ವಿಶೇಷ ಲೇಖನ
ಡಾ. ಸಂತೋಷ್ ಕೆ. ವಿ.
ಹೊಳಲ್ಕೆರೆ, ಚಿತ್ರದುರ್ಗ
ಮೊ : 9342466936
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕು ಬೂಕನಕೆರೆ ಹೋಬಳಿ ವರಾಹನಾಥ ಕಲ್ಲಹಳ್ಳಿಯಲ್ಲಿರುವ ಭೂವರಾಹನಾಥ ಸ್ವಾಮಿ ದೇವಾಲಯವು ಅತ್ಯಂತ ಪ್ರಾಚೀನ ಪ್ರಸಿದ್ಧ ದೇವಾಲಯವಾಗಿದೆ. ಪ್ರತಿದಿನ ಇಲ್ಲಿಗೆ ಸಾವಿರಾರು ಭಕ್ತರು ರಾಜ್ಯ ಅಂತರ್ರಾಜ್ಯಗಳಿಂದ ಆಗಮಿಸುತ್ತಾರೆ. ಹೊಯ್ಸಳರ ಕಾಲಕ್ಕೆ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಪ್ರದೇಶಗಳಲ್ಲಿ ಬಹಳಷ್ಟು ಈಗ ಕುಗ್ರಾಮಗಳಾಗಿ ಪರಿವರ್ತಿತವಾಗಿವೆ. ಅಂಥದೇ ಸ್ಥಿತಿಯನ್ನು ತಲುಪಿರುವ ಕಲ್ಲಹಳ್ಳಿಯ ಆಕರ್ಷಣೆಯೆಂದರೆ ಭೂವರಾಹನಾಥ ಸ್ವಾಮಿಯ 14 ಅಡಿಯ ಭವ್ಯವಿಗ್ರಹ.
ಐತಿಹ್ಯ:
ಹಿಂದೆ ಈ ಸ್ಥಳವು ಗೌತಮ ಮಹರ್ಷಿಗಳ ತಪೋಭೂಮಿಯಾಗಿತ್ತು, ಮೇಲುಕೋಟೆ ನಂತರ ಇದು ವೈಷ್ಣವ ಪಂಥದವರಿಗೆ ಪವಿತ್ರ ಸ್ಥಳವೆನಿಸಿದೆ. ವಿಷ್ಣುವಿನ ದಶಾವತಾರಗಳಲ್ಲಿ ವರಾಹ (ಹಂದಿ)ಅವತಾರವು ಒಂದಾಗಿದ್ದು,ಮಹಾವಿಷ್ಣುವು ಲೋಕಕಂಟಕನಾಗಿದ್ದ ಹಿರಣ್ಯಾಕ್ಷನನ್ನು ವಧಿಸಲು ಈ ಅವತಾರ ತಾಳಿದನೆಂದು ಪುರಾಣಗಳು ತಿಳಿಸುತ್ತವೆ. ಭೂದೇವಿಯನ್ನು ಅಪಹರಿಸಿ ಪಾತಾಳ ಲೋಕದಲ್ಲಿ ಅಡಗಿಸಿದ್ದ ಹಿರಣ್ಯಾಕ್ಷನನ್ನು ಮಹಾವಿಷ್ಣು ವರಾಹವತಾರ ತಾಳಿ ಆತನನ್ನು ವಧಿಸಿ ಪಾತಾಳದಿಂದ ಹೊರತೆಗೆದು ಭೂದೇವಿಯನ್ನು ರಕ್ಷಿಸುತ್ತಾನೆ. ಲೋಕ ಕಲ್ಯಾಣದ ನಂತರ ವಿಷ್ಣುವು ಈ ಸಂಗಮ ಸ್ಥಳಕ್ಕೆ ಬಂದು ಪುಣ್ಯ ಸ್ನಾನ ಮಾಡಿ ಗೌತಮ ಮಹರ್ಷಿಗಳಿಗೆ ದರ್ಶನ ನೀಡಿದನಂತೆ.
ಶಾಸನದ ವಿವರ:
ಕೃಷ್ಣರಾಜಪೇಟೆ ತಾಲೂಕು ಶಾಸನ ಸಂಖ್ಯೆ 108 ರ ಪ್ರಕಾರ ಹೊಯ್ಸಳರ ದೊರೆ ಮೂರನೆಯ ವೀರ ಬಲ್ಲಾಳನ ಆಳ್ವಿಕೆಯ ಕಾಲದಲ್ಲಿ 1334 ರ ಸೆಪ್ಟೆಂಬರ್ ತಿಂಗಳ 6ನೇ ತಾರೀಕು ಮಂಗಳವಾರದಂದು ಮಹಾಪ್ರಧಾನ ಆದಿ ಸಿಂಗೇಯ ನಾಯಕನು ಕಲ್ಲಹಳ್ಳಿ ಗ್ರಾಮವನ್ನು ಅಗ್ರಹಾರವಾಗಿಸಿ ,ರಾಣಿ ದೇಮಲದೇವಿಯ ಹೆಸರಿನಲ್ಲಿ ದೇಮಲಾಪುರ ಎಂದು ನಾಮಕರಣ ಮಾಡಿ ,ರಾಜಗುರುಗೊಮ್ಮಟ ದೇವನು ದಾನ ಮಾಡಿರುವುದಾಗಿ ತಿಳಿಸುತ್ತದೆ.
ಶಾಸನದಲ್ಲಿ ಸೂರ್ಯ-ಚಂದ್ರ , ಕಮಂಡಲ ,ದೀಪ ಮಾಲೆ ಕಂಬ ಅರ್ಧ ಮಾನವ ಹಾಗು ಅರ್ಧ ಗಂಡ ಭೇರುಂಡ ಪಕ್ಷಿ ಕೆತ್ತನೆಯಿದ್ದು ,ಪಂಜ ಮೇಲೆತ್ತಿ ಗರ್ಜಿಸಿರುವ ಹುಲಿಯ ಕೆತ್ತನೆ ಅದ್ಭುತವಾಗಿದೆ. ಈ ಶಾಸನ ಇದೀಗ ನೂತನವಾಗಿ ನಿರ್ಮಿಸಿರುವ ಶ್ರೀನಿವಾಸನ ದೇವಾಲಯದ ಪಕ್ಕದಲ್ಲಿ ನಿಲ್ಲಿಸಲಾಗಿದೆ. ಇಲ್ಲಿ ಲಭ್ಯವಿರುವ ಒಂದು ಶಾಸನದ ಅನ್ವಯ 1334ರಲ್ಲಿ ಮೂರನೇ ಬಲ್ಲಾಳನು ಇಲ್ಲಿನ ದೇವಾಲಯಕ್ಕೆ ದತ್ತಿ ನೀಡಿರುವ ವಿವರಗಳಿವೆ. ಕೃಷ್ಣರಾಜಸಾಗರ ಅಣೆಕಟ್ಟು ಹಿನ್ನೀರಿನಲ್ಲಿ ಈ ದೇಗುಲವಿದ್ದು, ಕನ್ನಂಬಾಡಿ ಜಲಾಶಯ (ಕೆ.ಆರ್ ಸಾಗರ) ಗರಿಷ್ಟಮಟ್ಟ ತಲುಪಿದಾಗ ಈ ಸ್ಥಳವು ನೀರಿನಿಂದ ಆವೃತವಾಗುತ್ತದೆ. ದೇಗುಲ ಶಿಥಿಲಾವಸ್ಥೆಯಲ್ಲಿರುವುದರಿಂದ, ಈಗ ಹೊಸದೇಗುಲದ ನಿರ್ಮಾಣ ಕಾರ್ಯ ಭಕ್ತರ ಸಹಾಯದಿಂದ, ಪರಕಾಲ ಮಠದ ನೇತೃತ್ವದಲ್ಲಿ ಹಾಗೂ ಸ್ಥಳೀಯರ ಸಹಕಾರದೊಂದಿಗೆ ತ್ವರಿತವಾಗಿ ನಡೆಯುತ್ತಿದೆ.ಹೇಮಾವತಿ ಹಾಗೂ ಕಾವೇರಿ ನದಿಗಳ ಸಂಗಮದ ಹಿನ್ನೀರಿನಲ್ಲಿ ದೇಗುಲ ಸುಂದರವಾಗಿ ಅತ್ಯಂತ ನಯನ ಮನೋಹರವಾಗಿ ಗೋಚರಿಸುತ್ತದೆ.
ಅನೇಕ ಶತಮಾನಗಳ ಪ್ರವಾಹದ ಪರಿಣಾಮವನ್ನು ಎದುರಿಸಿ ನಾಶದ ಅಂಚನ್ನು ತಲುಪಿದ್ದ ಈ ದೇವಾಲಯದ ಹೆಚ್ಚಿನ ಕುರುಹುಗಳು ನಾಶವಾಗಿವೆ. ಆದರೆ ಇಲ್ಲಿ ಮೂರು ಅಡಿ ಎತ್ತರದ ಪೀಠದಲ್ಲಿರುವ 14 ಅಡಿ ಎತ್ತರದ ಭವ್ಯ ವರಾಹಸ್ವಾಮಿಯ ಕಪ್ಪುಬಣ್ಣದ ಶಿಲಾವಿಗ್ರಹವು ಹೊಯ್ಸಳ ಶಿಲ್ಪಿಗಳ ಕಲ್ಪನಾವಿಲಾಸ ಮತ್ತು ದೂರದೃಷ್ಟಿಗಳಿಗೆ ಸಾಕ್ಷಿಯಾಗಿ ನಿಂತಿದೆ.
ಶಿಲ್ಪವು ಕಿರೀಟ, ಕರ್ಣಕುಂಡಲ, ಕೊರಳಲ್ಲಿ ಕಂಠಿಹಾರ,ಮಣಿಸರ, ಯಜ್ಞೋಪವಿತ, ಕಾಲು , ಕೈ ಕಡಗಗಳಿಂದ ಅಲಂಕೃತಗೊಂಡಿದೆ. 4 ಕೈಗಳಿದ್ದು ಅಭಯ,ಪದ್ಮ,ಚಕ್ರ ಶಂಖಗಳಿವೆ. ತೊಡೆಯ ಮೇಲೆ ಕುಳಿತಿರುವ ಭೂದೇವಿಯ ಕಟಿಯನ್ನು ಮತ್ತೊಂದು ಕೈ ಬಳಸಿದೆ.ಹಿರಣ್ಯಕಶಿಪುವಿನಿಂದ ಭೂದೇವಿಯನ್ನು ರಕ್ಷಿಸಿದ ಈ ಐತಿಹ್ಯವು ಶಿಲ್ಪಕಲೆಯಲ್ಲಿ ವಿವಿಧ ರೂಪಗಳಲ್ಲಿ, ವಿವಿಧ ಪ್ರದೇಶಗಳಲ್ಲಿ, ವಿವಿಧ ಶಿಲ್ಪಿಗಳಿಂದ ಅದ್ಭುತವಾಗಿ ದೇಶಾದ್ಯಂತ ರಚನೆಯಾಗಿದೆ. ಸುಖಾಸನದಲ್ಲಿ ಕುಳಿತಿರುವ ಇಲ್ಲಿನ ವರಾಹಸ್ವಾಮಿಯ ಜತೆ ಭೂದೇವಿಯ ವಿಗ್ರಹ ತನ್ನ ಗಾತ್ರ ಮತ್ತು ಸೌಂದರ್ಯಗಳಿಂದ ಮನಸೆಳೆಯುತ್ತದೆ. ಹೊರನೋಟದಿಂದ ಹೊಯ್ಸಳರ ದೇವಾಲಯ ಎಂದೆನ್ನಿಸುವುದಿಲ್ಲ. ಏಕೆಂದರೆ ಮೂಲ ದೇವಾಲಯವು ಎಂದೋ ಬಿದ್ದುಹೋಗಿದ್ದರೂ, ಅದರಲ್ಲಿನ ವಿಗ್ರಹದ ಸೌಂದರ್ಯ ಮತ್ತು ಅದರ ಸೂಕ್ತ ನಿರ್ವಹಣೆಯ ಕಾರಣದಿಂದಾಗಿ ಇಂದಿಗೂ ಜನರನ್ನು ಆಕರ್ಷಿಸುತ್ತಿದೆ. ವಿಗ್ರಹದ ಪಕ್ಕದಲ್ಲಿರುವ ಅಟ್ಟಣಿಗೆಯ ನೆರವಿನಿಂದ, ವಿಗ್ರಹಕ್ಕೆ ಪೂಜೆ, ಮಂಗಳಾರತಿ, ಅಲಂಕಾರಗಳನ್ನು ಮಾಡಲಾಗುವುದು.
ಮಣ್ಣು ಹಾಗೂ ಇಟ್ಟಿಗೆ ಪೂಜೆ :
ಜನರು ಮನೆ ಕಟ್ದುವಲ್ಲಿ ಉಂಟಾಗುವ ತೊಂದರೆಗಳ ಪರಿಹಾರಾರ್ಥವಾಗಿ ಇಟ್ಟಿಗೆಗಳನ್ನು ಇಲ್ಲಿಗೆ ತಂದು ಪೂಜಿಸಿಕೊಂಡು ತೆರಳುವರು. ಒಂದು ಇಟ್ಟಿಗೆಯನ್ನು ದೇವಾಲಯದ ಮುಂಭಾಗದಲ್ಲಿ ಇಡಬೇಕು. ಮತ್ತೊಂದು ನಮ್ಮ ನೂತನ ಮನೆ ಕಟ್ಟುವ ಮುಂಚೆ ಅಥವಾ ಯಾವುದಾದರೂ ಭೂಮಿ ಕೆಲಸ ಮಾಡುವ ಮುಂಚೆ ಅದನ್ನು ಈಶಾನ್ಯ ದಿಕ್ಕಿನಲ್ಲಿ ಇಟ್ಟು ನಂತರ ಆ ಇಟ್ಟಿಗೆಯಿಂದ ಮನೆಕಟ್ಟುವುದನ್ನು ಆರಂಭಿಸಿದರೆ ಕಾರ್ಯವು ಸುಸೂತ್ರವಾಗಿ ನೆರವೇರುವುದೆಂಬುದು ನಂಬಿಕೆಯಿದೆ.
ಜೊತೆಗೆ ದೇವಾಲಯದ ಪಕ್ಕದಲ್ಲಿರುವ ಮಣ್ಣಿನ ಗುಡ್ಡೆಯಿಂದ ಮೂರು ಹಿಡಿ ಮಣ್ಣು ತೆಗೆದುಕೊಂಡು ಅದನ್ನು ದೇವಾಲಯದಲ್ಲಿ ಸಂಕಲ್ಪ ಪೂಜೆ ಮಾಡಿಸಿಕೊಂಡು ತೆಗೆದುಕೊಂಡು ಹೋಗಿ ನಮ್ಮ ಮನೆಯಲ್ಲಿರುವ ದೇವರ ಕೋಣೆಯಲ್ಲಿಟ್ಟು ಪೂಜಿಸಿದರೆ ನಮ್ಮ ಮನೆ, ಭೂಮಿ, ಜಮೀನು,ಕಟ್ಟಡ ವಾಣಿಜ್ಯ ಸಂಕೀರ್ಣ.. ಮುಂತಾದ ಭೂ ಸಂಬಂಧಿತ ಎಲ್ಲಾ ಸಮಸ್ಯೆಗಳಿಗೆ ಶೀಘ್ರ ಪರಿಹಾರ ದೊರಕುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಪ್ರತಿನಿತ್ಯ ಸಾವಿರಾರು ಭಕ್ತರು ಇಲ್ಲಿ ಸಂಕಲ್ಪ ಪೂಜೆ ಮಾಡಿಸಿಕೊಂಡು ಹೋಗುತ್ತಾರೆ. ಕೆಲಸ ನೆರವೇರಿದ ನಂತರ ಮತ್ತೆ ವಾಪಸ್ ಬಂದು ಇಲ್ಲಿ ಹರಕೆ ತೀರಿಸುತ್ತಾರೆ. ಸಾವಿರಾರು ಜನರ ಹರಕೆಗಳು ನೆರವೇರಿದ ಬಗ್ಗೆ ಇಲ್ಲಿಗೆ ಭೇಟಿ ಕೊಟ್ಟವರು ತಿಳಿಸುತ್ತಾರೆ.
ಪ್ರತಿವರ್ಷ ವರಾಹ ಜಯಂತಿಯನ್ನು ಏಪ್ರಿಲ್- ಮೇ ತಿಂಗಳಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಪ್ರತಿ ಶನಿವಾರ,ಕಾರ್ತಿಕ ಸೋಮವಾರಗಳಲ್ಲಿ ವಿಶೇಷ ಪೂಜೆಗಳು ನೆರವೇರುತ್ತವೆ. ಬಂದ ಭಕ್ತರಿಗೆ ಪ್ರತಿ ದಿನ ಅನ್ನದಾಸೋಹ ನಡೆಯುತ್ತದೆ. ಮೈಸೂರಿನ ಪರಕಾಲ ಮಠದ ಶ್ರೀಗಳು ಶ್ರೀನಿವಾಸ ರಾಘವನ್ ರವರ ನೇತೃತ್ವದಲ್ಲಿ ಶಿಥಿಲಗೊಂಡಿದ್ದ ದೇಗುಲವನ್ನು ಭಕ್ತರ ಸಹಕಾರದೊಂದಿಗೆ ಪುನರ್ ನಿರ್ಮಿಸಲಾಗುತ್ತಿದೆ.
ಮೈಸೂರಿನ ಬಸ್ ನಿಲ್ದಾಣದಿಂದ ಇಲ್ಲಿಗೆ ಬಸ್ ಸೇವೆ ಲಭ್ಯವಿದೆ. ಕೆ.ಆರ್.ಪೇಟೆ – ಹೊಸಹೊಳಲು- ವಿಠಲಪುರ, ಪಾಂಡವಪುರ -ಬಲ್ಲೇನಹಳ್ಳಿ – ಗಂಜಿಗೆರೆ ಮಾರ್ಗದಿಂದಲೂ ಇಲ್ಲಿಗೆ ತಲುಪಬಹುದು. ಸ್ವಂತ ವಾಹನದಲ್ಲಿ ಹೋಗಿ ಬರುವುದು ಉತ್ತಮ.







