಂಬುದನ್ನು ಹೇಳುವುದಕ್ಕೆ ಆಗಲ್ಲ. ಆದರೂ ಏನೆಲ್ಲಾ ಪುರಾವೆಗಳು ಸಿಕ್ತಾವೆ ಎಂಬುದನ್ನು ನೋಡಿಕೊಂಡು ಬೇಗ ಮುಗಿಸಿಕೊಡಿ ಎಂದು ಸೂಚನೆ ನೀಡಿದ್ದೇವೆ ಎಂದಿದ್ದಾರೆ.
ಸದ್ಯ ಚಿನ್ನಯ್ಯನ ಬಗ್ಗೆ ಎಸ್ಐಟಿ ತನಿಖೆ ನಡೆಸುತ್ತಿದೆ. ಚಿನ್ನಯ್ಯನಿಗೆ ಸಂಬಂಧಿಸಿದಂತೆ ಆತನಿಗೆ ಆಶ್ರಯ ಕೊಟ್ಟಿದ್ದವರನ್ನು, ಆತನ ಜೊತೆಗೆ ಸಂಪರ್ಕದಲ್ಲಿದ್ದವರನ್ನು ಈಗಾಗಲೇ ತನಿಖೆ ಮಾಡಿದ್ದಾರೆ. ಇದರ ಜೊತೆಗೆ ಮತ್ತೆ ಬಂಗ್ಲ ಗುಡ್ಡದಲ್ಲಿ ಅಗೆದ ಎಸ್ಐಟಿ ಒಂದು ಫೈನಲ್ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ ಬಳಿಕವಷ್ಟೇ ಅಲ್ಲಿ ಏನೆಲ್ಲಾ ಆಗಿದೆ ಎಂಬ ಸತ್ಯ ಜನತೆಗೆ ತಿಳಿಯಲಿದೆ.

