ನಮ್ಮೂರು ನಮ್ಮ ಹೆಮ್ಮೆ | ದಾವಣಗೆರೆ : ಮಾಯಕೊಂಡ ಗ್ರಾಮದ ಪರಿಚಯ

10 Min Read

ವಿಶೇಷ ಲೇಖನ
ಡಾ. ಸಂತೋಷ್ ಕೆ. ವಿ.
ಹೊಳಲ್ಕೆರೆ, ಚಿತ್ರದುರ್ಗ
ಮೊ : 9342466936

ಸುದ್ದಿಒನ್ :
ಮಾಯಕೊಂಡ ಗ್ರಾಮವು ಪಂಚಾಯತಿ ಹಾಗೂ ಹೋಬಳಿ ಮುಖ್ಯ ಕೇಂದ್ರವಾಗಿದ್ದು, ದಾವಣಗೆರೆಯಿಂದ 34 ಕಿಲೋಮೀಟರ್ ದೂರ ಆಗ್ನೇಯಕ್ಕೆ ದಾವಣಗೆರೆ -ಆನಗೋಡು- ಮಾಯಕೊಂಡ ಮಾರ್ಗದಲ್ಲಿದೆ.

ಹೆಸರಿನ ಮೂಲ :
ಗ್ರಾಮದ ಹೆಸರು ಭೌಗೋಳಿಕ ಲಕ್ಷಣದ ಕಾರಣಕ್ಕೆ ಬಂದಿದ್ದು, ಮಾಯ+ಕೊಂಡ ಎರಡು ಕೂಡಿಕೊಂಡು ಮಾಯಕೊಂಡ ಪದದ ವ್ಯುತ್ಪತ್ತಿಯಾಗಿದೆ. ಮಾಯ ಎಂದರೆ ದಾರಿ ತಪ್ಪಿಸುವ, ಪ್ರೀತಿಯ, ತುಂಬಾ ಸೊಗಸಾದ ಇಷ್ಟವಾದ, ವಂಚನೆಯ, ದಾರಿ ಕಾಣದ.. ಹೀಗೆ ನಾನಾ ಅರ್ಥಗಳಲ್ಲಿ ಮಾಯ ಪದವನ್ನು ವಿಶ್ಲೇಷಿಸಬಹುದು. ಕೊಂಡ ಎಂದರೆ ಗ್ರಾಮದ ಪೂರ್ವ ದಿಕ್ಕಿನಲ್ಲಿ ಇರುವ ಬೆಟ್ಟ ಸಾಲುಗಳು.
ಮಾಯಕೊಂಡವೆಂದರೆ ದಾರಿ ತಪ್ಪಿಸುವ ಬೆಟ್ಟ,ಪ್ರೀತಿಯ ಮನಸ್ಸಿಗೆ ಇಷ್ಟವಾಗುವ (ಸ್ಥಳ) ಬೆಟ್ಟ.. ಹೀಗೆ ಅರ್ಥೈಸಬಹುದು. ಗ್ರಾಮದಲ್ಲಿರುವ ಶಾಸನಗಳು 10 -11ನೇ ಶತಮಾನಗಳಿಂದಲೂ ಗ್ರಾಮವು ಇರುವ ಬಗ್ಗೆ ತಿಳಿಸುತ್ತದೆ. ಆದರೆ ಅಂದು ಈ ಗ್ರಾಮಕ್ಕೆ ಯಾವ ಹೆಸರಿತ್ತು ಎಂಬುದನ್ನು ಶಾಸನ ತಜ್ಞರು ಇಲ್ಲಿರುವ ಶಾಸನಗಳನ್ನು ಓದಿ ತಿಳಿಸಬೇಕಾಗಿದೆ. ಇದೇ ಹೆಸರಿನ ಮತ್ತೊಂದು ಮಾಯಕೊಂಡ ಗ್ರಾಮವು ಉಡುಪಿ ಜಿಲ್ಲೆ ಕುಂದಾಪುರದಲ್ಲಿದೆ. ಈ ಹೆಸರಿನ ಎರಡು ಗ್ರಾಮಗಳು ಬಿಟ್ಟರೆ ಕರ್ನಾಟಕದ ಬೇರೆ ಎಲ್ಲೂ ಈ ಹೆಸರಿನ ಗ್ರಾಮಗಳಿರುವುದಿಲ್ಲ.

ಗ್ರಾಮಕ್ಕೆ ಹಳೆ ಗ್ರಾಮ ನಿವೇಶನ ಇರುವ ಬಗ್ಗೆ ಸ್ಥಳೀಯರಿಗೆ ಮಾಹಿತಿ ಇರುವುದಿಲ್ಲ. ಗ್ರಾಮದ ಬಾವಿಹಾಳ್ ರಸ್ತೆಯಲ್ಲಿರುವ ಡೊಂಕೇನಹಳ್ಳಿ,
ಪೂರ್ವದಿಕ್ಕಿನಲ್ಲಿರುವ ತಿಮ್ಮಲಾಪುರ, ಹಿಂಡಸಕಟ್ಟೆ ರಸ್ತೆಯಲ್ಲಿರುವ ಪಿಟ್ಟನಹಳ್ಳಿ, ಪಶ್ಚಿಮಕ್ಕೆ ಬಾಡ ರಸ್ತೆಯಲ್ಲಿರುವ ಗುಜ್ಜಿಕೊಂಡ.. ಬೇಚರಾಕ್ ಗ್ರಾಮಗಳಾಗಿದ್ದು ಇಲ್ಲಿನ ಜನವಸತಿ ಮಾಯಕೊಂಡ ಗ್ರಾಮಕ್ಕೆ ಸ್ಥಳಾಂತರಗೊಂಡಿದೆ ಎನ್ನಲಾಗುತ್ತದೆ.

 

ಭೌಗೋಳಿಕ ಲಕ್ಷಣ :
ಭೌಗೋಳಿಕವಾಗಿ ಗ್ರಾಮದ ಸುತ್ತಮುತ್ತಲಿನ ಪ್ರದೇಶವು ಬಯಲು ಸೀಮೆಯ ವಿಶಾಲ ಮೈದಾನವಾಗಿದ್ದು, ಸಮತಟ್ಟು ಭೂ ಪ್ರದೇಶವೇ ಸುತ್ತಲೂ ಹರಡಿದೆ. ಅಲ್ಲಲ್ಲಿ ಏರಿಳಿತ ಇರುವ ಭೂಪ್ರದೇಶಗಳು ಕಂಡುಬರುತ್ತದೆ. ಗ್ರಾಮದ ಪೂರ್ವಕ್ಕೆ ಪುಡುಕಲಹಳ್ಳಿ ಗುಡ್ಡಸಾಲುಗಳು ಕಂಡು ಬರುತ್ತವೆ.ಇವು ಹೊಸದುರ್ಗದಿಂದ ಹೊರಟು ಉಚ್ಚಂಗಿದುರ್ಗದವರೆಗೆ ಹಬ್ಬಿದೆ. ಉತ್ತರಕ್ಕೆ ಬಾವಿಹಾಳ್ ರಸ್ತೆಯಲ್ಲಿ ತಿಮ್ಮಪ್ಪನ ಗುಡ್ಡವಿದೆ. ಇಲ್ಲಿನ ಗುಡ್ಡ ಸಾಲುಗಳ ಪ್ರತಿ ಗುಡ್ಡಕ್ಕೂ ಪ್ರತ್ಯೇಕ ಹೆಸರಿದೆ. ಕಲಿಯುವಾಗಿ ಇದನ್ನು ಬಾವಿಹಾಳು ಗುಡ್ಡ , ಬುಳ್ಳಾಪುರದ ಗುಡ್ಡ,ಹೆದ್ನೆ ಗುಡ್ಡ,ರಾಂಪುರದ ಗುಡ್ಡ ಎಂದು ಹೆಸರಿಸಲಾಗಿದೆ. ಗ್ರಾಮದ ಪೂರ್ವ ದಿಕ್ಕಿನಲ್ಲಿ ಇರುವ ಗುಡ್ಡ ಸಾಲುಗಳಿಂದ ಹರಿದು ಬರುವ ನೀರು ಕೆರೆಗಳಿಗೆ ತಲುಪುತ್ತದೆ ಹಾಗೂ ಮುಂದೆ ಇದು ಗ್ರಾಮದ ಹುಚ್ಚವ್ವನಹಳ್ಳಿ ರಸ್ತೆಯಲ್ಲಿರುವ ಕರ್ಲ್ಲಹಳ್ಳ ಹಾಗೂ ಇಟ್ಟಿಗೆ ಹಳ್ಳಗಳ ಮೂಲಕ ಹರಿದು ಶ್ಯಾಗಲೆ ಹಳ್ಳಕ್ಕೆ ಸೇರುತ್ತದೆ.

ಐತಿಹಾಸಿಕ ಶಾಸನಸ್ಥ ಗ್ರಾಮ :
ಹಿಂದೆ ಈ ಗ್ರಾಮವು ಚಾಲುಕ್ಯ, ಹೊಯ್ಸಳರ ಆಳ್ವಿಕೆಗೆ ಒಳಪಟ್ಟಿದ್ದು ವಿಜಯನಗರದ ಅರಸರ ಕಾಲದಲ್ಲಿ ಉನ್ನತ ಸ್ಥಿತಿಯಲ್ಲಿದ್ದಿತು.
ಗ್ರಾಮದಲ್ಲಿರುವ ಶಾಸನಗಳು ಹಾಗೂ ವೀರಗಲ್ಲುಗಳಿಂದ ಅನೇಕ ಐತಿಹಾಸಿಕ ಅಂಶಗಳು ತಿಳಿದು ಬರುತ್ತದೆ.

ಕೋಟೆ ಪ್ರದೇಶ :
ಮಾಯಕೊಂಡ ಗ್ರಾಮದ ಪಶ್ಚಿಮಕ್ಕೆ ಹಿಂದೆ ಕೋಟೆ ಇದ್ದ ಪ್ರದೇಶವಿದ್ದಿತು. ಗ್ರಾಮದ ಸುತ್ತಲೂ ಕೋಟೆಯ ಗೋಡೆಯು ಆವೃತವಾಗಿದ್ದ ಬಗ್ಗೆ ಗ್ರಾಮಸ್ಥರು ತಿಳಿಸುತ್ತಾರೆ. ಆದರೆ ಇಂದು ಕೋಟೆಯ ಅವಶೇಷಗಳು ಮಾತ್ರ ಅಲ್ಲಲ್ಲಿ ಕಂಡುಬರುತ್ತವೆ, ಕೋಟೆಯ ಬಹುಪಾಲು ನಾಶವಾಗಿದೆ. ಚಿತ್ರದುರ್ಗ ಸಂಸ್ಥಾನದ ಗಡಿ ಕಾವಲು ಕೋಟೆ ಇದಾಗಿತ್ತು. ಚಿತ್ರದುರ್ಗ ತಾಲೂಕಿನ ಪುಡುಕಲಹಳ್ಳಿ ಗ್ರಾಮದಲ್ಲಿ ಇರುವ ಕಾವಲುಬತೇರಿ ಕಡೆಗೆ ಸೈನಿಕರು ಇಲ್ಲಿನ ಕೋಟೆಯಿಂದ ಶತ್ರುಗಳ ದಾಳಿಯ ಬಗ್ಗೆ ಎಚ್ಚರಿಕೆಯ ಸಂದೇಶ ನೀಡುತ್ತಿದ್ದರು.

ಚಿತ್ರದುರ್ಗ ಸಂಸ್ಥಾನದ ಅತ್ಯಂತ ಆಯಕಟ್ಟಿನ ಪ್ರಮುಖ ಸ್ಥಳ ಇದಾಗಿತ್ತು. ಹಿಂದೆ ಇಲ್ಲಿನ ಮಹಿಳೆಯರು ಕಾವಲು ಕಾಯುತ್ತಿದ್ದ ಸೈನಿಕರಿಗೆ ಅನ್ನ, ಆಹಾರ,ನೀರು,ಅಂಬಲಿ ಕೊಟ್ಟು ಸಹಾಯ ಮಾಡುತ್ತಿದ್ದರಂತೆ. ಚನ್ನಗಿರಿ ತಾಲೂಕು ಬಸವಾಪಟ್ಟಣದ ಕೊಂಗಣ್ಣ ನಾಯಕ (ಕೆಂಗಳನಾಯಕನ) ತನ್ನ ಆಡಳಿತದ ಕಾಲದಲ್ಲಿ ತನ್ನ ರಾಜ್ಯವನ್ನು ಮಾಯಕೊಂಡದವರೆಗೂ ವಿಸ್ತರಿಸಿದ್ದನೆಂದು ಐತಿಹಾಸಿಕ ದಾಖಲೆಗಳಿಂದ ತಿಳಿದುಬರುತ್ತದೆ. ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರು ಗಡಿಗಳ ಮೇಲೆ ಗಮನವಿಡಲು ಫೌಜ್ದಾರಿ ಅಥವಾ ತುಕಡಿಗಳನ್ನು ರಚಿಸಿದ್ದರು. ಅದರಲ್ಲಿ ಚಿತ್ರದುರ್ಗ ತುಕಡಿಯು ಒಂದಾಗಿದ್ದು ಈ ತುಕಡಿಯಲ್ಲಿ 13 ತಾಲ್ಲೂಕುಗಳು ಸೇರಿದ್ದು ಅದರಲ್ಲಿ ಮಾಯಕೊಂಡವು ಒಂದಾಗಿತ್ತು.

 

ಮಾಯಕೊಂಡದ ಯುದ್ಧ :
ಚಿತ್ರದುರ್ಗವನ್ನು ಆಳುತ್ತಿದ್ದ ಹಿರೇಮೆದಕೇರಿ ನಾಯಕನ ಹಾಗೂ ಹರಪನಹಳ್ಳಿಯ ಪಾಳೆಯಗಾರ ಸೋಮಶೇಖರನಾಯಕನಿಗೂ ಘನಘೋರ ಯುದ್ಧ ನಡೆದ ಸ್ಥಳ ಮಾಯಕೊಂಡ. 1748 ರಲ್ಲಿ ಹರಪನಹಳ್ಳಿಯ ಪಾಳೆಯಗಾರ ಸೋಮಶೇಖರ ನಾಯಕನು ಕೆಳದಿ ಬಸಪ್ಪ ನಾಯಕರ ಸೂಚನೆಯಂತೆ ಚಿತ್ರದುರ್ಗ ಸಂಸ್ಥಾನಕ್ಕೆ ಸೇರಿದ್ದ ಮಾಯಕೊಂಡ ಕೋಟೆಗೆ ಮುತ್ತಿಗೆ ಹಾಕಿದ್ದಾಗ ಮಾಯಕೊಂಡದ ಮೈದಾನದಲ್ಲಿ ಹಿರೇಮೆದಕೇರಿ ನಾಯಕನಿಗೂ ಸೋಮಶೇಖರ ನಾಯಕನಿಗೂ ಯುದ್ಧ ನಡೆಯುತ್ತದೆ. ಈ ಯುದ್ಧದಲ್ಲಿ ಚಿತ್ರದುರ್ಗದ ಹಿರೇಮೆದಕೇರಿನಾಯಕನು ವೀರ ಮರಣವನ್ನಪ್ಪುತ್ತಾನೆ. ಆದರೂ ಮಾಯಕೊಂಡದ ಕೋಟೆ ಹರಪನಹಳ್ಳಿಯವರಿಗೆ ಸಿಗಲಿಲ್ಲ. ಹಿರೇಮೆದಕೇರಿ ನಾಯಕನ ಪುತ್ರ ಕಸ್ತೂರಿರಂಗಪ್ಪನಾಯಕನು ಹರಪನಹಳ್ಳಿಯವರನ್ನು ಸದೆ ಬಡಿದು ಸೋಲಿಸಿದನು.

18-2-1749 ರಲ್ಲಿ ಮಾಯಕೊಂಡದ ಮುಖ್ಯ ಪ್ರಾಣ ದೇವರ ತೋಟದಲ್ಲಿ ಹಿರೇಮೆದಕೇರಿ ನಾಯಕನ ಶವ ಸಂಸ್ಕಾರ ಮಾಡಿ ಇಲ್ಲಿಯೇ ಸಮಾಧಿ ಕಟ್ಟಲಾಗಿದೆ. ಇದರ ಬಳಿಯಲ್ಲಿಯೇ ಆನೆ ಹಾಗೂ ಕುದುರೆಯ ಸಮಾಧಿಗಳು ಕತ್ತಿಗಳು ದೊರಕಿವೆ.
ಈ ಯುದ್ಧದ ಬಗ್ಗೆ ಮಾಯಕೊಂಡದ ಲಡಾಯಿ ಎಂಬ ಲಾವಣಿಯನ್ನು ಜನರು ಕಟ್ಟಿ ಹಾಡಿದ್ದಾರೆ.

ವೀರಗಲ್ಲುಗಳು :
ಗ್ರಾಮದ ಈಶ್ವರ ದೇವಾಲಯದ ಹಿಂಭಾಗದ ಮನೆ ಸಾಲುಗಳ ಹಿಂಭಾಗದಲ್ಲಿ ವೀರಗಲ್ಲುಗಳಿದ್ದು, ಇವೆಲ್ಲದರ ಸಂರಕ್ಷಣೆಯ ಅಗತ್ಯತೆ ಇರುತ್ತದೆ. ಇದರಲ್ಲಿನ 1 ವೀರಗಲ್ಲು ಅತ್ಯಂತ ಅಪರೂಪ, ಹಳೆಯದಾದ, ದೊಡ್ಡದಾದ ವೀರಗಲ್ಲಾಗಿದೆ ಎಂದು ಸಂಶೋಧಕರಾದ ಮಹೇಶ್ ಕುಂಚಿಗನಾಳ ಹೇಳುತ್ತಾರೆ. ಇದನ್ನು ಸಂರಕ್ಷಣೆ ಮಾಡುವ ಅಗತ್ಯತೆ ಇರುತ್ತದೆ. ಅದರಲ್ಲಿನ ಒಂದು ವೀರಕಲ್ಲು ಶಾಸನೊಕ್ತ ವೀರಗಲ್ಲಾಗಿದ್ದು ಇದು 1283 ರಲ್ಲಿ ಹೊಯ್ಸಳರ ಚಕ್ರವರ್ತಿ ವೀರನರಸಿಂಹ ದೇವರಾಯನ ಕಾಲದ ಶಾಸನವಾಗಿದೆ.

ಕೊಡಗನೂರಿನ ಕಲಿಕುಮಾರ ಮಾರ ನರಸಿಂಹನು ಯುದ್ಧದಲ್ಲಿ ಶೌರ್ಯದಿಂದ ಹೋರಾಡಿ ವೀರ ಮರಣ ಹೊಂದುತ್ತಾನೆ. ಇವರ ಜೊತೆಗೆ ಮಲೆಬೆನ್ನೂರು ಶೆಟ್ಟಿವೊ ನಾಯಕನ ಅಳಿಯನು ಇವನ ಜೊತೆಗೆ ವೀರ ಮರಣವನ್ನು ಬಳಹದ ಕರಡಿ ಬಯಲಿನಲ್ಲಿ ವೀರ ಮರಣವನ್ನು ಅಪ್ಪುತ್ತಾನೆ ಎಂದು ದಾಖಲಿಸಿದೆ. ಇದರ ಬಗ್ಗೆ ಚಿತ್ರದುರ್ಗ ಜಿಲ್ಲೆಯ ಶಾಸನ ಸಂಪುಟ ದಾವಣಗೆರೆ ತಾಲೂಕು 137 ಶಾಸನ ವಿವರದಲ್ಲಿ ಇದರ ಬಗ್ಗೆ ಮಾಹಿತಿ ಇದೆ.
ಹಿಂದೆ ಇಲ್ಲಿ ಇದ್ದ ಸರ್ವೇಶ್ವರ ದೇಗುಲವು ಇಂದು ನಾಮಾಶೇಷವಾಗಿದ್ದು, ವೀರಗಲ್ಲುಗಳನ್ನೇ ಸರ್ವೇಶ್ವರ ಎಂದು ಕರೆಯುತ್ತಾರೆ. ಈ ದೇಗುಲವು ಎಲ್ಲಿ ಇದ್ದೀತು ಎಂಬುದರ ಬಗ್ಗೆ ಸ್ಥಳೀಯರಿಗೆ ಮಾಹಿತಿ ಇರುವುದಿಲ್ಲ. ಸರ್ವೇಶ್ವರ ದೇಗುಲದಲ್ಲಿ ನಾಲ್ಕು ವೀರಗಲ್ಲುಗಳು ಹಾಗೂ ಒಂದು ಗಣೇಶನ ಶಿಲ್ಪಗಳಿವೆ. ಇಲ್ಲಿನ ಎರಡು ವೀರಗಲ್ಲುಗಳು ಆಯುಧಗಳನ್ನು ಹಿಡಿದು ನಿಂತ ವೀರಯೋಧರ ಸ್ಮಾರಕ ಶಿಲ್ಪಗಳಾಗಿವೆ. ಉಳಿದ ಎರಡು ವೀರಗಲ್ಲುಗಳಲ್ಲಿ ಒಂದು ಗೋಗ್ರಹಣ,ಇನ್ನೊಂದು ಕಾಳಗದಲ್ಲಿ ಹೋರಾಡಿ ಮಾಡಿದ ವೀರರ ಕಲ್ಲುಗಳಾಗಿವೆ. ವೀರಗಲ್ಲುಗಳ ಮಧ್ಯದ ಹಂತದಲ್ಲಿ ಸುರಕನ್ಯೆಯರು, ವೀರರನ್ನು ಕೈಲಾಸಕ್ಕೆ ಕೊಂಡೊಯ್ಯುತ್ತಿರುವುದು. ಕೈಲಾಸದಲ್ಲಿ ಶಿವಪೂಜೆಯಲ್ಲಿ ಧ್ಯಾನಾಸಕ್ತ ವೀರರ ಚಿತ್ರಗಳನ್ನು ಕಡೆಯಲಾಗಿದೆ. ಇವು ಕೂಡ 13-14 ಶತಮಾನಕ್ಕೆ ಸೇರಿವೆ. ಗಣೇಶ ಶಿಲ್ಪವು ಹೊಯ್ಸಳರ ಕಾಲಕ್ಕೆ ಸೇರಿದೆ. ಅದರ ಬಳಿ ಇರುವ ಕತ್ತಿ ಗುರಾಣಿ ಹಿಡಿದಿರುವ ಯೋಧನ ಶಿಲ್ಪವು ವಿಜಯನಗರ ಕಾಲಕ್ಕೆ ಸೇರಿದೆ. ಗ್ರಾಮದ ಆಂಜನೇಯ ಸ್ವಾಮಿ ದೇವಾಲಯದ ಎದುರಿನಲ್ಲಿ ಮಹಾಸತಿ ಕಲ್ಲು ಇದ್ದು,ಇದು 13 ರಿಂದ 14ನೇ ಶತಮಾನದ ವಿಜಯನಗರ ಕಾಲಕ್ಕೆ ಸೇರಿದೆ.

ಪ್ರಾಚೀನ ಗರಡಿ ಮನೆಗಳು :
ಗ್ರಾಮವು ಹಿಂದಿನಿಂದಲೂ ಯೋಧರ ನೆಲೆಬೀಡಾಗಿದ್ದು, ಹೆಚ್ಚಿನ ಯೋಧರ ತರಬೇತಿಯನ್ನು ಇಲ್ಲಿ ನಡೆಸಲಾಗುತ್ತಿತ್ತು. ಇದಕ್ಕೆ ಪೂರಕವಾಗಿರುವಂತೆ ಯೋಧರ ದೈಹಿಕ ದೃಢತೆಗಾಗಿ ಗರಡಿ ಮನೆಗಳಿರುತ್ತಿತ್ತು. ಹಿಂದೆ ಹತ್ತಕ್ಕೂ ಅಧಿಕ ಗರಡಿ ಮನೆಗಳು ಇದ್ದವೆಂದು ಹೇಳಲಾಗುತ್ತದೆ.ಆದರೆ ಇಂದು ಮೂರು ಮಾತ್ರ ಇದ್ದು ಇದರಲ್ಲಿ ಪೇಟೆ ಗರಡಿಮನೆಯನ್ನು 1818 ರಲ್ಲಿ ನಿರ್ಮಿಸಲಾಗಿದ್ದು ಇಂದಿಗೂ ಇಲ್ಲಿ ಸ್ಥಳೀಯ ದೇಸಿ ವ್ಯಾಯಾಮವನ್ನು, ದೈಹಿಕ ದೃಢತೆಗಾಗಿ ಕಸರತ್ತು ಹಾಗೂ ಸಾಮು ನಡೆಸಲಾಗುತ್ತದೆ. ಮರಳು ಹಾಗೂ ಮಣ್ಣಿನ ಆವರಣದಲ್ಲಿ ದೈಹಿಕ ಅಂಗ ಕಸರತ್ತು ಪ್ರಧಾನವಾಗಿ ಇಲ್ಲಿ ಕಂಡು ಬರುತ್ತದೆ. ಎಷ್ಟೇ ಆಧುನಿಕ ಜಿಮ್ ಗಳು ತಲೆಯೆತ್ತಿದ್ದರೂ ಕೂಡ ಇಲ್ಲಿ ಇಂದಿಗೂ ದೇಸಿ ವ್ಯಾಯಾಮ ಸಲಕರಣೆಗಳನ್ನು ಕಾಣಬಹುದು.

ಟಿ ಕೆ ರಾಮರಾವ್ : ಮಾಯಕೊಂಡದ ಶ್ರೀ ರಾಮರಾಯರು ಖ್ಯಾತ ಸಾಹಿತಿಗಳಾಗಿದ್ದು ಶಿಶು ಸಾಹಿತ್ಯ ರಚನಾಕಾರರಾಗಿ ಪ್ರಬಂಧಗಳನ್ನು, ಕವಿತೆಗಳನ್ನು ಲೇಖನಗಳನ್ನು ಇಂಗ್ಲಿಷ್ ಜಾನಪದ ಕಥೆಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಇಂಗ್ಲಿಷ್ ನಿಘಂಟು ವಿನ ಪ್ರಧಾನ ಸಂಪಾದಕರಾಗಿದ್ದರು.

ಆನೆ ಅಂಬಾರಿ ಉತ್ಸವ :
ಪ್ರತಿ ವರ್ಷ ದಸರಾ ಸಮಯದ ವಿಜಯದಶಮಿ ದಿನದಂದು ಈ ಗ್ರಾಮದ ಆಂಜನೇಯ ದೇವಾಲಯದ ಎದುರು ಭಾಗದಲ್ಲಿ ಕೃತಕ ಆನೆಗಳ ಜಂಬೂ ಸವಾರಿ ಹಾಗೂ ಅಂಬಾರಿ ಉತ್ಸವವನ್ನು ನಡೆಸಲಾಗುತ್ತದೆ. ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗುವ ಈ ಉತ್ಸವದಲ್ಲಿ ಎರಡು ಗಂಡು ಆನೆ ಹಾಗೂ ಒಂದು ಹೆಣ್ಣು ಆನೆಯನ್ನು ಕೃತಕವಾಗಿ ನಿರ್ಮಿಸಿ ಎತ್ತಿನ ಬಂಡಿಗಳಿಗೆ ಅವುಗಳನ್ನು ಜೋಡಿಸಲಾಗುತ್ತದೆ. ಪೇಟೆ ಗರಡಿಆನೆ, ಉಪ್ಪಾರಹಟ್ಟಿಯ ಆನೆ,ಕುರುಬರಹಟ್ಟಿಯ ಆನೆ… ಗಳೆಂದು ಇವುಗಳನ್ನು ಹೆಸರಿಸಲಾಗುತ್ತದೆ. ಹೆಣ್ಣು ಆನೆಯ ಮೇಲ್ಭಾಗದಲ್ಲಿ ದುರ್ಗಮ್ಮ ದೇವಿಯನ್ನು ಅಲಂಕೃತ ಮಂಟಪದಲ್ಲಿ ಕೂರಿಸಿ ಮೆರವಣಿಗೆ ನಡೆಸಲಾಗುತ್ತದೆ. ಮೈಸೂರು ದಸರಾ ಜಂಬೂ ಸವಾರಿಯಂತೆ ಈ ಗ್ರಾಮದಲ್ಲಿ ಕೂಡ ಅದೇ ರೀತಿ ಕೃತಕ ಆನೆಗಳನ್ನು ಬಳಸಿ ನಡೆಸಲಾಗುತ್ತದೆ. ಹತ್ತಿರದ ಯಾವುದೇ ಗ್ರಾಮಗಳಲ್ಲಿ ಕೂಡ ಇಂತಹ ವಿಶೇಷ ಆಚರಣೆ ಕಂಡು ಬರುವುದಿಲ್ಲ.

ದೇವಾಲಯ ಪರಿಚಯ:

1.ಉಬ್ಬಲ ನರಸಿಂಹ ದೇವಾಲಯ: (ಓಬಳೇಶ್ವರ)
ಗ್ರಾಮದ ಹುಚ್ಚವ್ವನಹಳ್ಳಿ ರಸ್ತೆಯಲ್ಲಿರುವ ಕಾಲೇಜಿನ ಹಿಂಭಾಗದಲ್ಲಿ ಇರುವ ಉಬ್ಬಲ ನರಸಿಂಹ
(ಅಹೋಬಲ,ಓಬಳ,) ದೇವಾಲಯವು ಜೀರ್ಣಾವಸ್ಥೆ ತಲುಪಿದ್ದು ಜೀರ್ಣೋದ್ಧಾರದ ಅವಶ್ಯಕತೆ ಇರುತ್ತದೆ.
ಈ ದೇವಾಲಯಕ್ಕೆ ಪೂರ್ವ ಹಾಗೂ ದಕ್ಷಿಣದ ಪ್ರವೇಶ ದ್ವಾರಗಳಿವೆ. ದೇವಾಲಯದ ಮುಂಭಾಗದಲ್ಲಿ ದೀಪಸ್ತಂಭವಿದೆ. ಗರ್ಭಗೃಹ ಹಾಗೂ ಸಭಾಮಂಟಪಗಳಿರುವ ದೇವಾಲಯ ಇದಾಗಿದೆ. ಗರ್ಭಗೃಹದಲ್ಲಿ ಉದ್ಭವ ಶಿಲ್ಪವಿದ್ದು ಇದನ್ನು ನರಸಿಂಹಸ್ವಾಮಿ, ಓಬಳೇಶ್ವರ, ಅಹೋಬಲದೇವರು ಮಾಲ್ಯನ ದೇವರು,ಸೋಮೇಶ್ವರ ಎಂದು ಪೂಜಿಸಲಾಗುತ್ತದೆ.

16- 17ನೇ ಶತಮಾನದಲ್ಲಿ ವಿಜಯನಗರ ಶೈಲಿಯಲ್ಲಿ ನಿರ್ಮಿಸಲಾದ ಈ ದೇವಾಲಯವು ಗ್ರಾಮದ ಪ್ರಾಚೀನ ದೇವಾಲಯವಾಗಿದೆ. ವಿಜಯನಗರ ಶೈಲಿಯಲ್ಲಿ ಪಾಳೇಗಾರರ ಕಾಲದಲ್ಲಿ ನಿರ್ಮಾಣ ಮಾಡಲಾದ ದೇವಾಲಯ ಇದಾಗಿದೆ. ಗರ್ಭಗೃಹ,ಅಂತರಾಳ, ಅರ್ಧಮಂಟಪ,ನವರಂಗ, ಮುಖ ಮಂಟಪಗಳನ್ನು ಈ ದೇವಾಲಯವು ಹೊಂದಿದೆ. ಸ್ವಾಭಾವಿಕವಾದ ಕಲ್ಲು ಬಂಡೆ ಗಾಗಿ ಸುಂದರವಾದ ದೇವಾಲಯವನ್ನು ನಿರ್ಮಿಸಿರುವುದು ಗಮನಾರ್ಹವಾಗಿದೆ. ಇದನ್ನು ಓಬಳೇಶ್ವರನೆಂದು ಆರಾಧಿಸಲಾಗುತ್ತದೆ. ಗರ್ಭಗೃಹದ ಬಾಗಿಲುವಾಡದ ಇಕ್ಕೆಲಗಳಲ್ಲಿ ಭಕ್ತ ಮತ್ತು ಕೋಲು ಹಿಡಿದು ಸೊಂಟದ ಮೇಲೆ ಕೈಯನ್ನು ಇಟ್ಟುಕೊಂಡ ವ್ಯಕ್ತಿಯ ಶಿಲ್ಪಗಳಿವೆ. ನವರಂಗದಲ್ಲಿ ಎರಡು ದ್ವಾರಗಳಿದ್ದು ವೈಷ್ಣವ ದ್ವಾರಪಾಲಕರು ಹಾಗೂ ಲಕ್ಷ್ಮಿಯ ಶಿಲ್ಪಗಳಿವೆ. ನವಂಗ ರಂಗದಲ್ಲಿ ಚಿತ್ರ ಕಾಂಡ ಕಂಬಗಳನ್ನು ನಿಲ್ಲಿಸಲಾಗಿದ್ದು, ಇದರಲ್ಲಿ ಕಾಲಭೈರವ, ಲಕ್ಷ್ಮಿನಾರಾಯಣ, ಆಂಜನೇಯ, ಕುಸ್ತಿಪಟು, ಗಣೇಶ,ಸಿಂಹ,ಬಾಲಕೃಷ್ಣ, ಕಾಳಿಂಗ ಮರ್ಧನ,ಕುದುರೆ ಸವಾರಿ, ಸರ್ಪಣ ಸುಂದರಿ, ಮಿಥುನ ಶಿಲ್ಪ, ವೇಣುಗೋಪಾಲ,ವಿಷ್ಣು, ಕಾಮಧೇನು,ಮತ್ಸ್ಯಾವತಾರ.. ಮೊದಲಾದ ಉಬ್ಬು ಶಿಲ್ಪಗಳಿವೆ.

2.ಈಶ್ವರ (ಬಸವೇಶ್ವರ )ದೇವಾಲಯ:
ಗ್ರಾಮದ ಮಧ್ಯಭಾಗದಲ್ಲಿರುವ ಈ ದೇವಾಲಯ ಪಾಳೆಗಾರರ ಶೈಲಿಯಲ್ಲಿ 17-18 ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದೆ. ಗರ್ಭಗೃಹ ಹಾಗೂ ಸಭಾಮಂಟಪಗಳಿರುವ ಈ ದೇವಾಲಯದ ಗರ್ಭಗೃಹದಲ್ಲಿ ಈಶ್ವರ ಲಿಂಗವನ್ನು ಪೂಜಿಸಲಾಗುತ್ತದೆ.

3.ಆಂಜನೇಯ ಸ್ವಾಮಿ ದೇವಾಲಯ:
ಗ್ರಾಮದ ಮಧ್ಯಭಾಗದಲ್ಲಿರುವ ಈ ದೇವಾಲಯ ಮೂಲತಃ ಪಾಳೆಗಾರರ ಶೈಲಿಯಲ್ಲಿ 16 ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಹಳೆಯ ದೇವಾಲಯವನ್ನು ತೆಗೆದು ಪುನರ್ ನಿರ್ಮಾಣ ಮಾಡಲಾಗಿದೆ. ಈ ದೇವಾಲಯದ ಗರ್ಭಗೃಹದಲ್ಲಿ ವ್ಯಾಸರಾಯ ಪ್ರತಿಷ್ಠಾಪಿತ ಆಂಜನೇಯ ಸ್ವಾಮಿಯನ್ನು ಪೂಜಿಸಲಾಗುತ್ತದೆ.

ಮಾಘಮಾಸದ ವಿಭವ ಸಂವತ್ಸರ ಹತ್ತನೇ ತಾರೀಕಿನಂದು ಮಲೆನಾಡಿನ ಕಡೆಯವರು ಇಲ್ಲಿನ ಕೋಟೆಗೆ ಮುತ್ತಿಗೆ ಹಾಕಿದ್ದಾಗ ಕೋಟೆ ಕಾವಲಿಗೆ ಇದ್ದ ನಾಗಜ್ಜನಾಯಕ, ಕಟನಾಯಕನ ಮಗ ಭರಮಣ್ಣ, ದಳವಾಯಿಗಳು ರಾಣಿವೇ ಗುರಿಕಾರರು ಕಾದಾಡಿದ್ದರ ನೆನಪಿಗಾಗಿ ಕಂದನಕೋವಿ ಭರಮಣ್ಣನು ಕಸ್ತೂರಿ ರಂಗಪ್ಪನಾಯಕನ ಅಪ್ಪಣೆಯಂತೆ ವೀರ ಹನುಮಂತ ದೇವರಿಗೆ ನೀಡಿದ ಗಂಟೆಯೊಂದು ಇದೀಗ ಚಿತ್ರದುರ್ಗ ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿದೆ. ಮಾಯಕೊಂಡದ ಕೋಟೆಯನ್ನು ಸತತ ಎರಡು ತಿಂಗಳ ಕಾಲ ಶತ್ರುಗಳ ಜೊತೆಗೆ ಹೋರಾಡಿ ರಕ್ಷಿಸಿದ್ದರಂತೆ.

ದೇವಾಲಯದ ಎದುರು ಭಾಗದಲ್ಲಿ ಮಾಸ್ತಿಕಲ್ಲು ಹಾಗೂ ಶಿಲ್ಪಾವಶೇಷಗಳನ್ನು ಕಾಣಬಹುದು. ಶ್ರಾವಣ ಮಾಸದಲ್ಲಿ ವಿಶೇಷ ಪೂಜೆಗಳನ್ನು ಇಲ್ಲಿ ನಡೆಸಲಾಗುತ್ತದೆ.ಜೊತೆಗೆ ಬಾವಿಹಾಳ್ ರಸ್ತೆಯಲ್ಲಿರುವ ತಿಮ್ಮಪ್ಪನ ಗುಡ್ಡದಲ್ಲಿ ಇರುವ ತಿಮ್ಮಪ್ಪ ದೇವರಿಗೆ ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ.

4.ಕರಿಯಮ್ಮ ದೇವಸ್ಥಾನ :
ಗ್ರಾಮದ ಮಧ್ಯಭಾಗದಲ್ಲಿ ಪೂರ್ವಾಭಿಮುಖವಾಗಿ ಸ್ಥಳೀಯ ಶೈಲಿಯಲ್ಲಿ ಈ ದೇವರ ದೇವಾಲಯವನ್ನು ನಿರ್ಮಿಸಲಾಗಿದೆ.

5.ಮೈಲಾರ ಲಿಂಗೇಶ್ವರ ಸ್ವಾಮಿ ದೇವಾಲಯ:
ಗ್ರಾಮದ ಮಧ್ಯಭಾಗದಲ್ಲಿ ಸ್ಥಳೀಯ ಶೈಲಿಯಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ.

6.ಪಾಂಡುರಂಗ ಹಾಗೂ ರುಕ್ಮಿಣಿ ದೇವಾಲಯ
ಗ್ರಾಮದ ಮಧ್ಯಭಾಗದಲ್ಲಿ ಪೂರ್ವಾಭಿಮುಖವಾಗಿ ಸ್ಥಳೀಯ ಶೈಲಿಯಲ್ಲಿ ಈ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ.
ಗರ್ಭಗೃಹ ಹಾಗೂ ಸಭಾ ಮಂಟಪಗಳಿರುವ ಈ ದೇವಾಲಯದ ಗರ್ಭಗೃಹದಲ್ಲಿ ಪಾಂಡುರಂಗ ಹಾಗೂ ರುಕ್ಮಿಣಿಯನ್ನು ಪೂಜಿಸಲಾಗುತ್ತದೆ.

7.ಕಾಳಮ್ಮ ದೇವಿ ದೇವಾಲಯ :
ಗ್ರಾಮದ ಮಧ್ಯಭಾಗದಲ್ಲಿ ಪೂರ್ವಾಭಿಮುಖವಾಗಿ ಈ ದೇವಾಲಯ ನಿರ್ಮಿಸಲಾಗಿದೆ.

8.ವೀರಭದ್ರೇಶ್ವರ ದೇವಾಲಯ :
ಗ್ರಾಮದ ಮಧ್ಯಭಾಗದಲ್ಲಿ ಪೂರ್ವಾಭಿಮುಖವಾಗಿ ಈ ದೇವಾಲಯ ನಿರ್ಮಿಸಲಾಗಿದ್ದು, ಗರ್ಭಗೃಹದಲ್ಲಿ ವೀರಭದ್ರೇಶ್ವರ ಸ್ವಾಮಿಯನ್ನು ಪೂಜಿಸಲಾಗುತ್ತದೆ.

9.ಮೂಗಬಸಪ್ಪ ದೇವಾಲಯ :
ಗ್ರಾಮದಿಂದ ಕಂದಗಲ್ ಗೆ ಹೋಗುವ ರಸ್ತೆಯ ಬದಿಯಲ್ಲಿ ಈ ದೇವಾಲಯವಿದೆ. ಗರ್ಭಗೃಹದಲ್ಲಿ ಈಶ್ವರ ಲಿಂಗವನ್ನು ಪೂಜಿಸಲಾಗುತ್ತದೆ.
ದೇವಾಲಯದ ಮುಂಭಾಗದಲ್ಲಿ ನಂದಿಯ ಶಿಲ್ಪವಿದೆ.

10.ಬೀರಲಿಂಗೇಶ್ವರ ಸ್ವಾಮಿ ದೇವಾಲಯ :
ಗ್ರಾಮದಿಂದ ದೊಡ್ಡ ಮಾಗಡಿಗೆ ಹೋಗುವ ರಸ್ತೆಯ ಎಡ ಭಾಗದಲ್ಲಿ ಈ ದೇವಾಲಯವಿದ್ದು, ಗರ್ಭಗೃಹ ಹಾಗೂ ಸಭಾಮಂಟಪಗಳಿದ್ದು, ಗರ್ಭಗೃಹದಲ್ಲಿ ಬೀರಲಿಂಗೇಶ್ವರ ಸ್ವಾಮಿ ದೇವರನ್ನು ಪೂಜಿಸಲಾಗುತ್ತದೆ. ಹಿಂದೆ ಹತ್ತಿರದಲ್ಲಿ ಇದರ ಪುರಾತನ ದೇವಾಲಯವಿದ್ದು, ಅದನ್ನು ತೆಗೆದು ಇದೀಗ ಈ ದೇವಾಲಯವನ್ನು ನೂತನವಾಗಿ ನಿರ್ಮಾಣ ಮಾಡಲಾಗಿದೆ.

11.ಚನ್ನಕೇಶವ ದೇವಾಲಯ :
ಗ್ರಾಮದ ಮಧ್ಯಭಾಗದಲ್ಲಿರುವ ಕೇಶವ ದೇವಾಲಯವು ಪೂರ್ವಾಭಿಮುಖವಾಗಿದ್ದು, ಗರ್ಭಗೃಹ ಹಾಗೂ ಸಭಾಮಂಟಪಗಳಿವೆ.

12. ಶ್ರೀರಾಮ ದೇವಾಲಯ :
ಗ್ರಾಮದ ಮಧ್ಯ ಭಾಗದಲ್ಲಿರುವ ಶ್ರೀರಾಮ ದೇವಾಲಯವು ಉತ್ತರಾಭಿಮುಖವಾಗಿದ್ದು, ಗರ್ಭಗೃಹದಲ್ಲಿ ಶ್ರೀರಾಮನನ್ನು ಪೂಜಿಸಲಾಗುತ್ತದೆ.

13.ದೊಣ್ಣೆ ಕೆಂಚಮ್ಮ ದೇವಾಲಯ :
ದಾವಣಗೆರೆ ರಸ್ತೆಯ ರೈಲ್ವೆ ಗೇಟ್ ಹತ್ತಿರದಲ್ಲಿ ಈ ದೇವಾಲಯವಿದ್ದು ಪ್ರತಿ ವರ್ಷ ವಾರ್ಷಿಕ ಗ್ರಾಮದ ಪರೇವು ಆಚರಣೆ ಇಲ್ಲಿ ನಡೆಸಲಾಗುತ್ತದೆ.

14.ಹಾದಿ ಹೊನ್ನಮ್ಮ ದೇವಾಲಯ :
ಗ್ರಾಮದ ಮಧ್ಯಭಾಗದಲ್ಲಿ ಸ್ಥಳೀಯ ಶೈಲಿಯಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ.

15.ದುರ್ಗಾಂಬಿಕಾ ದೇವಿ ದೇವಾಲಯ :
ಗ್ರಾಮದ ಮಧ್ಯಭಾಗದಲ್ಲಿ ಸ್ಥಳೀಯ ಶೈಲಿಯಲ್ಲಿ ಈ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ.

16.ಗಡಿದುರ್ಗಮ್ಮ ದೇವಾಲಯ: ಗ್ರಾಮದಿಂದ ಬುಳ್ಳಾಪುರ ರಸ್ತೆಗೆ ಹೋಗುವ ಮಾರ್ಗದಲ್ಲಿ ಈ ದೇವಾಲಯವಿದೆ.

ಇದರ ಜೊತೆಯಲ್ಲಿ ಪೇಟೆ ದುರ್ಗಮ್ಮ ದೇವಾಲಯ, ಸಿದ್ದಾರೂಢ ಮಠ, ಗೌರಸಂದ್ರ ಮಾರಮ್ಮ,ಮುಸ್ಲಿಮರ ಮಸೀದಿ ಇದೆ.

Share This Article