ರಾಜ್ಯಾದ್ಯಂತ ಜೋರು ಮಳೆಯಾಗುತ್ತಿದೆ. ಮುಂದಿನ ಎರಡು ದಿನಗಳ ಕಾಲ ಮತ್ತಷ್ಟು ಮಳೆ ಜೋರಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಬಹುತೇಕ ಭಾಗದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಮಳೆ ಬೆಳೆ ನಂಬಿಕೊಂಡಿದ್ದ ಅದೆಷ್ಟೋ ರೈತರು ಹೊಲಗಳಿಗೆ ಗೊಬ್ಬರ ಹಾಕಿ ಮಳೆಗಾಗಿ ಕಾಯುತ್ತಾ ಕೂತಿದ್ದರು. ಸದ್ಯ ವರುಣರಾಯ ಕೃಪೆ ತೋರಿದ್ದು, ಜೋರು ಮಳೆಯಾಗುತ್ತಿದೆ.
ಕರ್ನಾಟಕದ ಮೂರು ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡಕ್ಕೆ ಯಾವುದೇ ಅಲರ್ಟ್ ನೀಡಿಲ್ಲ. ಉಳಿದಂತೆ ರಾಜ್ಯ ಎಲಗಲಾ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ಜಾರಿ ಮಾಡಲಾಗಿದೆ. ಅದರಲ್ಲೂ ಮುಂದಿನ ಎರಡು ದಿನ ಬಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ. ಮಳೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದ್ದು, ಕೆಲವು ಜಿಲ್ಲೆಗಳಲ್ಲಿ 115 ಮಿ.ಮೀವರೆಗೆ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ತಿಳಿಸಿದೆ.
ಹೀಗಾಗಿ ಯೆಲ್ಲೋ ಅಲರ್ಟ್ ನಡುವೆಯೂ ಕೆಲವು ಜಿಲ್ಲೆಗಳಿಗೆ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ನಾಗರಿಕರು ಎಚ್ಚರದಿಂದ ಇರುವಂತೆ ಸೂಚನೆ ನೀಡಲಾಗಿದೆ. ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಕೊಪ್ಪಳ ಭಾಗದಲ್ಲಿ ಗಾಳಿ, ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ವರದಿ ಕೊಟ್ಟಿದೆ. ಸಿಲಿಕಾನ್ ಸಿಟಿಯಲ್ಲಂತು ಮಳೆ ಕಡಿಮೆಯಾಗುವಂತೆ ಕಾಣಿಸುತ್ತಿಲ್ಲ. ಸರಿಯಾಗಿ ಸಂಜೆ ವೇಳೆಗೆ ಕಳೆದ ಎರಡು ದಿನಗಳಿಂದ ಮಳೆ ಸುರಿಯುತ್ತಿದೆ. ಇದರಿಂದ ಕಚೇರಿಯಿಂದ ಹೊರಡುವ ಕೆಲಸಗಾರರಿಗೆ ಸಮಸ್ಯೆಯಾಗುತ್ತಿದೆ. ಬೆಂಗಳೂರಿನಲ್ಲಿ ನಾಳೆ ಹಾಗೂ ನಾಡಿದ್ದು ಎರಡು ದಿನ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.


