ಬೆಂಗಳೂರು: ಸಮೀರ್ ಎಂಡಿ ಅಂದ್ರೆ ಒಂದು ವಿಡಿಯೋ ಮಾಡುವುದಕ್ಕೂ ಮುನ್ನ ಒಂದಷ್ಟು ಜನರಿಗೆ ಮಾತ್ರ ಗೊತ್ತಿತ್ತು. ಆದ್ರೆ ಅದ್ಯಾವಾಗ ಸೌಜನ್ಯ ಸಾವಿನ ಬಗ್ಗೆ ಧ್ವನಿ ಎತ್ತಿದ ಸಮೀರ್ ಒಂದು ವಿಡಿಯೋ ಮಾಡಿದ್ದರು. ಅಲ್ಲಿಂದ ಸಿಕ್ಕಾಪಟ್ಟೆ ಖ್ಯಾತಿ ಪಡೆದರು. ಬಳಿಕ ಧರ್ಮಸ್ಥಳದ ಬಗ್ಗೆಯೂ ವಿಡಿಯೋಗಳನ್ನ ಮಾಡಿದ್ದ ಕಾರಣಕ್ಕೆ ಎಸ್ಐಟಿ ತನಿಖೆ ನಡೆಸುತ್ತಿದೆ. ಎಸ್ಐಟಿ ತನಿಖೆ ಆದ್ಮೇಲೆ ಮೊದಲ ಬಾರಿಗೆ ಮಾತನಾಡಿದ್ದು, ಕಣ್ಣೀರು ಹಾಕಿದ್ದಾರೆ.
ಯಾವಾಗಲೂ ಸ್ಟುಡಿಯೋದಲ್ಲಿ ಕ್ಯಾಮಾರಾ ಮುಂದೆ ಕೂತು ವಿಡಿಯೋ ಮಾಡ್ತಾ ಇದ್ದೆ. ಇವತ್ತು ಕಾರಲ್ಲಿ ಕೂತು ವಿಡಿಯೋ ಮಾಡ್ತಾ ಇದ್ದೇನೆ. ಪ್ರಾಮಾಣಿಕವಾಗಿ ನಾನು ಹೇಳ್ತಿದ್ದೇನೆ. ಇವತ್ತು ನನಗೆ ಮನೆ ಇಲ್ಲ. ಯಾವುದೋ ಒಂದು ಪುಟ್ಟ ಬಾಡಿಗೆ ಮನೆಯಲ್ಲಿ ಇದ್ದೆವು. ಆದ್ರೆ ಪೊಲೀಸರು ತನಿಖೆ ಅಂತ ಮನೆಗೆ ಬಂದರು, ನಂತರದ ದಿನಗಳಲ್ಲಿ ಮನೆಯ ಮಾಲೀಕರು ನಮ್ಮನ್ನ ಮನೆಯಿಂದ ಖಾಲಿ ಮಾಡಿಸಿದರು. ಈಗ ಸಮೀರ್ ಎಂಡಿ ಎಂದರೆ ಯಾರೂ ಕೂಡ ಮನೆ ಕೊಡ್ತಾ ಇಲ್ಲ. ಹೆದರಿಕೊಳ್ತಾ ಇದ್ದಾರೆ. ಕಳೆದ ಒಂದು ತಿಂಗಳಿನಿಂದ ನಾನು ನನ್ನ ತಾಯಿ ಅಲೆದಾಡುತ್ತಿದ್ದೇವೆ ಎಂದಿದ್ದಾರೆ.
ನಾನು ಸತ್ಯ, ನ್ಯಾಯದ ಪರವಾಗಿ ಹೋರಾಟ ಮಾಡಿದ್ದೀನಿ. ಹೆಣ್ಣು ಮಕ್ಕಳಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಸಿಗಲಿ ಎಂದು ಶಕ್ತಿ ಮೀರಿ ಪ್ರಯತ್ನ ಪಟ್ಟಿದ್ದೀನಿ. ಎಸ್ಐಟಿ ರಚನೆ ಆದಾಗಲೇ ಅರ್ಧ ಕೆಲಸ ಮುಗಿದಿದೆ. ಎಸ್ಐಟಿ ಇದೆ ಆ ದೇವರು ಇದ್ದಾರೆ. ನಂಗೆ ವಿದೇಶದಿಂದ ಫಂಡ್ ಬಂದಿದೆ ಎಂಬ ಆರೋಪವಿದೆ. ಆದರೆ ನನಗೆ ಯಾವುದೇ ಫಂಡ್ ಬಂದಿಲ್ಲ ಎಂದೇ ಹೇಳಿದ್ದಾರೆ.

















